ಕೋಳಿ ಸಮಾಜದ ಹೋರಾಟಕ್ಕೆ ಸಂಪೂರ್ಣ ಬೆಂಬಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
* *ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ 904ನೇ ಜಯಂತಿ ಉತ್ಸವದಲ್ಲಿ ಹೇಳಿಕೆ*
ಪ್ರಗತಿವಾಹಿನಿ ಸುದ್ದಿ, *ಬೆಳಗಾವಿ* : ಪರಿಶಿಷ್ಠ ಪಂಗಡಕ್ಕೆ ಸೇರಿಸಬೇಕೆಂದು ಕೋಳಿ ಸಮಾಜ ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದ್ದು, ಹಿಂದುಳಿದ ವರ್ಗಗಳ ನೇತಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೋಳಿ ಸಮಾಜಕ್ಕೆ ಸೂಕ್ತ ಸ್ಥಾನಮಾನ ನೀಡುವರು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ನಡೆದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ 904ನೇ ಜಯಂತಿ ಉತ್ಸವದಲ್ಲಿ ಮಾತನಾಡಿದ ಸಚಿವರು, ಸಮಾಜದಲ್ಲಿ ಯಾರು ಜಾತಿ ಭೇದ ಮಾಡದೆ ಒಗ್ಗಟ್ಟಿನಿಂದ ಹೋಗಬೇಕು ಎಂದು ಕರೆನೀಡಿದರು.
ಜಾತಿ ವ್ಯವಸ್ಥೆ ವಿರುದ್ಧ ಸಿಡಿದೆದ್ದು ಆವತ್ತಿನ ಕಾಲದಲ್ಲೆ ಬಸವಣ್ಣನವರು ಕ್ರಾಂತಿಯನ್ನು ಮಾಡಿದ್ದರು. ಸಮಾಜದ ಮೇಲ್ವರ್ಗ, ಮೌಢ್ಯದ ವಿರುದ್ಧ ಹೋರಾಡಿದವರು ಬಸವಣ್ಣ. ಎಲ್ಲ ಸಮುದಾಯದವರು ಮುಂದೆ ಬರಬೇಕು, ಎಲ್ಲರಿಗೂ ಸ್ಥಾನಮಾನ ಸಿಗಬೇಕು ಎಂದು ಕಾಳಜಿ ವಹಿಸಿದ ನಿಸ್ವಾರ್ಥ ವ್ಯಕ್ತಿ ಬಸವಣ್ಣ, ಶರಣ ಸಮೂಹದ ಪೈಕಿ ತಮ್ಮ ವಚನಗಳ ಮೂಲಕ ಚಾಟಿ ಏಟು ನೀಡುತ್ತಿದ್ದ ಧೀರ ಶರಣ ಅಂಬಿಗರ ಚೌಡಯ್ಯ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಮರಿಸಿದರು. ಎಲ್ಲ ಸಮಾಜದವರಿಗೆ ಲಿಂಗಧಾರಣೆ ಮಾಡುವ ಮೂಲಕ ಸಮಾನತೆ ತರಲು ಬಸವಣ್ಣನವರು ಪ್ರಯತ್ನಿಸಿದವರು ಎಂದರು.
ಬೆಳಗಾವಿಯಲ್ಲಿ ಕೋಳಿ, ಬೆಸ್ತ, ಕರಾವಳಿ ಭಾಗದಲ್ಲಿ ಮೊಗವೀರ ಅಂತ ಕರೆಸಿಕೊಳ್ಳುವ ಈ ಸಮುದಾಯದ ಧೈರ್ಯ ಮೆಚ್ಚುವಂಥದ್ದು, ಇಂತಹ ಸಮುದಾಯಕ್ಕೆ ವಿಶೇಷ ರಕ್ಷಣೆ ಮತ್ತು ಇವರ ವೃತ್ತಿಗೆ ವಿಶೇಷ ಸೌಲಭ್ಯ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಹೇಳಿದರು.
ಮುಖ್ಯವಾಗಿ ಸಂಘಟಿತರಾಗಿ ತಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳಬೇಕು. ಬೆಸ್ತರ ಸಮುದಾಯವನ್ನು ಕೂಡ ಸಮಾಜದ ಮುಖ್ಯವಾಹಿನಿಯಲ್ಲಿ ಬರಲು ಸರ್ಕಾರ ವಿಶೇಷ ಸವಲತ್ತುಗಳನ್ನು ಕಲ್ಪಿಸಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ