ಪ್ರಗತಿವಾಹಿನಿ ಸುದ್ದಿ; ಮೈಸೂರು: ಜೆಡಿಎಸ್ ಹಿರಿಯ ಶಾಸಕ ಜಿ.ಟಿ.ದೇವೇಗೌಡರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರೇ ಸ್ವತ: ಅಖಾಡಕ್ಕಿಳಿದಿದ್ದು, ಜಿ.ಟಿ.ಡಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ದೇವೇಗೌಡರ ಪ್ರಯತ್ನ ಫಲಪ್ರದವಾಗಿದ್ದು, ಜೆಡಿಎಸ್ ನಲ್ಲಿಯೇ ಇರುವುದಾಗಿ ಜಿ.ಟಿ.ಡಿ ಘೋಷಿಸಿದ್ದಾರೆ.
ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರುವುದಾಗಿ ಈ ಹಿಂದೆ ಜಿ.ಟಿ.ದೇವೇಗೌಡ ತಿಳಿಸಿದ್ದರು. ಅಲ್ಲದೇ ಕೆಲ ಬಿಜೆಪಿ ನಾಯಕರು ಕೂಡ ಜಿಟಿಡಿಯವರೊಂದಿಗೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಇಂದು ಮೈಸೂರಿನ ಜಿ.ಟಿ.ದೇವೇಗೌಡ ನಿವಾಸಕ್ಕೆ ಸ್ವತ: ಹೆಚ್.ಡಿ.ದೇವೇಗೌಡರು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ನಾಯಕರು ಭೇಟಿ ನೀಡಿ ಸಮಾಲೋಚನೆ ನಡೆಸಿದರು. ಈ ವೇಳೆ ಮಾತನಾಡಿದ ಜಿ.ಟಿ ದೇವೇಗೌಡ, ದಯವಿಟ್ಟು ನನ್ನನ್ನು ಕ್ಷಮಿಸಿ ನಾನು ಜೆಡಿಎಸ್ ನಲ್ಲಿಯೇ ಇರುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಬಿಜೆಪಿ ನಾಯಕರಿಗೆ ಕ್ಷಮೆ ಕೇಳಿದರು.
ಎಲ್ಲಾ ಪಕ್ಷದವರೂ ನನ್ನನ್ನು ಕರೆದಿದ್ದಾರೆ. ದಯವಿಟ್ಟು ಕ್ಷಮಿಸಿ ನಾನು ಜೆಡಿಎಸ್ ಬಿಟ್ಟು ಬರುವುದಿಲ್ಲ ಎಂದಿದ್ದೇನೆ ಎಂದರು. ಕಾಂಗ್ರೆಸ್ ನಿಂದ ಸಿದ್ದರಾಮಯ್ಯನವರೂ ನನ್ನನ್ನು ಕರೆದಿದ್ದಾರೆ. ಬಿಜೆಪಿಯವರೂ ನನಗೆ ಬಂದು ಬಿಡಿ ಎಂದಿದ್ದಾರೆ. ಆದರೆ ನಾನು ಎಲ್ಲಿಯೂ ಹೋಗಲ್ಲ. ಜೆಡಿಎನ್ ನಲ್ಲೇ ಇರುತ್ತೇನೆ. ನಾನು ಜೆಡಿಎಸ್ ಪಕ್ಷದಿಂದ ಬೆಳೆದಿದ್ದೇನೆ. ಜೆಡಿಎಸ್ ಕಟ್ಟುವುದೇ ನಮ್ಮ ಗುರಿ ಎಂದು ಹೇಳಿದರು.
ಮೂರು ವರ್ಷ ನಾನು ದೂರ ಇದ್ದಾಗಲೂ ದೇವೇಗೌಡರು ನನ್ನನ್ನು ತಪ್ಪಾಗಿ ಅರ್ಥೈಸಲಿಲ್ಲ. ಜಿಟಿಡಿ ನಮ್ಮ ಹೆಸರು ಉಳಿಸುತ್ತಾರೆ ಎಂದು ನಂಬಿದ್ದಾರೆ. ಜಿಟಿಡಿ ಮರಿ ದೇವೇಗೌಡ ಎಂದೇ ಕರೆಯುತ್ತಾರೆ ಎಂದು ಕಣ್ಣೀರಾದರು. ರಾಜ್ಯದಲ್ಲಿ ನೀರಾವರಿ ಅಭಿವೃದ್ಧಿಗೊಳಿಸಿದ್ದು ದೇವೇಗೌಡರು. ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿ ಮಾಡಿದರು. ರೈತರಿಗಾಗಿಯೇ ಜೆಡಿಎಸ್ ಪಕ್ಷ ಇದೆ. ದೇವೇಗೌಡರ ಆಶಯ ರೈತರ ಸರ್ಕಾರವನ್ನು ನೋಡಬೇಕು ಎಂಬುದಾಗಿದೆ. ಆ ನಿಟ್ಟಿನಲ್ಲಿ ರಾಜ್ಯದಲ್ಲಿ ಕುಮಾರಸ್ವಾಮಿ ಸರ್ಕಾರ ಮತ್ತೆ ಬರಬೇಕು. ನಮ್ಮ ಕುಟುಂಬ ದೇವೇಗೌಡರ ಜೊತೆಗೆ ಇರುತ್ತದೆ. ರಾಜ್ಯಾದ್ಯಂತ ಪಕ್ಷ ಕಟ್ಟುವ ಕೆಲಸ ಮಾಡುತ್ತೇವೆ. ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ತಿಳಿಸಿದ್ದಾರೆ.
ನಿಖಿಲ್ ಸ್ಪರ್ಧೆ ಬಗ್ಗೆ ಸುಳಿವು ನೀಡಿದ ಮಾಜಿ ಸಿಎಂ ಹೆಚ್ ಡಿಕೆ
https://pragati.taskdun.com/latest/h-d-kumaraswamychamundi-templemysorevisit/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ