Latest

*ಮಾರ್ಚ್ 31ರೊಳಗೆ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ; ಕ್ರಿಯಾಯೋಜನೆ ಸಲ್ಲಿಸಲು ಸಿಎಂ ಬೊಮ್ಮಾಯಿ ಸೂಚನೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಗಡಿಭಾಗದಲ್ಲಿ ಶಿಕ್ಷಣ, ಕೈಗಾರಿಕೆ, ಮೂಲಭೂತ ಸೌಕರ್ಯ, ಕನ್ನಡ ಭಾಷಾ ಅಭಿವೃದ್ಧಿಗಳ ಬಗ್ಗೆ ಕೆಲಸ ಮಾಡುವ ಅವಶ್ಯಕತೆ ಇದ್ದು, ಗಡಿ ಅಭಿವೃದ್ಧಿ ಪ್ರಾಧಿಕಾರಕ್ಜೆ ಇದೇ ವರ್ಷದ ಮಾರ್ಚ್ 31 ರೊಳಗೆ 100 ಕೋಟಿ ರೂ.ಗಳನ್ನು ಒದಗಿಸಲಾಗುವುದು. ಈ ಅನುದಾನಕ್ಕೆ ಕ್ರಿಯಾಯೋಜನೆಯನ್ನು ಸಿದ್ದಪಡಿಸಿ ಸಲ್ಲಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.

ಅವರು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆಯೋಜಿಸಿರುವ “ ಗಡಿನಾಡ ಚೇತನ” ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗಡಿ ಅಭಿವೃದ್ಧಿ ಪ್ರಾಧಿಕಾರಕ್ಜೆ ಈಗಾಗಲೇ 25 ಕೋಟಿ ನೀಡಲಾಗಿದೆ. ಮುಂದಿನ ಆಯವ್ಯಯದಲ್ಲಿಯೂ 100 ಕೋಟಿ ರೂ.ಗಳ ಅನುದಾನವನ್ನು ಒದಗಿಸುವ ಭರವಸೆಯನ್ನು ನೀಡಿದರು. ಗಡಿಭಾಗದಲ್ಲಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವಾಗಬೇಕು. ಗಡಿ ಆಚೆ ಇರುವ ಕನ್ನಡಿಗರೂ ನಮ್ಮವರು. ಅವರ ಬೇಡಿಕೆಗೂ ಸ್ಪಂದಿಸುವ ಕೆಲಸ ನಾವು ಮಾಡುತ್ತೇವೆ ಎಂದರು.

ಗಡಿ ಭಾಗದ ಜನರ ಭವಿಷ್ಯ ಸುನಿಶ್ಚಿತಗೊಳಿಸುವುದು ನಮ್ಮ ಕರ್ತವ್ಯ :
ಕರ್ನಾಟಕದ ಮುಖ್ಯಮಂತ್ರಿಯಾಗಿ ಅಗಿ ಭಾಷೆ ಗಡಿಭಾಗದವರ ರಕ್ಷಣೆ, ಪೋಷಣೆ ಮತ್ತು ಭವಿಷ್ಯವನ್ನು ಸುನಿಶ್ಚಿತಗೊಳಿಸುವುದು ನನ್ನ ಕರ್ತವ್ಯ. ನಮ್ಮ ಗಡಿಯಲ್ಲಿನ ಕನ್ನಡಿಗರ ಅಭಿವೃದ್ಧಿಯ ಬಗ್ಗೆ ಮೊದಲು ನಾವು ಗಮನಹರಿಸಬೇಕು. ಗಡಿಭಾಗದಲ್ಲಿರುವ ಕನ್ನಡಿಗರನ್ನು ನಿರ್ಲಕ್ಷ್ಯ ಮಾಡುವುದಿಲ್ಲ. ಗಡಿಭಾಗದ ಕನ್ನಡಿಗರಿಗೆ ಎಲ್ಲ ಸೌಕರ್ಯಗಳನ್ನು, ಅವಕಾಶಗಳನ್ನು ನೀಡಿ, ಭವಿಷ್ಯವನ್ನು ಬರೆಯುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ.. ಗಡಿ ಪ್ರಾಧಿಕಾರಕ್ಕೆ ಮೊದಲು 8-10 ಕೋಟಿ ನೀಡುತ್ತಿದ್ದರು ಎಂದರು.

ಗಡಿಭಾಗದ ಜನರು ಸಾಮರಸ್ಯದಿಂದ ಬದುಕುವಂತಾಗಬೇಕು :
ಪ್ರಾದೇಶಿಕ ರಾಜ್ಯಗಳಿ ಭಾಷೆವಾರು ಆದಾಗ, ಸಹಜವಾಗಿ ವ್ಯತ್ಯಾಸಗಳು ಬಂದೇಬರುತ್ತವೆ. ನಿಖರವಾದ ರೇಖೆಯನ್ನು ಯಾವುದೇ ರಾಜ್ಯ ಅಥವಾ ದೇಶದ ನಡುವೆ ಎಳೆಯಲು ಸಾಧ್ಯವಿಲ್ಲ. ಆದ ಕಾಲಕಳೆದಂತೆ, ವ್ಯತ್ಯಾಸಗಳನ್ನು ಮರೆತು ಸಾಮರಸ್ಯದಿಂದ ಬದುಕುವುದು ಬಹಳ ಮುಖ್ಯ. ಆದರೆ ಈ ರೀತಿ ಆಗಲಿಲ್ಲ ಎಂಬ ಕೊರಗು ಕನ್ನಡಿಗರಿಗಿದೆ. ಗಡಿ ಭಾಗದಲ್ಲಿ ಯಾವುದೇ ಭಾಷೆ ಮಾತನಾಡಿದರು ನೆಮ್ಮದಿಯಿಂದ ಜೀವನ ನಡೆಸುತ್ತಾರೆ. ನಾನು ಬೆಳಗಾವಿ ಅಧಿವೇಶನ ಕ್ಜೆ ಹೋದಾಗ ಗಡಿ ಭಾಗದ ಗ್ರಾಮಗಳಿಗೆ ಭೇಟಿ ನೀಡಿದಾಗ ಜನರು ಪ್ರೀತಿಯಿಂದ ಮಾತನಾಡುತ್ತಾರೆ. ಜನರ ಮಧ್ಯೆ ಇಲ್ಲದಿರುವ ಸಮಸ್ಯೆಗಳನ್ನು ಬೆಳೆಸಿಕೊಂಡು ಹೋಗುವುದು ರಾಜ್ಯಕ್ಕಾಗಲಿ, ದೇಶಕ್ಕಾಗಲಿ ಒಳಿತನ್ನು ತರುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ಕನ್ನಡಕ್ಕೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು :
ಕನ್ನಡದ ಶಬ್ದ, ಭಾವಾರ್ಥದಲ್ಲಿ ಶ್ರೀಮಂತವಾಗಿದೆ.ಈ ಭಾಷೆಯಲ್ಲಿ ಸ್ಪಷ್ಟತೆಯಿದ್ದು, ಕನ್ನಡಕ್ಕೆ ಭವ್ಯವಾದ ಭವಿಷ್ಯ ಇದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಕನ್ನಡಕ್ಕೆ ಅಂತರ್ಗತ ಶಕ್ತಿಯಿದ್ದು, ಯಾವುದೇ ಸರ್ಕಾರದ ರಕ್ಷಣೆಯ ಅವಶ್ಯಕತೆಯಿಲ್ಲ.ಕನ್ನಡ ಭಾಷೆಗೆ ಯಾವುದೇ ಆತಂಕವಿಲ್ಲ. ಕನ್ನಡಕ್ಕೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಎಲ್ಲ ಭಾಷೆಗಳ ಪೈಪೋಟಿ, ಪ್ರಭಾವವನ್ನು ಎದುರಿಸಿ, ಕನ್ನಡ ಸಾಹಿತ್ಯ ಜ್ಞಾನಪೀಠ ಪ್ರಶಸ್ತಿ ಪಡೆಯುತ್ತಿದೆ ಎಂದರು.

ಸರಳ, ಸಾರ್ವಜನಿಕರ ಸಾಹಿತ್ಯ ಅಗತ್ಯ:
ಅರ್ಹತೆಯ ಆಧಾರದ ಮೇಲೆ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಕನ್ನಡಶಕ್ತಿಗೆ ಇದೇ ಉದಾಹರಣೆ. ಕನ್ನಡದಲ್ಲಿ ಅದ್ಭುತ ಸಾಹಿತ್ಯವಿದೆ. ಜೀವನಕ್ಕೆ ಬದುಕು ತೋರಿಸುವ ವಚನ ಮತ್ತು ದಾಸ ಸಾಹಿತ್ಯ. ಬದುಕಿಗೆ ಹತ್ತಿರವಿದ್ದು ಜನಪ್ರಿಯವಾಗಿ ಸಾರ್ವಜನಿಕವಾಗುತ್ತದೆ. ಸಾರ್ವಜನಿಕ ಸಾಹಿತ್ಯವೇ ಶ್ರೇಷ್ಠ ಸಾಹಿತ್ಯ. ಅರ್ಥ, ಒಳರ್ಥಗಳನ್ನು ಸಾಮಾನ್ಯಜನರಿಗೆ ಅತ್ಯಂತ ಸರಳವಾಗಿ ತಿಳಿಸುವುದೇ ಸಾಹಿತ್ಯದ ಕೆಲಸ. ಜ್ಞಾನವನ್ನು ಸರಳವಾಗಿ ಅಭಿವ್ಯಕ್ತಪಡಿಸಲು ಸಾಧ್ಯವಾಗದಿದ್ದರೆ ಆ ಸಾಹಿತ್ಯ ನಿಘಂಟಾಗುತ್ತದೆ. ನಮಗೆ ನಿಘಂಟಿನ ಸಾಹಿತ್ಯ ಬೇಕಾಗಿಲ್ಲ. ಸರಳ, ಸಾರ್ವಜನಿಕರ ಸಾಹಿತ್ಯ ನಮಗೆ ಅಗತ್ಯ. ಕನ್ನಡದಲ್ಲಿ ಇದು ಸಾಧ್ಯವಿದೆ. ಕನ್ನಡ ಉಳಿದಿದ್ದರೆ, ಬೆಳೆದಿದ್ದರೆ ಸಾಹಿತಿಗಳು ಮೂಲ ಕಾರಣ ಎಂದರು.

ಜ್ಞಾನ ಎಲ್ಲಾ ಕಡೆಯಿಂದ ಹರಿಯಬೇಕು: 
ಯುವಕರು ಉತ್ತಮವಾದ ಸಾಹಿತ್ಯ ರಚನೆ ಮಾಡುತ್ತಾರೆ. ಆಧ್ಯಾತ್ಮ, ವಿಸ್ಮಯವಾದ ವಿಚಾರಗಳಲ್ಲಿ ಉತ್ತುಮ ಸಾಹಿತ್ಯ ಬರುತ್ತಿದೆ. ಜ್ಞಾನ ಎಲ್ಲಾ ಕಡೆಯಿಂದ ಹರಿಯಬೇಕು. ತಮ್ಮ ತಾಯಿಯ ಹೆಸರಿನಲ್ಲಿ ಅವ್ವ ಎಂದು ವಾರ್ಷಿಕ ಸಂಚಿಕೆ ಹೊರತರುತ್ತಿದ್ದು, ತಾಯಿಯ ಬಗ್ಗೆ ಜಗತ್ತಿನಲ್ಲಿ ಲಭ್ಯವಿರುವ ಶ್ರೇಷ್ಠ ಕಥೆ, ಕವನಗಳನ್ನು ಈ ಮೂಲಕ ಪ್ರಕಟಿಸಿರುವುದಾಗಿ ಹೇಳಿದರು. ಇವೆಲ್ಲವನ್ನೂ ಕನ್ನಡಕ್ಕೆ ತಂದರೆ ಕನ್ನಡ ಶ್ರೀಮಂತವಾಗುತ್ತದೆ. ಜಗತ್ತು ಸಣ್ಣದಾಗುತ್ತಿರುವ ಈ ಹೊತ್ತಿನಲ್ಲಿ ಕನ್ನಡವೂ ಅಗ್ರಮಾನ್ಯವಾಗಬೇಕು. ನಮ್ಮ ಚೌಕಟ್ಟನ್ನು ಮೀರಿ ಕನ್ನಡವನ್ನು ಬೆಳೆಸಲು ಕನ್ನಡಕ್ಕೆ ಅಗತ್ಯವಿರುವ ವಿಚಾರಗಳನ್ನು ಕನ್ನಡಕ್ಕೆ ತರಬೇಕು ಎಂದರು.

ಕನ್ನಡದ ಏಕೀಕರಣ:
ಗಡಿನಾಡಿನಲ್ಲಿ ಲಿಗಾಡೆ, ಪಟ್ಟದ್ದೇವರು ಆ ಕಾಲದಲ್ಲಿ ಮಾಡಿರುವ ಕೆಲಸ ಗಟ್ಟಿತನದ್ದು. ಕನ್ನಡದ ಏಕೀಕರಣ ಸುಲಭವಾಗಿರಲಿಲ್ಲ. ಸ್ವಾತಂತ್ರ್ಯದ ಪೂರ್ವದಲ್ಲಿ ಹಾಗೂ ನಂತರದಲ್ಲಿ ಆಡಳಿತಗಾರರು ಕನ್ನಡದ ಏಕೀಕರಣಕ್ಕೆ ಮಹತ್ವ ನೀಡಿ ಕನ್ನಡದ ಮನಸ್ಸುಗಳು ಒಂದಾದವು. ಅಂದೂ ಸಾಹಿತ್ಯ ಮಹತ್ವದ ಪಾತ್ರವನ್ನು ವಹಿಸಿತ್ತು. ಕನ್ನಡ ನಾಡಿನಲ್ಲಿ ಹುಟ್ಟಿದ್ದು ನಮ್ಮ ಪುಣ್ಯ. ಗಡಿ ಪ್ರಾಧಿಕಾರ ಉತ್ತಮ ಕೆಲಸ ಮಾಡಿದೆ. ಅವರ ಶಕ್ತಿಗೆ ಅಗತ್ಯ ಸಹಕಾರ, ಅನುದಾನವನ್ನು ಸರ್ಕಾರ ನೀಡಲಿದೆ. ಉತ್ತಮ ಕ್ರಿಯಾಯೋಜನೆ ತಯಾರಿಸಿ ಎಂದರು. ಪ್ರಶಸ್ತಿ ವಿಜೇತರಿಗೆ ಅಭಿನಂದಿಸಿದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ:ಸಿ.ಸೋಮಶೇಖರ್, ಎಂ.ಎಸ್.ಸಿಂಧೂರ, ಮಾಜಿ ಸಚಿವೆ ಲೀಲಾ ದೇವಿ ಆರ್.ಪ್ರಸಾದ್, ಅಶೋಕ್ ಚಂದರಗಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

*ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಸಿಕ್ಕ ಕೊಡುಗೆಗಳೇನು? ಸಿಎಂ ಹೇಳಿದ್ದೇನು?*

https://pragati.taskdun.com/union-budget-2023cm-basavaraj-bommaiupper-bhadra-projectpressmeet/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button