*ಹಿರೇಬಾಗೇವಾಡಿಯಲ್ಲಿ ಗಾಂಧಿ ನಡಿಗೆ ಕಾರ್ಯಕ್ರಮ*; *ಸುಳ್ಳಿಗೆ ತಡೆ ಹಾಕಿ ಸತ್ಯ, ಅಂಹಿಸೆ ಎತ್ತಿ ಹಿಡಿಯಬೇಕಿದೆ : ಚನ್ನರಾಜ ಹಟ್ಟಿಹೊಳಿ*
ಪ್ರಗತಿವಾಹಿನಿ ಸುದ್ದಿ, ಹಿರೇಬಾಗೇವಾಡಿ (ಬೆಳಗಾವಿ) : ಪ್ರಸ್ತುತ ಸನ್ನಿವೇಶದಲ್ಲಿ ಸಮಾಜದಲ್ಲಿ ಸುಳ್ಳು ಬಿತ್ತರಿಸುತ್ತಿರುವವರನ್ನು ತಡೆದು ಮಹಾತ್ಮಾ ಗಾಂಧಿಯವರ ತತ್ವದಂತೆ ಸತ್ಯ, ಅಹಿಂಸೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದು ವಿಧಾನ ಪರಿಷತ್ ಸದ್ಯ ಚನ್ನರಾಜ ಹಟ್ಟಿಹೊಳಿ ಕರೆ ನೀಡಿದ್ದಾರೆ.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹಿರೇಬಾಗೇವಾಡಿಯಲ್ಲಿ ಬುಧವಾರ ಗಾಂಧಿ ನಡಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಮಹಾತ್ಮಾ ಗಾಂಧೀಜಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಎಐಸಿಸಿ ಅಧಿವೇಶನದ 100ನೇ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುತ್ತಿರುವ ನಾವೆಲ್ಲರೂ ಪುಣ್ಯವಂತರು. ಮುಂದಿನ ಒಂದು ವರ್ಷಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಈಗಿನ ಪೀಳಿಗೆಗೆ ಹಿರಿಯ ಆದರ್ಶಗಳನ್ನು ತಿಳಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಎಐಸಿಸಿ ಅಧಿವೇಶನದ ಶತಮಾನೋತ್ಸವ ನಿಮಿತ್ತ ಇಡೀ ವರ್ಷ ಕಾರ್ಯಕ್ರಮಗಳನ್ನು ನಡೆಸಲು ಸರಕಾರ ಮತ್ತು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಡಿಸೆಂಬರ್ ತಿಂಗಳಲ್ಲಿ ವಿಧಾನ ಮಂಡಲದ ಜಂಟಿ ಅಧಿವೇಶನ ನಡೆಯಲಿದೆ. ಬೆಳಗಾವಿಯಲ್ಲಿ ಎಐಸಿಸಿ ಅಧಿವೇಶನ ನಡೆಸುವ ಕುರಿತೂ ಚಿಂತನೆ ಇದೆ. ಬ್ರಿಟೀಶರ್ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚನ್ನಮ್ಮನ ವಿಜಯೋತ್ಸವದ 200ನೇ ವರ್ಷ ಕೂಡ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಚನ್ನರಾಜ ತಿಳಿಸಿದರು.
ಬೆಳಗಾವಿಯಲ್ಲಿ 1924ರಲ್ಲಿ ನಡೆದಿದ್ದ ಎಐಸಿಸಿ ಅಧಿವೇಶನ ಅತ್ಯಂತ ಮಹತ್ವದ ಅಧಿವೇಶನವಾಗಿತ್ತು. ಸ್ವಾತಂತ್ರ್ಯ ಚಳವಳಿಗೆ ದೊಡ್ಡ ತಿರುವು ಕೊಟ್ಟ ಅಧಿವೇಶನ ಇದು. ಮಹಿಳೆಯರು, ವಿದ್ಯಾರ್ಥಿಗಳು ಗಾಂಧೀಜಿ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದರು. ಸ್ವಾತಂತ್ರ್ಯ ಸಿಗುವವರೆಗೂ ಹೋರಾಟವನ್ನು ನಿಲ್ಲುವಂತಿಲ್ಲ ಎಂದು ದೃಢ ನಿಶ್ಚಯ ಮಾಡಿದ ಅಧಿವೇಶನ ಇದಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವುದಕ್ಕಾಗಿಯೇ ಹುಟ್ಟಿಕೊಂಡಿದ್ದ ಪವಿತ್ರವಾದ ಪಕ್ಷ ಕಾಂಗ್ರೆಸ್ ಆಗಿದೆ. ಈ ಸಂಭ್ರಮದಲ್ಲಿ ಭಾಗವಹಿಸುತ್ತಿರುವುದು ನಮ್ಮೆಲ್ಲರ ಭಾಗ್ಯ ಎಂದು ಅವರು ಹೇಳಿದರು.
ಹತ್ತು ಹಲವು ಯೋಜನೆಗಳು
ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಆಯ್ಕೆಯಾಗಿರುವ ಲಕ್ಷ್ಮೀ ಹೆಬ್ಬಾಳಕರ್ ಅವರು ಸಚಿವೆಯಾಗಿ ರಾಜ್ಯದ ಉದ್ದಗಲಕ್ಕೂ ಮೆಚ್ಚುವಂತಹ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರಕ್ಕೆ ಹಲವಾರು ಶಾಶ್ವತವಾದ ಯೋಜನೆಗಳನ್ನು ತಂದಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬೆಳಗಾವಿಯಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಬೆಳಗಾವಿ ಜಿಲ್ಲಾಧಿಕಾರಿ ನಿವೇಶನದ ಬಳಿ 20 ಕೋಟಿ ರೂ. ವೆಚ್ಚದಲ್ಲಿ ಬಾಲಭವನ ನಿರ್ಮಾಣ ಮಾಡಲಾಗುವುದು. ಕ್ಷೇತ್ರದಲ್ಲಿ 45 ಸಮುದಾಯ ಭವನ ನಿರ್ಮಾಣವಾಗುತ್ತಿದೆ. ಸುಳೆಬಾವಿಯಲ್ಲಿ ಕಮ್ಯನಿಟಿ ಹೆಲ್ತ್ ಸೆಂಟರ್ ಸ್ಥಾಪನೆಯಾಗಲಿದೆ. 5 ಕರ್ನಾಟಕ ಪಬ್ಲಿಕ್ ಸ್ಕೂಲ್ ಮಂಜೂರು ಮಾಡಿಸಲಾಗಿದೆ. 250 ಶಾಲೆ ಕಟ್ಟಡಗಳಿಗೆ ಮಂಜೂರಿ ಸಿಕ್ಕಿದೆ. 2 ಕಡೆ ಮುರಾರ್ಜಿ ದೇಸಾಯಿ ಸ್ಕೂಲ್ ಮಂಜೂರಾಗಿದೆ. 20 ಕೋಟಿ ರೂ ವೆಚ್ಚದಲ್ಲಿ ತಾಲೂಕು ಕ್ರೀಡಾಂಗಣ ಬೆಳಗುಂದಿಯಲ್ಲಿ ನಿರ್ಮಾಣವಾಗಲಿದೆ. ಇಂತಹ ಒಳ್ಳಯ ಕೆಲಸಗಳನ್ನು ಮಾಡುತ್ತಿರುವ ಲಕ್ಷ್ಮೀ ಹೆಬ್ಬಾಳಕರ್ ಅವರ ಕೈ ಬಲಪಡಿಸಬೇಕಾಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಾವೆಲ್ಲ ನಿಲ್ಲಬೇಕಾಗಿದೆ ಎಂದು ಚನ್ನರಾಜ ಹೇಳಿದರು.
ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಮಾತನಾಡಿ, ಒಬ್ಬ ವ್ಯಕ್ತಿ ಇಡೀ ಜೀವನವನ್ನು ಸ್ವಾತಂತ್ರ್ಯಕ್ಕಾಗಿ ಮುಡುಪಾಗಿಟ್ಟಂತಹ ಇತಿಹಾಸವನ್ನು ನಾವೆಲ್ಲ ತಿಳಿದುಕೊಳ್ಳಬೇಕು. ರಾಜಕೀಯ ಲಾಭಕ್ಕಾಗಿ ಹಿರಿಯರನ್ನು ಕಡಗಣಿಸುತ್ತಿರುವ ಇಂದಿನ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರ ಮಹಾತ್ಮಾ ಗಾಂಧಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಆದರ್ಶವನ್ನು ಸಾರುವ ಮಹತ್ವದ ಕಾರ್ಯಕ್ರಮ ಮಾಡುತ್ತಿದೆ. ಸೂರ್ಯ , ಚಂದ್ರ ಇರುವವರೆಗೆ ಮಹಾತ್ಮಾ ಗಾಂಧಿ ಹೆಸರು ಇರಲಿದೆ ಎಂದು ಹೇಳಿದರು.
ಇದೇ ವೇಳೆ, ಬೆಂಗಳೂರಿನಲ್ಲಿ ನಡೆಯುತ್ತಿದ್ದ ಮುಖ್ಯ ಕಾರ್ಯಕ್ರಮವನ್ನು ಝೂಮ್ ಮೂಲಕ ಸಂಪರ್ಕಿಸಿ ಸ್ವಚ್ಛತೆಯ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು. ಹಿರೇಬಾಗೇವಾಡಿ ಚಾವಡಿಕೂಟದ ಲಕ್ಷ್ಮೀ ದೇವಿ ಗುಡಿಯಿಂದ ಫಡಿಬಸವೇಶ್ವರ ದೇವಸ್ಥಾನದವರೆಗೆ ಗಾಂಧಿ ನಡಿಗೆ ಜಾಥಾ ನಡೆಸಲಾಯಿತು. ಜಾಥಾದಲ್ಲಿ ಭಾಗವಹಿಸಿದವರೆಲ್ಲ ಗಾಂಧೀಜಿಯವರ ಸಂದೇಶಗಳನ್ನು ಸಾರುವ ಫಲಕಗಳನ್ನು ಹಿಡಿದಿದ್ದರು.
ಸುನಿತಾ ಪಾಟೀಲ್, ರಾಜಾ ಸಲೀಂ, ಸುರೇಶ ಇಟಗಿ, ಶಂಕರಗೌಡ ಪಾಟೀಲ್, ಬಸವರಾಜ ಮ್ಯಾಗೋಟಿ, ಅಡಿವೇಶ ಇಟಗಿ, ಶ್ರೀಕಾಂತ್ ಮಧುಬರಮಣ್ಣವರ್ ಮೊದಲಾದವರು ಮಾತನಾಡಿದರು. ಸಿ.ಸಿ.ಪಾಟೀಲ್, ಮನೋಹರ ಬಾಂಡಗಿ ಮೊದಲಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ