Kannada NewsKarnataka News

ಗಾಂಧೀಜಿ ಚಿಂತನೆಗಳು ಸಮಕಾಲೀನ ಭಾರತವನ್ನು ಪ್ರಬುದ್ಧ ಭಾರತವನ್ನಾಗಿಸಿದೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ, ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ಮಹಾತ್ಮ ಗಾಂಧೀಜಿ ಅವರ ೧೫೦ನೇ ವರ್ಷಾಚರಣೆಯ ನಿಮಿತ್ತ  ವಿಶೇಷ ಸರಣಿ ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಗಜಾನನ ನಾಯ್ಕ ಮಾತನಾಡಿ, ಭಾರತವನ್ನು ಪಾಶ್ವಾತ್ಯ ರಾಷ್ಟ್ರಗಳು ನಿಬ್ಬೆರಗಾಗಿ ನೋಡುವಲ್ಲಿ ಗಾಂಧೀಜಿಯವರ ಚಿಂತನೆಗಳು ಮಹತ್ವದ ಪಾತ್ರ ವಹಿಸಿದೆ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಧರ್ಮಸ್ಥಳ ಮಂಜುನಾಥ ಟ್ರಸ್ಟಿನ ಸ್ತ್ರೀ ಸಂಘಟನೆಗಳು ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗಿವೆ.

ಇದು ಸಾಧ್ಯವಾದದ್ದು ಗಾಂಧೀಜಿಯವರ ಸಮಾನತೆಯ ತತ್ವದ ಅಡಿಪಾಯದಲ್ಲಿ ಗಾಂಧೀಜಿಯವರ ಚಿಂತನೆಗಳಾದ ಸತ್ಯಾಗ್ರಹ, ಸರ್ವೋದಯ, ಸ್ವರಾಜ್ಯದ ಕುರಿತಾಗಿ ಮಾತನಾಡಿ ಪ್ರಸ್ತುತ ಭಾರತದ ರಾಜಕಾರಣ ವ್ಯವಸ್ಥೆ ಶುದ್ಧವಾಗಿರಬೇಕಾದರೆ ಗಾಂಧೀಜಿಯವರ ಚಿಂತನೆಗಳು ಹಾಗೂ ಮಾನವೀಯ ಮೌಲ್ಯಗಳು ಸೇರ್ಪಡೆಯಾಗಬೇಕು. ಗಾಂಧೀಜಿಯವರನ್ನು ಕೇವಲ ಸ್ವಾತಂತ್ರ್ಯ ಹೋರಾಟಗಾರರೆಂದು ಪರಿಗಣಿಸದೆ ರಾಷ್ಟ್ರ ಕಂಡ ಅದ್ಭುತ ಶಕ್ತಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಸ್. ಎಂ. ಗಂಗಾಧರಯ್ಯನವರು ಗಾಂಧೀಜಿಯವರ ಮನುಕುಲದ ಸಿದ್ದಾಂತಗಳು ಸಮಕಾಲೀನ ಭಾರತಕ್ಕೆ ಅತ್ಯವಶ್ಯಕವಾಗಿ ಬೇಕಾಗಿದೆ. ನಮ್ಮ ದೇಶ ಹಲವು ಭಾಷೆ, ಆಹಾರ, ತೊಡುಗೆಗಳಲ್ಲಿ ವಿಭಿನ್ನವಾದರೂ ಏಕತೆ ಮತ್ತು ಸಮಗ್ರತೆ ನಮ್ಮ ದೇಶದ ವೈಶಿಷ್ಟ್ಯತೆಯಾಗಿದೆ. ನೆಹರು ಪ್ರಣೀತ ಭಾರತ ಹಾಗೂ ಗಾಂಧೀ ಕಲ್ಪಿತ ಭಾರತದಲ್ಲಿ ವಿಭಿನ್ನತೆ ಇದೆ. ಗಾಂಧೀ ಸಾಂಸ್ಥಿಕವಾಗಿ ಪರಿಚಯವಾಗಿ ನಂತರ ವ್ಯಕ್ತಿಯಾಗಿ ಪರಿಚಯವಾಗುತ್ತಾರೆ. ಗಾಂಧೀಜಿಯವರ ಆಲೋಚನೆಗಳು ಇವತ್ತಿಗೂ ಪ್ರಸ್ತುತ ಎಂದು ಹೇಳಿದರು.

ಕಾರ್ಯಕ್ರಮದ ಸಂಯೋಜಕರಾದ ಡಾ. ಶೋಭಾ ನಾಯಕ ಅವರು ಮಾತನಾಡಿ, ಭಾರತವನ್ನು ಎಲ್ಲ ರೀತಿಯಿಂದಲೂ ಹಿಂದಿನಿಂದಲೂ ತನ್ನ ಬಿಗಿಮುಷ್ಟಿಯಲ್ಲಿ ಹಿಡಿಯುವ ಉದ್ದೇಶವನ್ನು ಹೊಂದಿದ್ದ ಹಾಗೂ ಹೊಂದಿರುವ ಪಾಶ್ಚಾತ್ಯರ ತಂತ್ರಕ್ಕೆ ಉತ್ತರ ಗಾಂಧೀಜಿ ಎಂದರು. ಕಾರ್ಯಕ್ರಮದಲ್ಲಿ ಡಾ. ಪಿ. ನಾಗರಾಜ, ಡಾ. ಅಶೋಕ ಮುಧೋಳ ಹಾಗೂ ವಿದ್ಯಾರ್ಥಿಗಳು ಹಾಗೂ ಸಂಶೋಧನಾರ್ಥಿಗಳು ಹಾಜರಿದ್ದರು, ಸಂಜಯ ಚಿಕ್ಕೂಡ ಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button