ಗಣೇಶ ವಿಸರ್ಜನೆ ಶಾಂತಿಯುತವಾಗಿರಲಿ: ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಗರದಲ್ಲಿ ಬೃಹತ್ ಪ್ರಮಾಣದಲ್ಲಿ ನಡೆಯುವ ೧೧೫ನೇ ಗಣೇಶ ವಿಸರ್ಜನೆಯ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸರಳ ರೀತಿಯಲ್ಲಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಅವರು ಗಣೇಶ ಮಹಾಮಂಡಳಗಳ ಪದಾಧಿಕಾರಿಗಳಿಗೆ ತಿಳಿಸಿದರು.
ಗಣೇಶ್ ವಿಸರ್ಜನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ(ಸೆ.೧೧) ನಡೆದ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪ್ರವಾಹ ಬಂದಿರುವುದರಿಂದ ಗಣೇಶ ಮಂಡಳಿಗಳು ಸಂಕ್ಷಿಪ್ತವಾಗಿ ಸರಳ ರೀತಿಯಲ್ಲಿ ಯಾವುದೇ ಆಡಂಬರಗಳಿಲ್ಲದೆ ಆಚರಣೆ ಮಾಡಲು ನಿರ್ಧಾರ ಕೈಗೊಂಡಿವುದರಿಂದ ಅವರುಗಳಿಗೆ ಅಭಿನಂದನೆ ಸಲ್ಲಿಸಿದರು.
ಗಣೇಶ ಮಂಡಳಿಯವರಿಗೆ ಬೇಕಾಗುವಂತಹ ಸಹಾಯ ಮತ್ತು ಸಹಕಾರವನ್ನು ಜಿಲ್ಲಾಡಳಿತದ ವತಿಯಿಂದ ನೀಡಲಾಗುತ್ತದೆ ಅದೇ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿಮ್ಮ ಸಹಾಯ ಮತ್ತು ಸಹಕಾರ ನಮಗೆ ನೀಡಬೇಕು ಎಂದರು.
ಗಣೇಶ ವಿಸರ್ಜನೆ ಸ್ಥಳದಲ್ಲಿ ಸ್ಥಳಿಯ ಪೊಲೀಸ್ ಸಿಬ್ಬಂದಿಗಳನ್ನು ನೆಮಿಸಲಾಗಿದೆ ಎಂದರು. ನಗರ ಪೊಲೀಸ್ ಆಯುಕ್ತರಾದ ಎಸ್.ಬಿ. ಲೋಕೇಶ್ ಕುಮಾರ ಅವರು ಮಾತನಾಡಿ ಕಾನೂನು ಸುವ್ಯವಸ್ಥೆ ರಕ್ಷಣೆಗೆ ೩ ಸಾವಿರ ಪೊಲೀಸ್ ಸಿಬ್ಬಂದಿಗಳು ಗಣೇಶ ವಿಸರ್ಜನೆಯ ಸಮಯದಲ್ಲಿ ಮಧ್ಯಾನ್ಹ ೨ ಗಂಟೆಯಿಂದ ವಿಸರ್ಜನೆ ಮುಗಿಯುವವರೆಗೂ ನಿರಂತರವಾಗಿ ಕಾರ್ಯನಿರ್ವಹಿಸುತ್ತಾರೆ.
ಗುರುವಾರ(ಸೆ.೧೨) ಸಂಜೆ ನಾಲ್ಕು ಗಂಟೆಯಿಂದ ನಡೆಯುವ ವಿಸರ್ಜನೆ ಕಾರ್ಯಕ್ರಮದ ಸಂದರ್ಭದಲ್ಲಿ ಯಾವುದೇ ತೊಂದರೆಗಳಿಗೆ ಜನರು ಒಳಗಾಗದೆ ವ್ಯವಸ್ಥಿತ ರೀತಿಯಲ್ಲಿ ವಿಸರ್ಜನೆಯನ್ನು ವೀಕ್ಷಿಸಲು ಅನುಕೂಲವಾಗುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಪೊಲೀಸ್ ಇಲಾಖೆಯಲ್ಲಿ ಈ ಬಾರಿ ಎರಡು ಶಿಫ್ಟ್ ಮಾಡಿ ಸಂಜೆಯ ವೇಳೆಯಲ್ಲಿ ಹೊರಗಿನಿಂದ ಬಂದಿರುವ ಪೊಲೀಸ್ ಸಿಬ್ಬಂದಿಯ ಜೊತೆಗೆ ಒಬ್ಬ ಸ್ಥಳಿಯ ಅಧಿಕಾರಿಗಳನ್ನು ನೇಮಿಸಿದ್ದು, ಬೆಳಗ್ಗೆ ೫ ಗಂಟೆಯಿಂದ ಸ್ಥಳೀಯ ಪೊಲೀಸ್ರನ್ನು ನೇಮಿಸಲಾಗಿದೆ ಎಂದರು.
ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ವಿವಿಧೆಡೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ ಪೋಲಿಸ್ ಸಿಬ್ಬಂದಿಗಳನ್ನು ನಿಯಮಿಸಲಾಗಿದೆ ಎಂದರು.
ಪಟಾಕಿಗಳನ್ನು ಹಚ್ಚುವ ಬದಲು ಆ ಹಣವನ್ನು ಪ್ರವಾಹದಿಂದ ಬಳಲುತ್ತಿರುವ ಸಂತ್ರಸ್ತರಿಗೆ ನೀಡಬೇಕೆಂದು ಮನವಿ ಅವರು ಮಾಡಿಕೊಂಡರು.
ಗಣೇಶೋತ್ಸವ ಆಚರಣೆಗೆ ಎಲ್ಲ ರೀತಿಯ ಸಹಾಯ-ಸಹಕಾರ ನೀಡಿದ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಹೆಸ್ಕಾಂ ಇಲಾಖೆಗಳಿಗೆ ಗಣೇಶ ಮಹಾಮಂಡಳದ ಪದಾಧಿಕಾರಿಗಳು ಕೃತಜ್ಞತೆಗಳನ್ನು ತಿಳಿಸಿದರು.
ವೀಕ್ಷಕ ಗ್ಯಾಲರಿ ವ್ಯವಸ್ಥೆ:
ಪ್ರತಿ ವರ್ಷದಂತೆ ಈ ವರ್ಷವು ಮಹಿಳೆಯರು ಹಾಗೂ ಮಕ್ಕಳು ಗಣೇಶ ವಿಸರ್ಜನೆಯನ್ನು ನೊಡಲು ಬರುತ್ತಾರೆ. ಮೆರವಣಿಗೆಯನ್ನು ವೀಕ್ಷಿಸಲು ಅನುಕೂಲವಾಗುವಂತೆ ಬೋಗಾರ್ ವೇಸ್ ವೃತ್ತದಿಂದ ವನಿತಾ ವಿದ್ಯಾಲಯದವರೆಗೂ ಕುಳಿತುಕೊಳ್ಳುಲು ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ ಪಾಲಿಕೆಯ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ನಗರದಲ್ಲಿ ಗಣೇಶ ವಿಸರ್ಜನೆಗೆ ಕಪಿಲೇಶ್ವರ ಹೊಂಡ, ಕಿಲ್ಲಾ ಕೆರೆ, ಮಜಗಾವಿ, ವಡಗಾವಿ ಸೇರಿದಂತೆ ೮ ಸ್ಥಳಗಳಲ್ಲಿ ಒಟ್ಟು ೧೬ ಕ್ರೆನ್ ಗಳ ವ್ಯವಸ್ಥೆ ಮಾಡಲಾಗಿದೆ.
ನಿರಂತರ ವಿದ್ಯುತ್ ವ್ಯವಸ್ಥೆ ಹಾಗೂ ತುರ್ತು ವೈದ್ಯಕೀಯ ಸೌಲಭ್ಯವನ್ನು ಒದಗಿಸುವಂತೆ ಹೆಸ್ಕಾಂ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬೂದೆಪ್ಪ ಎಚ್ ಬಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ರಾಮಲಕ್ಷ್ಮಣ ಅರಸಿದ್ದಿ, ಉಪ ವಿಭಾಗಾಧಿಕಾರಿಗಳಾದ ಡಾ.ಕವಿತಾ ಯೋಗಪ್ಪನ್ನವರ, ತಹಶಿಲ್ದಾರರಾದ ಮಂಜುಳಾ ನಾಯಿಕ ಹಾಗೂ ಜಿಲ್ಲಾ ಗಣೇಶ ಮಂಡಳಿಯ ಪದಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
೩೧೮೧ ಪೊಲೀಸ್
ಶ್ರೀ ಗಣೇಶೋತ್ಸವದ ಅಂತಿಮ ದಿನದ ಮೆರವಣಿಗೆ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ೩೧೮೧ ಪೊಲೀಸ್ ಅಧಿಕಾರಿ, ಸಿಬ್ಬಂದಿ & ಕೆಎಸ್‌ಆರ್‌ಪಿ, ಸಿಎಆರ್, ಕೇಂದ್ರ ಮೀಸಲು ಪಡೆ ಹೀಗೆ ಒಟ್ಟು ೧೫ ತುಕ್ಕಡಿಗಳ ನಿಯೋಜನೆ ಮಾಡಲಾಗಿದೆ.
ಗುರುವಾರ ಬೆಳಗಾವಿ ನಗರದಲ್ಲಿ ಜರುಗಲಿರುವ ಶ್ರೀ ಗಣೇಶೋತ್ಸವದ ಅಂತಿಮ ದಿನದ ಮೆರವಣಿಗೆ ಹಾಗೂ ವಿಸರ್ಜನೆಯ ಕಾಲಕ್ಕೆ ಬಂದೋಬಸ್ತ್ ಕರ್ತವ್ಯಕ್ಕೆ ಒಟ್ಟು ೩೧೮೧ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, ೪೩೪ ಗೃಹ ರಕ್ಷಕ ದಳದ ಸಿಬ್ಬಂದಿಯವರೊಂದಿಗೆ ಹೆಚ್ಚುವರಿಯಾಗಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ-೦೯, ಕೇಂದ್ರ ಮೀಸಲು ಪಡೆ-೦೧, ನಗರ ಸಶಸ್ತ್ರ ಪಡೆ-೦೫ ಪ್ರಹಾರ ದಳ, ವಿದ್ವಂಸಕ ಕೃತ್ಯ ತಪಾಸಣೆಯ-೦೩ ತಂಡ ಹಾಗೂ ಶ್ವಾನ ದಳ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಕರ್ತವ್ಯಕ್ಕೆ ನಿಯೋಜಿಸಿಕೊಂಡು ಬುದವಾರದಿಂದಲೇ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಬಂದೋಬಸ್ತಿಯೊಂದಿಗೆ ಭಯಮುಕ್ತ ವಾತಾವರಣವನ್ನು ಕಲ್ಪಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ