ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವ್ಯಕ್ತಿಯೋರ್ವರನ್ನು ಅಪಹರಿಸಿ ಅವರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಲಪಟಾಯಿಸಿದ್ದಲ್ಲದೆ, ಅವರ ಜಮೀನನ್ನು ಬರೆಯಿಸಿಕೊಳ್ಳಲು ಯತ್ನಿಸಿದ್ದ 9 ಜನರ ಗ್ಯಾಂಗ್ ನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಾಂದೂರು ಗಲ್ಲಿಯ ಅಣ್ಣಾಸಾಬ್ ಶ್ರೀಕಾಂತ ಚೌಗಲೆ ಎನ್ನುವವರನ್ನು ಫೆಬ್ರವರಿ 23ರಂದು ದೇಶಪಾಂಡೆ ಪೆಟ್ರೋಲ್ ಪಂಪ್ ಬಳಿ ಹೋಗುತ್ತಿದ್ದಾಗ ಮಹಾರಾಷ್ಟ್ರ ರಜಿಸ್ಟ್ರೇಶನ್ ಹೊದಿದ ರಿಟ್ಸ್ ಕಾರಿನಲ್ಲಿ ಬಂದವ ನಾಲ್ವರು ಅಪಹರಿಸಿದ್ದರು.
ಸೈಕಲ್ ಮೇಲೆ ಅಡ್ಡಾಡುವ, ಅತ್ಯಂತ ಸರಳ ವ್ಯಕ್ತಿಯಾದ ಅಣ್ಣಾಸಾಬ್ ಚೌಗಲೆ ಅಪಾರ ಆಸ್ತಿ ಹೊಂದಿದ್ದು, ಕೆಲ ಆಸ್ತಿಗಳನ್ನು ಮಾರಾಟ ಮಾಡಿ ಅದರ ಸುಮಾರು 35 ಲಕ್ಷ ರೂ. ಹಣವನ್ನೂ ವಿವಿಧೆಡೆ ಠೇವಣಿ ಇಟ್ಟಿದ್ದರು. ಇದನ್ನೆಲ್ಲ ಅಪಹರಿಸುವುದಕ್ಕಾಗಿ ಅವರನ್ನು ಕಿಡ್ನ್ಯಾಪ್ ಮಾಡಲಾಗಿತ್ತು.
ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಸಿಪಿ ನಾರಾಯಣ ಬರಮನಿ ನೇತೃತ್ವದಲ್ಲಿ ತನಿಖೆಗೆ ತಂಡ ರಚಿಸಲಾಗಿತ್ತು.
ಅಪಹರಣದ ನಂತರ ಹಲಗಾ, ಹಿಂಡಲಗಾ, ಉಚಗಾಂವ್ ಮೊದಲಾದೆಡೆ ಸುತ್ತಾಡಿಸಿ ಮಹಾರಾಷ್ಟ್ರದ ಕಡಲಗೆ ಗ್ರಾಮಕ್ಕೆ ಕರೆದೊಯ್ದು 76 ದಿನಗಳ ಕಾಲ ಫಾರ್ಮ್ ಹೌಸ್ ಸೇರಿದಂತೆ ವಿವಿಧೆಡೆ ಇಡಲಾಗಿತ್ತು. ಅಣ್ಣಾ ಸಾಬ್ ಚೌಗಲೆ ಅವರ ಬ್ಯಾಂಕ್ ಡಿಪಾಸಿಟ್ ಗಳನ್ನೆಲ್ಲ ಪಡೆಯಲು ಯತ್ನಿಸಿದ್ದ ಖದೀಮರು, ಅವರ ಹೆಸರಲ್ಲಿದ್ದ 3 ಎಕರೆ ಜಮೀನನ್ನು ಸಹ ತಮ್ಮ ಹೆಸರು ಮಾಡಿಸಿಕೊಳ್ಳಲು ಸಹಿ ಮಾಡಿಸಿಕೊಂಡಿದ್ದರು.
ಸೊಸೈಟಿ ಖಾತೆಯಲ್ಲಿನ ಹಣ ತೆಗೆಯಲು ಸಹಿ ಹಾಕಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಪೊಲೀಸರು ದಾಳಿ ಮಾಡಿ ಅಪಹರಣಕಾರರನ್ನು ಬಂಧಿಸಿ, ಚೌಗಲೆ ಅವರನ್ನು ಸುರಕ್ಷಿತವಾಗಿ ಬಿಡಿಸಿ ತಂದಿದ್ದಾರೆ.
ಬೆಳಗಾವಿ ಮಹಾದ್ವಾರ ರಸ್ತೆಯ ವಿನಾಯಕ ಶಂಕರ ಪ್ರಧಾನ, ನ್ಯೂ ಗಾಂಧಿನಗರದ ಶ್ರೀನಾಥ ಅಲಿಯಾಸ ಪಿಂಟೂ ತಂದೆ ರಾನಬಾ ರೇಡೇಕರ್, ಫುಲಬಾಗ್ ಗಲ್ಲಿಯ ಅಮಿತ ಯಲ್ಲಪ್ಪ ಮಜಗಾವಿ, ಗಾಂಧಿನಗರದ ಮುರಾರಿ ಬಾಬಾಜಾನ್ ಖಾನಾಪುರಿ, ಹಡಲಗೆಯ ಸುರೇಶ ಮಹಾದೇವ ಪಾಟೀಲ, ರೈತಗಲ್ಲಿಯ ಅಮಿತ ಪರಶುರಾಮ ಧಾಮಣೆಕರ್, ಆನಗೋಳದ ಸಂಜಯ ಪ್ರಕಾಶ ಕೌಜಲಗಿ ಅಲಿಯಾಸ ಭಜಂತ್ರಿ, ಮಾರುತಿ ನಗರದ ರಾಜು ಜ್ಞಾನೇಶ್ವರ ಗೋಣಿ, ಬೆಳವಟ್ಟಿಯ ಚೇತನ್ ನಾರಾಯಣ ಪಾಟೀಲ ಬಂಧಿತರು.
ಬಂಧಿತರಿಂದ ಕಾರು, 5 ಮೋಟಾರ್ ಸೈಕಲ್, 11 ಮೊಬೈಲ್ ಸೇರಿ 8 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎಸಿಪಿ ನಾರಾಯಣ ಬರಮನಿ ನೇತೃತ್ವದಲ್ಲಿ ಮಾರ್ಕೆಟ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಸಂಗಮೇಶ ಶಿವಯೋಗಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ