ಪ್ರಗತಿವಾಹಿನಿ ಸುದ್ದಿ, ರಾಮದುರ್ಗ: ಹಲವು ದರೋಡೆ, ಅಪಹರಣ ಪ್ರಕರಣಗಳಲ್ಲಿ ಶಾಮೀಲಾಗಿದ್ದ ಗ್ಯಾಂಗ್ ಒಂದರ ಎಂಟು ಜನ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.
ಕಾಸಿಂಸಾಬ್ ಶೇಖ್, ವಿಜಯ ಲಮಾಣಿ, ಮುಖ್ತಾರ್ ಶೇಖ್, ಫಿರ್ದೋಶಿ ಉಸ್ತಾದ್, ಮಹಮ್ಮದ್ ಹುಸೇನ್ ಶೇಖ್, ಜಮೀರ್ ಮುನ್ಶಿ, ಮಹಮ್ಮದ್ ಖೈಫ್ @ ಕಲ್ಪನಾ ಕೊಡ್ಕಿ ಬಂಧಿತರು. ಇವರು ಹಲವು ದರೋಡೆ ಪ್ರಕರಣಗಳಲ್ಲಿ ಶಾಮೀಲಾಗಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
2022ರ ಅಕ್ಟೋಬರ್ 25ರಂದು ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯ ಬನ್ನೂರ ತಾಂಡಾದ ಚಂದ್ರು ಶಂಕರ ರಜಪೂತ ಎಂಬುವವರ ಮನೆಗೆ ಮಾರಕಾಸ್ತ್ರಗಳೊಂದಿಗೆ ನುಗ್ಗಿ ಮನೆಯ ಜನರ ಬಾಯಿಗೆ ಬಟ್ಟೆ ಕಟ್ಟಿ ಹೆದರಿಸಿ ಬೆಡ್ ರೂಂನಲ್ಲಿದ್ದ ತಿಜೋರಿಯ ಕೀಲಿ ಪಡೆದು 23,69,900 ರೂ. ನಗದು, 6,30,000 ರೂ. ಮೌಲ್ಯದ 158 ಗ್ರಾಂ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದರು.
ಕಳೆದ ಫೆ.9ರಂದು ರಾಮದುರ್ಗದ ಆಂಜನೇಯನಗರ ನಿವಾಸಿ ಮುಖೇಶಕುಮಾರ್ ಪ್ರಭುಲಾಲಜಿ ಸ್ವಾಲಕಾ ಎಂಬುವವರು ತಮ್ಮ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಮಿನಿ ವಿಧಾನಸೌಧದ ಬಳಿ ಅವರನ್ನು ತಡೆದು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಅವರ ಚಿನ್ನದ ಚೈನ್, ಕಡಗ, ಅವರ ಬಳಿ ಇದ್ದ 1.05ಲಕ್ಷ ರೂ. ನಗದು ಹಾಗೂ ಮೊಬೈಲ್ ಫೋನ್ ದೋಚಿ ಪರಾರಿಯಾಗಿದ್ದರು.
ರಾಮದುರ್ಗ ಡಿಎಸ್ಪಿ ಮಾರ್ಗದರ್ಶನದಲ್ಲಿ ಸಿಪಿಐ ಐ.ಆರ್.ಪಟ್ಟಣಶೆಟ್ಟಿ ನೇತೃತ್ವದಲ್ಲಿ ರಾಮದುರ್ಗ ಪಿಎಸ್ಐ ಶಿವಾನಂದ ಕಾರಜೋಳ, ಕಟಕೋಳ ಠಾಣೆ ಪಿಎಸ್ಐ ಶಿದ್ರಾಮಪ್ಪ ಉನ್ನದ, ರಾಮದುರ್ಗ ವೃತ್ತ ಕಚೇರಿ ಎಎಸ್ಐ ಎಲ್.ಟಿ. ಪವಾರ, ಸಿಬ್ಬಂದಿ ವೈ.ಜಿ.ಕೋಟಿ, ಡಿ.ಎಫ್.ನದಾಫ್, ಎಂ.ಎಂ.ಪಡಸಲಗಿ ಆರೋಪಿಗಳ ಬಂಧನ ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದರು.
ಆರೋಪಿತರಿಂದ 4 ಕಾರುಗಳು, 2 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ