ಪ್ರಗತಿ ವಾಹಿನಿ ಸುದ್ದಿ ನವದೆಹಲಿ –
ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಮಾರಿಯಾ ತಾಹೀರ್ ಎಂಬ ಅತ್ಯಾಚಾರ ಸಂತ್ರಸ್ತ ಮಹಿಳೆ ತನ್ನನ್ನು ಮತ್ತು ತನ್ನ ಮಕ್ಕಳನ್ನು ಭಾರತಕ್ಕೆ ಕರೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೊರೆಯಿಟ್ಟಿದ್ದಾರೆ. ಈ ಕುರಿತು ವಿಡಿಯೋ ಒಂದನ್ನು ಅವರು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಪಿಒಕೆಯಲ್ಲಿ ಜನರ ಬದುಕು ದುಸ್ತರವಾಗಿದೆ. ಪಾಕಿಸ್ತಾನ ಸರಕಾರ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದ್ದು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಅವರು ಆರೋಪಿಸಿದ್ದಾರೆ.
ಸ್ಥಳೀಯ ರಾಜಕೀಯ ಮುಖಂಡ ಚೌದರಿ ತಾರೀಖ್ ಫಾರೂಕ್ ಮತ್ತು ಪೊಲೀಸರು ಯಾವುದೇ ಕ್ಷಣದಲ್ಲಿ ನನ್ನನ್ನು ಮತ್ತು ನನ್ನ ಮಕ್ಕಳನ್ನು ಕೊಲ್ಲುವ ಆತಂಕವಿದೆ, ನಾನು ಗ್ಯಾಂಗ್ ರೇಪ್‌ಗೆ ಒಳಗಾಗಿರುವ ಸಂತ್ರಸ್ತೆ, ಕಳೆದ ಏಳು ವರ್ಷಗಳಿಂದ ನ್ಯಾಯಕ್ಕಾಗಿ ಬಡಿದಾಡುತ್ತಿದ್ದೇನೆ. ಆದರೆ ಪಾಕ್ ಆಕ್ರಮಿತ ಕಾಶ್ಮೀರದ ಆಡಳಿತ ವ್ಯವಸ್ಥೆ, ನ್ಯಾಯಾಲಯಗಳು ನನಗೆ ನ್ಯಾಯ ಒದಗಿಸಲು ಸಂಪೂರ್ಣ ವಿಫಲವಾಗಿವೆ ಎಂದು ಅವರು ಆಕ್ರಂದನ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ