Kannada NewsPragativahini Special

ಬಯಸಿದ್ದೆಲ್ಲ ಸಿಗುವುದು ಬಾಳಲ್ಲಿ!


ಜಯಶ್ರೀ ಜೆ. ಅಬ್ಬಿಗೇರಿ

ಪೀಠೋಕರಣಗಳಿಂದ ಅಲಂಕೃತ ವೈಭವೋಪೇತ ಮಹಲಿನಲ್ಲಿ ಇರಬೇಕೆಂದು ನಾವೆಲ್ಲ ಹಂಬಲಿಸುತ್ತೇವೆ. ಗೆಲುವಿನ ಸರದಾರರಾಗಬೇಕೆಂದು ಕನಸು ಕಾಣುತ್ತೇವೆ. ಕೇವಲ ಅಪೇಕ್ಷೆ ಮತ್ತು ಹಂಬಲದಿಂದ ಎಲ್ಲವೂ ನೆರವೇರುವುದಿಲ್ಲ. ಅದಕ್ಕೆ ಬೆವರ ಧಾರೆಯನ್ನು ಹರಿಸಬೇಕು. ಕಾರ್ಯಕ್ಷೇತ್ರವನ್ನು ವಿಸ್ತರಿಸಬೇಕು. ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಬೇಕು. ಎಂಬ ಸಾಮಾನ್ಯ ಜ್ಞಾನ ನಮ್ಮಲಿಲ್ಲ ಅಂತೇನಿಲ್ಲ. ಶ್ರಮದಲ್ಲಿ ಗೆಲುವು ಅಡಗಿದೆ. ಅವಿರತ ಶ್ರಮದ ಫಲವಾಗಿ ದೊರೆಯುವುದೇ ಯಶಸ್ಸು. ಎಂಬುದು ಗೊತ್ತಿದೆ. ಏನೆಲ್ಲ ಗೊತ್ತಿದ್ದರೂ ನಾವೇಕೆ ಹೀಗಿರುವುದು ಎಂಬ ಪ್ರಶ್ನೆ ತಲೆ ತಿನ್ನುತ್ತದೆ.


ಗೊತ್ತಿದ್ದ ಮಾತ್ರಕ್ಕೆ , , , ,
ವ್ಯಾಯಾಮ ಮಾಡಿದರೆ ತೂಕ ಕಡಿಮೆಯಾಗುತ್ತದೆ. ಎಂಬುದು ಬೊಜ್ಜು ಮೈ ಇರುವವರಿಗೆ ಗೊತ್ತಿದೆ. ಚೆನ್ನಾಗಿ ಓದಿದರೆ ಉತ್ತಮ ಅಂಕ ಪಡೆಯಲು ಸಾಧ್ಯ. ಎಂಬುದು ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಗೊತ್ತಿದೆ. ಬೆಳಿಗ್ಗೆ ಬೇಗ ಎದ್ದು ಧ್ಯಾನ ಮಾಡಿದರೆ ಸಮಾಧಾನವಾಗಿರಬಹುದು. ಎನ್ನುವುದು ಕಿರಿಕಿರಿ ಅನುಭವಿಸುತ್ತಿರುವವರಿಗೆ ಗೊತ್ತು. ಆದರೂ ಅವರೆಲ್ಲ ಇದ್ದ ದೇಹ ಸ್ಥಿತಿಯಲ್ಲಿ ಇದ್ದ ಮನಸ್ಥಿತಿಯಲ್ಲೇ ಇರುತ್ತಾರೆ ಏಕೆ? ಏಕೆಂದರೆ ಕೇವಲ ಗೊತ್ತಿದ್ದ ಮಾತ್ರಕ್ಕೆ ಬದುಕು ಬದಲಾಗುವುದಿಲ್ಲ. ಗೊತ್ತಿದ್ದುದ್ದನ್ನು ಕಾರ್ಯನುಷ್ಟಾನಕ್ಕೆ ಇಳಿಸಬೇಕು. ಆಗ ಮಾತ್ರ ಬಯಸಿದ್ದು ಸಿಗುತ್ತದೆ. ಗೊತ್ತಿರುವ ವಿಷಯವನ್ನು ಕಾರ್ಯಾನುಷ್ಟಾನಕ್ಕೆ ತರುವ ವಿಷಯದಲ್ಲಿ ಪರಿಣತಿ ಹೊಂದಿದರೆ ಅರ್ಧಕ್ಕರ್ಧ ಸಮಸ್ಯೆಗಳು ನಮ್ಮ ಹತ್ತಿರ ಬರುವ ಮುನ್ನವೇ ಬಗೆ ಹರಿದು ಹೋಗುತ್ತವೆ. ಪರಿಶ್ರಮಕ್ಕೆ ಪರ್ಯಾಯವೆಂಬುದಿಲ್ಲ. ಹಾಗಿದ್ದರೆ ಶ್ರಮದಿಂದ ಬಯಸಿದ್ದನ್ನು ಹೇಗೆ ಪಡೆಯಬಹುದು ಎಂಬುದನ್ನು ನೋಡೋಣ ಬನ್ನಿ.


ಸ್ವಯಂ ಮೌಲ್ಯಮಾಪನವಿರಲಿ

ಅಪೇಕ್ಷೆಪಟ್ಟರೆ ಹಂಬಲಿಸಿದರೆ ಸಾಲದು.ಶ್ರಮದ ಕೆಲಸವನ್ನು ಬಿತ್ತಿದರೆ ಬೇಕಾದ್ದನ್ನು ಪಡೆಯಬಹುದು. ಕೆಲಸಗಾರನೊಬ್ಬ ಹೆಚ್ಚಿನ ಕೆಲಸವನ್ನು ಕಡಿಮೆ ಸಮಯದಲ್ಲಿ ಮಾಡಿದಾಗ ಅದನ್ನು ಪ್ರಶಂಸಿದೇ ಇರಬಹುದು. ನೂರು ಉತ್ತಮ ಕೆಲಸ ಮಾಡಿ ಒಂದು ತಪ್ಪು ಮಾಡಿದರೆ ಮೇಲಾಧಿಕಾರಿಯ ಪ್ರತಿಕ್ರಿಯೆ ಏನಿರಬಹುದು ಊಹಿಸಿ. ಎಲ್ಲರನ್ನೂ ಎಲ್ಲ ಕಾಲದಲ್ಲೂ ಮೆಚ್ಚಿಸಲು ಆ ದೇವರಿಂದಲೂ ಸಾಧ್ಯವಿಲ್ಲ ಆ ಮಾತು ಬೇರೆ. ಉತ್ತಮ ಕೆಲಸಗಾರ ಬೇರೆಯವರೊಂದಿಗೆ ಪೈಪೋಟಿಗೆ ಇಳಿಯಲಾರ. ತನ್ನ ಕೆಲಸದ ಪರಿಯನ್ನು ಇನ್ನಷ್ಟು ಮತ್ತಷ್ಟು ಸುಧಾರಿಸಲು ಪ್ರಯತ್ನಿಸುತ್ತಾನೆ. ಅವನು ತನ್ನ ಸಾಧನೆಯನ್ನು ತನ್ನ ಸಾಮರ್ಥ್ಯದೊಂದಿಗೆ ಹೋಲಿಸಿಕೊಳ್ಳುತ್ತಾನೆ. ಇನ್ನೊಂದು ಗಮನಾರ್ಹ ವಿಷಯವೆಂದರೆ,ಅವನು ಸ್ವತಃ ತನ್ನ ವಿರುದ್ಧವೇ ಸ್ಪರ್ಧಿಸುತ್ತಾನೆ. ನಮ್ಮನ್ನು ನಾವು ಅರಿಯಲು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಲು ಕೆಲಸ ಒಂದು ಅತ್ಯುತ್ತಮ ಸಾಧನ. ನಾವು ಏನನ್ನು ಮಾಡುತ್ತೇವೆ. ಏನನ್ನು ಮಾಡಲು ಇಷ್ಟಪಡುವುದಿಲ್ಲ ಎಂಬುದನ್ನು ಆಧರಿಸಿ ನಮ್ಮ ಗುಣವನ್ನು ನಿರ್ಧರಿಸಬಹುದು. ಸಮಾಧಾನ ಚಿತ್ತದಿಂದ ಒರೆಗೆ ಹಚ್ಚಿದಾಗ ಅನೇಕ ಸಂಕಷ್ಟಗಳು ದೂರ ಸರಿಯುತ್ತವೆ. ನಮ್ಮ ಒಳಹರಿವನ್ನು ಪ್ರಚೊದಿಸಿದಾಗ ಹತ್ತು ಹಲವು ಸಾದ್ಯತೆಗಳು ತೆರೆದುಕೊಳ್ಳುತ್ತವೆ.


ಯೋಚನಾ ಲಹರಿ
ಯೋಚನೆಗಳು ಗಾಣಕ್ಕೆ ಕಟ್ಟಿದ ಎತ್ತಿನಂತೆ ಒಂದೇ ಸಮ ಸುತ್ತುತ್ತಿರಬಾರದು. ನಮ್ಮ ಯೋಚನೆಗಳಿಂದ ಯಾವುದೇ ಕ್ಷೇತ್ರದಲ್ಲಿ ಅಪೇಕ್ಷಿತ ಗೆಲುವನ್ನು ಪಡೆಯಬಹುದು. ತಾಳಿದವನು ಬಾಳಿಯಾನು ಎಂಬ ಮೂಲಮಂತ್ರ ಯಾವತ್ತೂ ನಮಗೆ ಜತೆಗಿರಬೇಕು. ನಡೆ-ನುಡಿ ವರ್ತನೆ ಹಾವಭಾವಗಳು ಉತ್ತಮ ಮನೋಭಾವಗಳನ್ನು ಕಾಪಿಟ್ಟುಕೊಳ್ಳಬೇಕು. ಇದರೊಂದಿಗೆ ಉತ್ಸಾಹ ಲವಲವಿಕೆಯನ್ನು ಪೋಷಿಸಬೇಕು ಮಂಜುಗಡ್ಡೆಯ ಬಹುಪಾಲು ನೀರೊಳಗೆ ಮುಳುಗಿರುವಂತೆ ನಮ್ಮ ಯೋಚನೆಗಳು ಶಕ್ತಿಗಳು ನಮಗೆ ಪರಿಚಯವಿಲ್ಲದೇ ಮುಚ್ಚಿಹೋಗಿರುತ್ತವೆ. ಆದ್ದರಿಂದ ಈಗಾಗಲೇ ಸಾಧಿಸಿ ಮುಂಚೂಣಿಯಲ್ಲಿ ಇರುವವರ ಹತ್ತಿರ ನಮ್ಮ ಕೊರತೆಗಳನ್ನು ಗಮನಿಸಿ ಸೂಕ್ತ ಸಲಹೆ ಸಹಾಯ ನೀಡಲು ಕೇಳಿಕೊಳ್ಳಬೇಕು. ಇದರಿಂದ ನಮ್ಮ ಯೋಚನಾ ಲಹರಿ ಬದಲಾಗುವುದು ಅಷ್ಟೇ ಅಲ್ಲ ಸ್ಪೂರ್ತಿಯನ್ನು ನೀಡುತ್ತದೆ. ನೆನಪಿರಲಿ: ಕಾಲಕ್ಕೆ ಸರಿಯಾಗಿ ಅನುಸರಿಸದಿದ್ದಲ್ಲಿ ಒಳ್ಳೆಯ ಸಲಹೆಗಳು ಸಹ ಕೆಟ್ಟ ಸಲಹೆಯಾಗುತ್ತವೆ.


ಒಳನೋಟವಿರಲಿ
ಜಗತ್ತು ಅಚ್ಚರಿಯಿಂದ ನೋಡುವಂತಹ ಸಾಧಕರಲ್ಲಿ ಅನೇಕರು ಬಡ ಕುಟುಂಬದಲ್ಲಿ ಜನಿಸಿದವರೆ ಆಗಿದ್ದಾರೆ. ಅವರೆಲ್ಲ ನವ ನಾವಿನ್ಯತೆಯ ಕನಸು ಕಂಡು ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಗೆಲುವಿನ ಶಿಖರವನ್ನು ಒಮ್ಮೆಲೇ ಹತ್ತಿಲ್ಲ ಎಂಬುದು ಸರ್ವವಿಧಿತ. ಚಿಟ್ಟೆ ಮೊದಲು ಮೊಟ್ಟೆಯಾಗಿ ನಂತರ ಹುಳುವಾಗಿ ತನ್ನ ಸುತ್ತಮತ್ತ ಕೋಶ ಕಟ್ಟಿಕೊಂಡು ಕೆಲವು ದಿನ ಅದರಲ್ಲೇ ಇದ್ದು ತನಗೆ ತಾನೇ ಶಿಕ್ಷೆ ವಿಧಿಸಿಕೊಳ್ಳುತ್ತದೆ. ನಂತರ ಸುಂದರ ಚಿಟ್ಟೆಯಾಗಿ ಹೊರಹೊಮ್ಮುತ್ತದೆ. ನಮ್ಮೆಲ್ಲರ ಕಣ್ಮನ ಸೆಳೆಯುತ್ತದೆ. ಚಿಟ್ಟೆಯಂತೆ ನಮಗೆ ನಾವು ಲಕ್ಷ್ಮಣ ಗೆರೆ ಹಾಕಿಕೊಂಡು ಬೇರೆ ಸೆಳೆತಗಳಿಗೆ ಒಳಗಾಗದಂತೆ ಕಠಿಣ ಶ್ರಮಪಟ್ಟಾಗಲೇ ಕನಸುಗಳೆಲ್ಲ ಸಾಕಾರಗೊಂಡವು. ಬದುಕು ಕೊಡುವ ಪೆಟ್ಟುಗಳಿಗೆ ಹಾದಿಯಲ್ಲಿ ಅಡ್ಡನಿಂತ ಅಡೆತಡೆಗಳಿಗೆ ಸುಲಭವಾಗಿ ಸೋಲಬಾರದು. ಬದಲಾಗಿ ಬಂದೊದಗಿದ ಪರಿಸ್ಥಿತಿಯನ್ನು ಬದಲಾವಣೆಗೆ ಒಳನೋಟವನ್ನು ಬದಲಿಸಿಕೊಳ್ಳಬೇಕು.


ಕುಗ್ಗದ ಜಗ್ಗದ ಮುನ್ನಡೆಯಿರಲಿ
ಸಾಧಕರು ಕಷ್ಟ-ಕೋಟಲೆ, ನೋವು-ಹತಾಶೆ ಅವಮಾನಗಳನ್ನು ಕಂಡುಂಡಿದ್ದಾರೆ. ಅವೆಲ್ಲವನ್ನೂ ಮೆಟ್ಟಿ ನಿಂತ ಮೇಲೆಯೇ ಅವರಿಗೆ ವಿಜಯದ ಮಾಲೆ ಒಲಿದು ಬಂದಿದೆ. ಸಾಮಾನ್ಯ ಜನರಂತೆ ಕೈಚೆಲ್ಲಿ ಕೂತಿದ್ದರೆ, ಹತಾಶರಾಗಿದ್ದರೆ ಸಾಧಕರ ಪಟ್ಟಿಯಲ್ಲಿ ಅವರ ಹೆಸರು ರಾರಾಜಿಸುತ್ತಿರಲಿಲ್ಲ. ಸಾಧನೆಯ ಹಾದಿಯಲ್ಲಿ ನಮ್ಮ ತಾಳ್ಮೆಯನ್ನು ಪರೀಕ್ಷಿಸುವಂತಹ ಧೈರ್ಯವನ್ನು ಕುಗ್ಗಿಸುವಂತಹ ಅನೇಕ ಸವಾಲುಗಳು ಎದುರಾಗುತ್ತವೆ. ಆಗ ಯಾರೂ ನಮ್ಮೊಂದಿಗಿಲ್ಲ ಎಂದು ಹೆದರಬಾರದು. ಅಂಥ ಸಂದರ್ಭದಲ್ಲಿ ನಮ್ಮ ಮೇಲೆ ನಾವು ನಂಬಿಕೆ ಇರಿಸಿಕೊಂಡು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಎಂಬ ಕವಿವಾಣಿಯಂತೆ ಯಾವುದಕ್ಕೂ ಕುಗ್ಗದೆ ಜಗ್ಗದೆ ಮುನ್ನಡೆಯಬೇಕು. ಆಗ ಮಾತ್ರ ಯಶಸ್ವಿ ವ್ಯಕ್ತಿಗಳಾಗಲು ಸಾಧ್ಯ. ಗೆಲುವು ಎಂದರೆ ಮತ್ತೊಬ್ಬರನ್ನು ಸೋಲಿಸುವುದಲ್ಲ. ನಮ್ಮ ಅರಿವಿನಿಂದ ಜ್ಞಾನದಿಂದ ನಮಗೆ ನಾವು ಉತ್ತಮರನ್ನಾಗಿ ಮಾಡಿಕೊಳ್ಳುವುದು. ಕ್ಷಣ ಕ್ಷಣಕ್ಕೂ ಬಯಸಿದ್ದನ್ನು ಪಡೆಯುವ ಭಾವ ಹೆಚ್ಚಾದಂತೆ ಅವಿರತ ಶ್ರಮ ಹೆಚ್ಚಾದರೆ ನಮ್ಮ ಭಾಗ್ಯಕ್ಕೆ ನಾವೇ ವಿಧಾತರಾಗಬಹುದು.


ಕೊನೆ ಹನಿ
ಸುಂದರ ಮೂರ್ತಿಯೊಂದು ಕಲ್ಲಿನಲ್ಲಿ ತಾನಾಗಿಯೇ ಅರಳುವುದಿಲ್ಲ. ಶಿಲ್ಪಿ ಕೊಟ್ಟ ಎಲ್ಲ ಪೆಟ್ಟುಗಳನ್ನು ಸಹಿಸಿಕೊಂಡಾಗಲೇ ಅದು ಪೂಜೆಗೆ ಅರ್ಹವಾದ ವಿಗ್ರಹವಾಗಿ ಮಾರ್ಪಾಟಾಗುತ್ತದೆ. ಆದ್ದರಿಂದ ನಾವು ವಿಪರೀತ ಆಘಾತಗಳು ಸತತ ಸೋಲಿಗೆ ನಿರಾಶೆಗೊಳ್ಳಬಾರದು. ಸಾಧನೆಗೆ ಸಾವಿಲ್ಲ ಎಂಬ ಬೀಜಮಂತ್ರವನ್ನು ಮನದ ಸ್ಮೃತಿಪುಟದಲ್ಲಿ ಅಚ್ಚೊತ್ತಿಕೊಂಡರೆ ಬೆಳೆಯುವ ಸಿರಿ ಕಮರಿಹೋಗುವುದನ್ನು ತಡೆಯಬಹುದು. ಹೊಂಗನಸುಗಳನ್ನು ನನಸಾಗಿಸುವುದು ಸಲೀಸು. ಸಮಸ್ಯೆಗಳನ್ನು ಸವಾಲುಗಳನ್ನಾಗಿ ಸ್ವೀಕರಿಸಬೇಕು. ಭೂತಕಾಲದ ಪಾಪ ಭವಿಷ್ಯದ ಚಿಂತೆ ಹೆಗಲಿಗೇರಿಸಿಕೊಳ್ಳಬಾರದು. ಒಂದೇ ಒಂದು ಸೋಲಿಗೆ ಹಿಂದೇಟು ಹಾಕುವ, ಕೈಲಾಗದೆಂದು ಕೈಚೆಲ್ಲಿ ಕುಳಿತುಕೊಳ್ಳುವ ಮನೋಭಾವ ತೊರೆಯಬೇಕು. ಸೋತವರೇ ತಾನೆ ಗೆಲ್ಲಲು ಸಾದ್ಯ? ಎನ್ನುವುದನ್ನು ಗಮನದಲ್ಲಿರಿಸಬೇಕು. ಬಯಸಿದ್ದನ್ನು ಪಡೆಯುವುದಕ್ಕೆ ರೆಡಿ ಫಾರ್ಮುಲಾ ಇಲ್ಲ. ಅದಕ್ಕೆ ಬೇಕಿರುವುದು ಪರಿಶ್ರಮ ಛಲ ಮತ್ತು ಹೋರಾಟ. ಇವುಗಳಿಗೆ ಜೋತು ಬಿದ್ದರೆ ಇಂದಲ್ಲ ನಾಳೆ ಬಯಸಿದ್ದೆಲ್ಲ ಸಿಗುವುದು ಬಾಳಲ್ಲಿ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button