
ಪ್ರಗತಿವಾಹಿನಿ ಸುದ್ದಿ: ಯುವಕ ಹಾಗೂ ಯುವತಿಯ ಶವ ಚಿಕ್ಕಮಗಳೂರಿನ ದಾಸರಹಳ್ಳಿ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿದೆ.
ಯುವತಿಯ ಶವ ಕಾರಿನಲ್ಲಿ ಪತ್ತೆಯಾಗಿದ್ದರೆ, ಯುವಕನ ಶವ ಅಲ್ಲಿಯೇ ಸಮೀಪವಿರುವ ಕಾಡಿನಲ್ಲಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. 25-30 ವರ್ಷದ ಆಸುಪಾಸಿನ ಯುವತಿ ಹಾಗೂ ಯುವಕ ಇರಬಹುದು ಎನ್ನಲಾಗಿದೆ.
ಕಾರಿನಲ್ಲಿ ಶವವಾಗಿ ಪತ್ತೆಯಾಗಿರುವ ಯುವತಿಯ ಕತ್ತಿನಲ್ಲಿ ಗಾಯಗಳಾಗಿದ್ದು, ಕತ್ತು ಹಿಸುಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಯುವಕನೇ ಪ್ರೀತಿಸಿದ ಯುವತಿಯನ್ನು ಕೊಂದು ಬಳಿಕ ನೇಣಿಗೆ ಶರಣಾಗಿರಬಹುದು ಎನ್ನಲಾಗಿದೆ. ಸ್ಥಳಕ್ಕೆ ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.