
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬ್ಯಾಂಕಿಂಗ್ ನೌಕರರಿಗೆ ಐದು ದಿನಗಳ ಕೆಲಸದ ಅವಧಿ ಜಾರಿಗೆ ತಂದು ಪ್ರತಿ ರವಿವಾರ ಹಾಗೂ ಶನಿವಾರ ರಜೆ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
ಮಂಗಳವಾರ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ವತಿಯಿಂದ ಬೆಳಗಾವಿ ನಗರದ ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜ ವೃತ್ತದಿಂದ ಪ್ರತಿಭಟನಾ ರ್ಯಾಲಿಯನ್ನು ನಡೆಸಲಾಯಿತು.
ಬ್ಯಾಂಕ್ ನೌಕರರ ದೀರ್ಘಕಾಲದ ಬೇಡಿಕೆಯಾದ ವಾರದ ಐದು ದಿನಗಳ ಕೆಲಸದ ಪದ್ಧತಿಯನ್ನು ಜಾರಿಗೆ ತರಲು ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ ಆಕ್ರೋಶ ಹೊರ ಹಾಕಲಾಯಿತು.
ಈಗಾಗಲೇ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಜಾರಿಯಲ್ಲಿದೆ. ಉಳಿದ ಶನಿವಾರಗಳನ್ನೂ ರಜಾ ದಿನಗಳೆಂದು ಘೋಷಿಸುವ ಬದಲಾಗಿ, ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ 40 ನಿಮಿಷಗಳ ಹೆಚ್ಚುವರಿ ಕೆಲಸ ಮಾಡಲು ನೌಕರರು ಸಿದ್ಧರಿದ್ದಾರೆ. ಈ ಯೋಜನೆಗೆ ಐಬಿಎ ಒಪ್ಪಿಗೆ ಸೂಚಿಸಿದ್ದರೂ, ಕೇಂದ್ರ ಹಣಕಾಸು ಸಚಿವಾಲಯವು ಅಂತಿಮ ಮುದ್ರೆ ಒತ್ತಲು ವಿಳಂಬ ಮಾಡುತ್ತಿರುವುದು ನೌಕರರ ಹಿತಾಸಕ್ತಿಗೆ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಕೂಡಲೇ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರ ಎಚ್ಚರಿಕೆ ನೀಡಿದರು.
2024ರ ಮಾರ್ಚ್ನಲ್ಲಿ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮತ್ತು ನೌಕರರ ಒಕ್ಕೂಟಗಳ ನಡುವೆ ಈ ಕುರಿತು ಐತಿಹಾಸಿಕ ಒಪ್ಪಂದವಾಗಿದ್ದರೂ, ಕಳೆದ ಎರಡು ವರ್ಷಗಳಿಂದ ಈ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿ ಬಾಕಿ ಉಳಿದಿದೆ. ಇದರಿಂದ ಕೆರಳಿದ ನೌಕರರು ಇಂದು ಜಿಲ್ಲೆಯಾದ್ಯಂತ ಬ್ಯಾಂಕಿಂಗ್ ಸೇವೆಗಳನ್ನು ಸ್ಥಗಿತಗೊಳಿಸಿ ಪ್ರತಿಭಟಿಸಿದರು.




