* ಸರಿಯಾಗಿ ಪರಿಹಾರ ಕೊಡಿ ಇಲ್ಲವೆ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸರ್ಕಾರ ರೈತರಿಗೆಲ್ಲರಿಗೂ ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ, ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಬೇಕು ಎಂದು ವಿವಿಧ ಸಂಘಟನೆವತಿಯಿಂದ ಆಗ್ರಹಿಸಿ ಪ್ರತಿಭಟಿಸಲಾಯಿತು.
ಪ್ರವಾಹ ಸಂತ್ರಸ್ತರಿಗೆ ಹಾಗೂ ಮಳೆಯಿಂದ ಹಾನಿಯಾದ ಬೆಳೆಗಳಿಗೆ ಶೀಘ್ರ ಪರಿಹಾರ ಒದಗಿಸುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ, ಉತ್ತರ ಕರ್ನಾಟಕ ಹೋರಾಟ ಸಮಿತಿ, ಪ್ರವಾಹ ಸಂತ್ರಸ್ತರ ಹಿತರಕ್ಷಣ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟಿಸಿ, ಇಂದು ಜಿಲ್ಲಾಧಿಕಾರಿಗ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿ ಸಾಕಷ್ಟು ಪ್ರಮಾಣದಲ್ಲಿ ಕೃಷಿ ಬೆಳೆ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿದೆ. ಮಳೆ ನೀರು ನಿಂತು ಸೋಯಾಬಿನ್, ತೊಗರಿ, ಹೆಸರು, ಕಬ್ಬು, ಭತ್ತ, ಶೇಂಗಾ ಸೇರಿದಂತೆ ಹಲವು ಬೆಳೆಗಳು ನಾಶವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ, ಪ್ರವಾಹದಿಂದ ರೈತರ ಮನೆಗಳು ಸಂಪೂರ್ಣ ನಾಶವಾಗಿವೆ. ನೀರಿನಲ್ಲಿ ಮುಳುಗಿ ಕೆಲ ಜನರು ಸಾವನ್ನಪ್ಪಿದಾರೆ ಹಾಗೂ ದೊಡ್ಡ ಪ್ರಮಾಣದಲ್ಲಿ ಜಾನುವಾರಗಳು ಮೃತಪಟ್ಟಿವೆ. ಇವುಗಳಿಗೆ ಕೂಡಲೇ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ಕ್ರಮ ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.
ಕನಿಷ್ಠ 2 ಎಕರೆ ಜಮೀನು ಹೊಂದಿರುವ ರೈತರಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ 5 ಸಾವಿರ ರೂ. ಮಾಶಾಸನ ನೀಡಬೇಕು. ರೈತರ ಪಂಪ್ ಸೆಟ್ ಗಳಿಗೆ ಪ್ರತಿದಿನ 10 ಗಂಟೆ ನಿರಂತರ ಉಚಿತ ವಿದ್ಯುತ್ ವಿತರಣೆ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪ್ರತಿ ವರ್ಷ ಒಂದು ಎಕರೆ ಜಮೀನು ಹೊಂದಿದವರಿಗೆ ರಸಗೊಬ್ಬರಕ್ಕಾಗಿ 25 ಸಾವಿರ ರೂ. ಕೊಡಬೇಕು. ಪ್ರತಿ ಟನ್ ಕಬ್ಬಿಗೆ ಕನಿಷ್ಠ 5 ಸಾವಿರ ರೂಪಾಯಿ ನಿಗದಿ ಮಾಡಬೇಕು ಹಾಗೂ ಅತಿವೃಷ್ಟಿಯಿಂದ ಸಂಕಷ್ಟದಲ್ಲಿರುವ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಅನ್ಯ ರಾಜ್ಯಗಳಿಗೆ ಸಂಕಷ್ಟ ಬಂದಾಗ ಸ್ಪಂದಿಸುವ ಸರ್ಕಾರಗಳು ಉತ್ತರ ಕರ್ನಾಟಕವನ್ನೇಕೆ ನಿರ್ಲಕ್ಷಿಸುತ್ತಿದ್ದೀರಿ. ಇಲ್ಲಿ ಸಾಕಷ್ಟು ಪ್ರಮಾಣದ ಬೆಳೆ ಹಾನಿಯಾಗಿ ಸಾವು ನೋವು ಸಂಭವಿಸಿವೆ. ಆದರೂ, ಕೂಡ ಸರ್ಕಾರದ ಯಾವೊಬ್ಬ ಮಂತ್ರಿಯೂ ರೈತರ ಬಗ್ಗೆ ಗಮನಹರಿಸುತ್ತಿಲ್ಲ. ಹಾಗೂ ಕೂಡಲೇ ಪರಿಹಾರ ಒದಗಿಸಬೇಕು. ಇಲ್ಲವೇ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವಾಗಿ ಮಾಡಬೇಕೆಂದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈ ವೇಳೆ ಅಡಿವೇಶ ಇಟಗಿ, ಶ್ರೀಕಾಂತ ಮಧು ಬರಮನ್ನವರ, ಮಹಾಂತೇಶ ಶೆಲಿಕೇರಿ, ಮಹೇಶ ಪಾಟೀಲ, ಸೇರಿದಂತೆ ಇತರರು ಉಪಸ್ಥಿತರಿದ್ದರು.