‘ದಿ ಕಾಶ್ಮೀರ್ ಫೈಲ್ಸ್’ನಂತೆ ‘ಗೋವಾ ಫೈಲ್ಸ್’ ಬಗ್ಗೆಯೂ ಚರ್ಚಿಸುವೆವು! – ರಮೇಶ ಶಿಂದೆ
ಪ್ರಗತಿವಾಹಿನಿ ಸುದ್ದಿ, ಪಣಜಿ (ಗೋವಾ) – ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರವು ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯವನ್ನು ವಿಶ್ವದಾದ್ಯಂತ ಬಯಲಿಗೆಳೆಯಿತು. ಅನಂತರ ‘ದಿ ಕೇರಳ ಸ್ಟೋರಿ’ ಚಲನಚಿತ್ರದಿಂದ ‘ಲವ್ ಜಿಹಾದ್’ ಮೂಲಕ ಹಿಂದೂ ಹುಡುಗಿಯರನ್ನು ಮತಾಂತರಿಸಿ ಜಿಹಾದಿ ಭಯೋತ್ಪಾದನೆಗೆ ಬಳಸಿಕೊಳ್ಳುವ ಸಂಚು ರೂಪಿಸಿರುವುದನ್ನು ಮಂಡಿಸಲಾಯಿತು. ಗೋವಾದಲ್ಲಿಯೂ ಪೋರ್ಚುಗೀಸರು ‘ಇನ್ಕ್ವಿಝೀಶನ’ನ ಹೆಸರಿನಲ್ಲಿ ಜನರ ಮೇಲೆ ನಡೆಸಿದ ಅಮಾನವೀಯ ದೌರ್ಜನ್ಯ ಇಡೀ ದೇಶಕ್ಕೆ ತಿಳಿಯಬೇಕು. ಗೋವಾದ ನಿಜವಾದ ಇತಿಹಾಸವನ್ನು ಅರ್ಥಮಾಡಿಕೊಳ್ಳುವುದು ಜನರ ಮೂಲಭೂತ ಹಕ್ಕಾಗಿದೆ. ಕ್ರೈಸ್ತ ಧರ್ಮಗುರು ಪೋಪ್ ಇವರು ಜಗತ್ತಿನಾದ್ಯಂತ ಅನೇಕ ಸ್ಥಳಗಳಿಗೆ ಹೋಗಿ ಕ್ರೈಸ್ತರು ಮಾಡಿದ ಅಮಾನವೀಯ ದೌರ್ಜನ್ಯಕ್ಕೆ ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತಾರೆ. ಆ ರೀತಿ ಅವರು ಇದುವರೆಗೂ ಗೋವಾ ಜನರಲ್ಲಿ ಏಕೆ ಕ್ಷಮೆ ಕೇಳಿಲ್ಲ ? ಗೋವಾದ ಕರಾಳ ಇತಿಹಾಸವನ್ನು ಹೆಚ್ಚು ಕಾಲ ಸಾರ್ವಜನಿಕರಿಂದ ಮುಚ್ಚಿಡಲು ಸಾಧ್ಯವಿಲ್ಲ. ‘ಕಾಶ್ಮೀರ ಫೈಲ್ಸ್’ನಂತೆ ‘ಗೋವಾ ಫೈಲ್ಸ್’ ಬಗ್ಗೆಯೂ ಚರ್ಚೆಯಾಗಬೇಕು ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಯ ಆಂದೋಲನಕ್ಕೆ ವೇಗ ಸಿಗಲು, ಪ್ರತಿವರ್ಷದಂತೆ ಈ ವರ್ಷವೂ 16 ರಿಂದ 22 ಜೂನ್ 2023 ಈ ಕಾಲಾವಧಿಯಲ್ಲಿ ‘ಶ್ರೀ ರಾಮನಾಥ ದೇವಸ್ಥಾನ’, ಫೋಂಡಾ, ಗೋವಾದಲ್ಲಿ 11 ನೇಯ ‘ಅಖಿಲ ಭಾರತೀಯ ಹಿಂದು ರಾಷ್ಟ್ರ ಅಧಿವೇಶನ’ ಅಂದರೆ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ವನ್ನು ಆಯೋಜಿಸಲಾಗಿದೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಇವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ‘ಹೋಟೆಲ್ ಡೆಲ್ಮನ್’ನಲ್ಲಿ ಆಯೋಜಿಸಲಾದ ಈ ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕ ಸದ್ಗುರು ನೀಲೇಶ ಸಿಂಗಬಾಳ, ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಮತ್ತು ಹಿಂದೂ ವಿಧಿಜ್ಞ ಪರಿಷತ್ತಿನ ಗೋವಾ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ನಾಗೇಶ ಜೋಶಿ ಉಪಸ್ಥಿತರಿದ್ದರು.
ಈ ವೇಳೆ ಶ್ರೀ. ರಮೇಶ ಶಿಂದೆಯವರು ಮುಂದೆ ಮಾತನಾಡುತ್ತಾ, ಕಳೆದ 11 ವರ್ಷಗಳಿಂದ ಗೋವಾದಲ್ಲಿ ನಡೆಯುತ್ತಿರುವ ‘ಅಖಿಲ ಭಾರತ ಹಿಂದೂ ರಾಷ್ಟ್ರ ಅಧಿವೇಶನ’ದಿಂದಾಗಿ ಭಾರತದಲ್ಲಿ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ‘ಹಿಂದೂ ರಾಷ್ಟ್ರ’ದ ಚರ್ಚೆ ಆರಂಭವಾಗಿದೆ. ಹಿಂದೂ ರಾಷ್ಟ್ರಕ್ಕೆ ಆಗ್ರಹಿಸುವ ಹಲವು ವೇದಿಕೆಗಳು ಇಂದು ನಿರ್ಮಾಣವಾಗಿವೆ. ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ವೇದಿಕೆಯು ಒಂದು ರೀತಿಯಲ್ಲಿ ‘ಡಿಸ್ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ನಂತಹ ಪರಿಷತ್ತುಗಳಿಗೆ ವೈಶ್ವಿಕ ಮಟ್ಟದಲ್ಲಿ ಪ್ರತ್ಯುತ್ತರವಾಗಿದೆ. ಪ್ರಸ್ತುತ ದೇಶದ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ದೇಶದಲ್ಲಿ ಜಿಹಾದಿ ಭಯೋತ್ಪಾದಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂಧಿಸಲಾಗುತ್ತಿದೆ. ಹಿಂದೂ ಕಾರ್ಯಕರ್ತರ ಹತ್ಯೆ ಮಾಡಲಾಗುತ್ತಿದೆ. ಮಣಿಪುರ, ನಾಗಾಲ್ಯಾಂಡ್ ಮುಂತಾದ ರಾಜ್ಯಗಳಲ್ಲಿ ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಕಾಶ್ಮೀರದಿಂದ 370 ನೇ ಕಲಂಅನ್ನು ತೆಗೆದು ಹಾಕಿದ್ದರೂ ಅಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ. ಪಂಜಾಬ್‌ನಲ್ಲಿ ಖಲಿಸ್ತಾನವಾದಿಗಳು ಪೊಲೀಸ್-ಆಡಳಿತಕ್ಕೆ ಸವಾಲೊಡ್ಡುತ್ತಿದ್ದಾರೆ. ದೇಶಾದಾದ್ಯಂತ ಸಾಕ್ಷಿ, ಅನುರಾಧಾ, ಶ್ರದ್ಧಾ ವಾಕರ್ ಅವರಂತಹ ಅನೇಕ ಹಿಂದೂ ಹುಡುಗಿಯರನ್ನು ‘ಲವ್ ಜಿಹಾದಿ’ಗಳು ಬರ್ಬರವಾಗಿ ಹತ್ಯೆ ಮಾಡುತ್ತಿದ್ದಾರೆ. 2047 ರ ತನಕ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ನಿಷೇಧಿತ ಸಂಘಟನೆ ‘ಪಿಎಫ್‌ಐ’ ನಡೆಸಿದ ಯೋಜಿತ ಸಂಚು ದಾಖಲೆಗಳ ಮೂಲಕ ಬಹಿರಂಗವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಹಿಂದೂ ಧರ್ಮವು ದೇಶವನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಏಕೈಕ ಧರ್ಮವಾಗಿದೆ, ಅದು ವಿಶ್ವಬಂಧುತ್ವದ ಮತ್ತು ‘ವಸುಧೈವ ಕುಟುಂಬಕಮ್’ ಪರಿಕಲ್ಪನೆಯನ್ನು ಮಂಡಿಸುತ್ತದೆ. ಆದ್ದರಿಂದ, ಭಾರತವನ್ನು ಪುನಃ ವಿಭಜನೆಯಾಗದಂತೆ, ಆದರ್ಶ ರಾಮರಾಜ್ಯವನ್ನು ಅಂದರೆ ಹಿಂದೂ ರಾಷ್ಟ್ರವನ್ನು ಸ್ಥಾಪಿಸದೇ ಭಾರತಕ್ಕೆ ಬೇರೆ ಪರ್ಯಾಯವಿಲ್ಲ, ಎಂದು ಹೇಳಿದರು.
‘ಸನಾತನ ಸಂಸ್ಥೆ’ಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ ಇವರು ಮಾತನಾಡುತ್ತಾ, ಕಳೆದ ವರ್ಷದ ಹಿಂದೂ ಅಧಿವೇಶನದಲ್ಲಿ ನಿರ್ಧರಿಸಿದ್ದ ‘ದೇವಾಲಯ ಸಂಸ್ಕೃತಿ ರಕ್ಷಣೆ’ ನೀತಿಯ ಪ್ರಕಾರ, 12 ನವೆಂಬರ್ 2022 ರಂದು ಗೋವಾದ ಮ್ಹಾಪ್ಸಾದಲ್ಲಿ ಮತ್ತು 4 ಹಾಗೂ 5 ಫೆಬ್ರವರಿ 2023 ರಂದು ಮಹಾರಾಷ್ಟ್ರದ ಜಳಗಾವ್‌ದಲ್ಲಿ ‘ರಾಜ್ಯ ಮಟ್ಟದ ದೇವಸ್ಥಾನ ಪರಿಷತ್ತು’ಗಳನ್ನು ಆಯೋಜಿಸಲಾಗಿದೆ. ಮಹಾರಾಷ್ಟ್ರದಲ್ಲಿ ದೇವಸ್ಥಾನದ ಟ್ರಸ್ಟಿಗಳು ಸ್ಥಾಪಿಸಿರುವ ‘ಮಹಾರಾಷ್ಟ್ರ ಮಂದಿರ ಮಹಾಸಂಘ’ದ ವತಿಯಿಂದ ಮಹಾರಾಷ್ಟ್ರದಾದ್ಯಂತ ಇರುವ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸುವ ಉಪಕ್ರಮ ನಡೆಯುತ್ತಿದೆ. ಇಲ್ಲಿಯವರೆಗೆ 131 ಕ್ಕೂ ಹೆಚ್ಚು ದೇವಾಲಯಗಳು ವಸ್ತ್ರಸಂಹಿತೆಯನ್ನು ಜಾರಿಗೆ ತಂದಿವೆ ಮತ್ತು ಇದನ್ನು ದೇಶಾದ್ಯಂತ ವ್ಯಾಪಕವಾಗಿ ಅನುಸರಿಸಲಾಗಿದೆ. ಉತ್ತರಾಖಂಡ ರಾಜ್ಯದಲ್ಲಿಯೂ ಮೂರು ದೇವಸ್ಥಾನಗಳು ಇದನ್ನೇ ಅನುಸರಿಸಿವೆ. ಮಹಾರಾಷ್ಟ್ರದಂತೆ ಗೋವಾ, ಕರ್ನಾಟಕ, ಛತ್ತೀಸಗಢ, ದೆಹಲಿ ಹೀಗೆ ಮುಂತಾದ ರಾಜ್ಯಗಳಲ್ಲಿಯೂ ರಾಜ್ಯ ಮಟ್ಟದ ದೇವಸ್ಥಾನ ಪರಿಷತ್ತುಗಳು ಭವಿಷ್ಯದಲ್ಲಿ ಆಯೋಜಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕ ಸದ್ಗುರು ನೀಲೇಶ ಸಿಂಗಬಾಳ ಇವರು ಮಾತನಾಡುತ್ತಾ, ಈ ‘ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವ’ದಲ್ಲಿ ಅಮೆರಿಕ, ಇಂಗ್ಲೆಂಡ್, ಬೆಲ್ಜಿಯಂ, ಜರ್ಮನಿ, ಸಿಂಗಾಪುರ, ಇಂಡೋನೇಷಿಯಾ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಸೇರಿದಂತೆ ಭಾರತದ 28 ರಾಜ್ಯಗಳಲ್ಲಿನ 350 ಕ್ಕೂ ಹೆಚ್ಚು ಹಿಂದು ಸಂಘಟನೆಗಳ 1500ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ ಪ್ರತಿನಿಧಿಗಳಿಗೆ ಆಮಂತ್ರಣ ನೀಡಲಾಗಿದೆ. ಈ ಅಧಿವೇಶನಕ್ಕೆ ಸ್ವಾತಂತ್ರ್ಯವೀರ ಸಾವರಕರ ಇವರ ಮೊಮ್ಮಗ ಶ್ರೀ. ರಣಜಿತ ಸಾವರಕರ, ಕಾಶಿ-ಜ್ಞಾನವಾಪಿ ಮುಕ್ತಿಗಾಗಿ ನ್ಯಾಯಾಂಗ ಹೋರಾಟ ನಡೆಸುತ್ತಿರುವ ನ್ಯಾಯವಾದಿ ವಿಷ್ಣು ಶಂಕರ್ ಜೈನ್, ತೆಲಂಗಾಣದ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಗ್, ‘ಹಿಂದೂ ಇಕೋಸಿಸ್ಟಮ್’ ಸಂಸ್ಥಾಪಕ ಶ್ರೀ. ಕಪಿಲ ಮಿಶ್ರಾ, ‘ವಿಶ್ವ ಹಿಂದೂ ಪರಿಷತ್’ನ ಸಂಪರ್ಕ ಮುಖ್ಯಸ್ಥ ಧರ್ಮಾಚಾರ್ಯ ಹ.ಭ.ಪ.ದ ಜನಾರ್ದನ ಮಹಾರಾಜ ಮೆಟೆ, ‘ಭಾರತ್ ಮಾತಾ ಕಿ ಜೈ’ ಸಂಘಟನೆಯ ಶ್ರೀ. ಸುಭಾಷ ವೆಲಿಂಗಕರ ಸೇರಿದಂತೆ ಅನೇಕ ಉದ್ಯಮಿಗಳು, ವಿಚಾರವಂತರು, ಲೇಖಕರು, ದೇವಸ್ಥಾನದ ಟ್ರಸ್ಟಿಗಳು ಮತ್ತು ಸಮವಿಚಾರಿ ಸಾಮಾಜಿಕ, ರಾಷ್ಟ್ರೀಯ ಮತ್ತು ಆಧ್ಯಾತ್ಮಿಕ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಈ ಅಧಿವೇಶನದಲ್ಲಿ ರಾಷ್ಟ್ರಮಟ್ಟದಲ್ಲಿ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಹಿಂದೂ ಸಂಘಟನೆಗಳು ಒಟ್ಟಾಗುವ ಮೂಲಕ ‘ಹಿಂದೂ ರಾಷ್ಟ್ರ ಸಮನ್ವಯ ಸಮಿತಿ’ ಸ್ಥಾಪಿಸಲು ಪ್ರತ್ಯಕ್ಷ ಯೋಜನೆ ರೂಪಿಸಲಾಗುವುದು. ಸಮಾನ ಕ್ರಿಯಾ ಕಾರ್ಯಕ್ರಮದಡಿಯಲ್ಲಿ ‘ಲವ್ ಜಿಹಾದ್’, ‘ಹಲಾಲ್ ಸರ್ಟಿಫಿಕೇಟ್’, ’ದೇವಾಲಯಗಳ ಮುಕ್ತಿ’, ‘ಘರವಾಪಸಿ’ ಮುಂತಾದ ವಿಷಯಗಳನ್ನು ಚರ್ಚಿಸಲಾಗುವುದು. ಈ ಅಧಿವೇಶನದಲ್ಲಿ ವಿವಿಧ ವಿಚಾರ ಸಂಕಿರಣಗಳನ್ನು ಆಯೋಜಿಸಲಾಗಿದೆ. ಅದರಲ್ಲಿ ದೇವಾಲಯಗಳ ಉತ್ತಮ ನಿರ್ವಹಣೆ, ‘ಅಭಿವ್ಯಕ್ತಿ – ಸ್ವಾತಂತ್ರ್ಯವೋ ಜವಾಬ್ದಾರಿಯೋ ?’ ಮುಂತಾದ ವಿಷಯಗಳ ಕುರಿತು ವಿಚಾರ ಸಂಕಿರಣಗಳು ನಡೆಯಲಿವೆ, ಎಂದರು.
ಹಿಂದು ವಿಧಿಜ್ಞ ಪರಿಷತ್ತಿನ ನ್ಯಾಯವಾದಿ ನಾಗೇಶ ಜೋಶಿ ಇವರು ಮಾತನಾಡುತ್ತಾ, ಹಿಂದೂ ರಾಷ್ಟ್ರದ ಆಂದೋಲನವನ್ನು ಸಾಂವಿಧಾನಿಕವಾಗಿ ರೂಪಿಸುವಲ್ಲಿ ಜೊತೆಗೆ ಹಿಂದೂ ಹಿತಾಸಕ್ತಿಯ ವಿಷಯಗಳ ಬಗ್ಗೆ ನ್ಯಾಯಾಲಯದಲ್ಲಿ ಹೋರಾಟ ಮಾಡಲು ನ್ಯಾಯವಾದಿಗಳ ಪಾತ್ರ ದೊಡ್ಡದಿದೆ. ಈ ನಿಟ್ಟಿನಲ್ಲಿ 150 ಕ್ಕೂ ಹೆಚ್ಚು ನ್ಯಾಯವಾದಿಗಳು ಈ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಸ್ತುತ ‘ಸರ್ ತನ್ ಸೆ ಜುದಾ’ ಎಂದು ಘೋಷಣೆ ನೀಡುವವರನ್ನು ರಾಜಾರೋಷವಾಗಿ ಹಿಂದುತ್ವವಾದಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ‘ಹೇಟ್ ಸ್ಪೀಚ್’ನ ದೂರುಗಳಿಗೆ ಸಂಬಂಧಿಸಿದಂತೆ ಮಹೋತ್ಸವದಲ್ಲಿ ಒಂದು ಕಾನೂನುರಿತ್ಯಾ ಚರ್ಚೆಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಈ ಅಧಿವೇಶನದ ನೇರಪ್ರಸಾರವನ್ನು ಹಿಂದೂ ಜನಜಾಗೃತಿ ಸಮಿತಿಯ ವೆಬ್‌ಸೈಟ್ Hindujagruti.org ನಲ್ಲಿ ಹಾಗೆಯೇ ಯೂಟ್ಯೂಬ್ ಚಾನೆಲ್ Hindujagruti ಮತ್ತು facebook.com/hjshindi1 ಈ ಫೇಸ್ ಬುಕ್ ನಲ್ಲಿಯೂ ಪ್ರಸಾರವಾಗಲಿದೆ. ಜಗತ್ತಿನಾದ್ಯಂತ ಹಿಂದುತ್ವನಿಷ್ಠರು ಈ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಹಿಂದೂ ಜನಜಾಗೃತಿ ಸಮಿತಿಯು ಕರೆ ನೀಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ