Kannada NewsKarnataka News

ಬೆಳಗಾವಿಗೂ ವ್ಯವಹಾರ ವಿಸ್ತರಿಸಿದ ಜಾಗತಿಕ ಸಂಸ್ಥೆ ಫೋರ್ಸ್ ಎಂಟಿಯು

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜನರೇಟರ್ ಮತ್ತು ಎಂಜಿನ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಜಾಗತಿಕ ಮಟ್ಟದ ಫೋರ್ಸ್ ಎಂಟಿಯು ಸಂಸ್ಥೆ ಬೆಳಗಾವಿಯನ್ನು ಕೇಂದ್ರವಾಗಿರಿಸಿಕೊಂಡು ಉತ್ತರ ಕರ್ನಾಟಕಕ್ಕೂ ತನ್ನ ವ್ಯವಹಾರವನ್ನು ವಿಸ್ತರಿಸಿದೆ.

ಅಮೇರಿಕಾ, ಯುರೋಪ್ ಸೇರಿದಂತೆ ವಿಶ್ವದಾದ್ಯಂತ ಮಾರುಕಟ್ಟೆ ಜಾಲ ಹೊಂದಿರುವ ಫೋರ್ಸ್ ಎಂಟಿಯೂ ಜರ್ಮನ್ ಮೂಲದ ಸುಪ್ರಸಿದ್ಧ ರೋಲ್ಸ್ ರಾಯ್ಸ್ ನ ಸಹಭಾಗಿತ್ವದ ಸಂಸ್ಥೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆಯನ್ವಯ ಭಾರತೀಯ ಉದ್ಯಮಿಗಳ ಜೊತೆಗೆ ಶೇ.51ರ ಶೇರು ಬಂಡವಾಳದ ಸಹಯೋಗ ಹೊಂದಿದ್ದು, ಒಂದೂವರೆ ವರ್ಷದ ಹಿಂದೆ ಪುಣೆಯಲ್ಲಿ ಬೃಹತ್ ಉತ್ಪಾದನಾ ಘಟಕ ಆರಂಭಿಸಿದೆ. ಇಲ್ಲಿಂದಲೇ ಎಲ್ಲ ದೇಶಗಳಿಗೆ ಜನರೇಟರ್ ಮತ್ತು ಎಂಜಿನ್ ರಫ್ತಾಗುತ್ತಿದೆ.

 ಬೆಳಗಾವಿಯ ಪ್ರೊಗ್ರೆಸ್ಹಿವ್ ಟ್ರೇಡರ್ಸ್ ಸಂಪೂರ್ಣ ಉತ್ತರ ಕರ್ನಾಟಕದ ಡೀಲರ್ ಶಿಪ್ ವಹಿಸಿಕೊಂಡಿದ್ದು, ಶುಕ್ರವಾರ ಸಂಜೆ ಬೆಳಗಾವಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಫೋರ್ಸ್ ಎಂಟಿಯು ಸಿಇಒ ಪ್ರಮೋದ ವೈದ್ಯ ಅವರು ಪ್ರೊಗ್ರೆಸ್ಹಿವ್ ಟ್ರೇಡರ್ಸ್ ಮಾಲಿಕ ಪರಮೇಶ್ವರ ಹೆಗಡೆ ಅವರಿಗೆ ಅಧಿಕೃತವಾಗಿ ಡಿಲರ್ ಶಿಪ್ ವಹಿಸಿಕೊಟ್ಟರು.

ಈ ವೇಳೆ ಮಾತನಾಡಿದ ಪ್ರಮೋದ ವೈದ್ಯ, ಬೆಳಗಾವಿಯ ಮೂಲಕ ಸಂಪೂರ್ಣ ಉತ್ತರ ಕರ್ನಾಟಕದ ವ್ಯವಹಾರ ನಡೆಸಲು ತೀರ್ಮಾನಿಸಲಾಗಿದೆ. ಇಡೀ ವಿಶ್ವಕ್ಕೆ ಜನರೇಟರ್ ಪೂರೈಸುವ ಸಂಸ್ಥೆ, ಅಮೇರಿಕಾ ಒಂದರಲ್ಲೇ ಶೇ.35ರಷ್ಟು ಮಾರುಕಟ್ಟೆ ಹೊಂದಿದೆ. ಪರಿಸರ ಮತ್ತು ಆರೋಗ್ಯ ರಕ್ಷಣೆಗೆ ಫೋರ್ಸ್ ಎಟಿಯು ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದು, ಪರಿಸರ ಸ್ನೇಹಿ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು.

 ಕಳೆದ ಒಂದೂವರೆ ವರ್ಷದಿಂದ ಎಂಜಿನ್ ಉತ್ಪಾದನೆಯನ್ನೂ ಆರಂಭಿಸಿದ್ದು, ಭಾರತೀಯ ರೈಲ್ವೆ ಜೊತೆಗೂ ರೈಲ್ವೆ ಎಂಜಿನ್ ಪೂರೈಕೆ ಒಪ್ಪಂದ ಮಾಡಿಕೊಂಡಿದೆ. ಜಾಗತಿಕವಾಗಿ ಯಾವುದೇ ವ್ಯತ್ಯಾಸವಿಲ್ಲದೆ ಏಕರೂಪದ  ಗುಣಮಟ್ಟ ಕಾಯ್ದುಕೊಂಡಿರುವುದೂ ಸಂಸ್ಥೆಯ ವಿಶೇಷತೆಯಾಗಿದೆ. ಅತ್ಯಂತ ಹೆಚ್ಚು ಬಾಳಿಕೆಯ ಬಿಡಿಭಾಗಗಳ ಮೂಲಕ ಗುಣಮಟ್ಟದಲ್ಲಿ ಎಲ್ಲರಿಗಿಂತ ಅಗ್ರಗಣ್ಯ ಎನಿಸಿದೆ ಎಂದು ಅವರು ವಿವರಿಸಿದರು.

ಡೆಪ್ಯುಟ್ ಸಿಒಒ ದಿನೇಶ ಪಾಟೀಲ ಮಾತನಾಡಿ, ಫೋರ್ಸ್ ಎಂಟಿಯು ಕೇವಲ ಒಂದು ವರ್ಷದೊಳಗೆ ಪುಣೆ ಘಟಕ ಐಎಸ್ಒ ಸರ್ಟಿಫಿಕೇಟ್ ಪಡೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಅತ್ಯಂತ ಕಡಿಮೆ ನಿರ್ವಹಣೆ ವೆಚ್ಚದಿಂದಾಗಿ ಗ್ರಾಹಕರನ್ನು ಹೆಚ್ಚು ಸೆಳೆಯುತ್ತಿದೆ ಎಂದು ತಿಳಿಸಿದರು.

ಪ್ರೊಗ್ರೆಸ್ಹಿವ್ ಟ್ರೇಡರ್ಸ್ ಮಾಲಿಕ ಪರಮೇಶ್ವರ ಹೆಗಡೆ ಮಾತನಾಡಿ, ಕಳೆದ 43 ವರ್ಷಗಳಿಂದ ಪ್ರೊಗ್ರೆಸ್ಹಿವ್ ಟ್ರೇಡರ್ಸ್ ಬೆಳಗಾವಿಯಲ್ಲಿ ವ್ಯವಹಾರ ನಡೆಸುತ್ತಿದ್ದು, ಗ್ರಾಹಕರ ವಿಶ್ವಾಸ ಗಳಿಸಿಕೊಂಡಿದೆ. ಈಗ ಫೋರ್ಸ್ ಎಂಟಿಯು ಮೂಲಕ ಮತ್ತೊಂದು ಹೆಜ್ಜೆ ಮುಂದಿಡಲಾಗಿದೆ. ಎಂದಿನ ವಿಶ್ವಾಸದೊಂದಿಗೆ ವ್ಯವಹಾರ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಬೆಳಗಾವಿಯ ಮೊದಲ ಗ್ರಾಹಕ ದಯಾನಂದ ನೇತಲಕರ್ ಮಾತನಾಡಿ, ಫೋರ್ಸ್ ಎಂಟಿಯು ಪುಣೆಯಲ್ಲಿ ಜಾಗತಿಕ ಮಟ್ಟದ ಉತ್ಪಾದನಾ ಘಟಕ ಸ್ಥಾಪಿಸಿದೆ. ಸಂಸ್ಥೆಯ ಉತ್ಪನ್ನಗಳಉ ಅತ್ಯುತ್ತಮ ಗುಣಮಟ್ಟ ಹೊಂದಿರುವದರಿಂದ ಗ್ರಾಹಕರ ವಿಶ್ವಾಸಗಳಿಸುವಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು.

ಫೋರ್ಸ್ ಎಂಟಿಯು ಕ್ವಾಲಿಟ್ ಹೆಡ್ ಶೈಲೇಶ್ ಜಗತಾಪ್, ಅರವಿಂದ ವಳ್ಳಾಳ, ಪ್ರಜಕ್ತಾ ವಾಕಡೆ ಮಾತನಾಡಿದರು. ಖ್ಯಾತ ಉದ್ಯಮಿ ಗೋಪಾಲ ಜಿನಗೌಡ ದೀಪಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಋತ್ವಿಕ್ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮೇಧಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button