ಪ್ರಗತಿವಾಹಿನಿ ಸುದ್ದಿ: ಅಟ್ಟಹಾಸ ಮೆರೆಯುತ್ತಿದ್ದ ಹುಬ್ಬಳ್ಳಿ ರೌಡಿಗಳಿಗೆ ಪೊಲೀಸರು ತಮ್ಮ ಖದರ್ ತೋರಿಸುತ್ತಿದ್ದಾರೆ. ಈಗಾಗಲೇ ವಿವಿಧ ಠಾಣಾ ವ್ಯಾಪ್ತಿಯ ರೌಡಿಗಳ ಮನೆ ಮನೆಗೆ ತೆರಳಿ ಎಚ್ಚರಿಕೆ ನೀಡಿರುವ ಪೊಲೀಸರು, ಬಾಲ ಬಿಚ್ಚದಂತೆ ರೌಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರಿಂದ ಮತ್ತೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ‘ಪೊಲೀಸ್ ಏರಿಯಾ ಡಾಮಿನೇಷನ್’ ಶರುವಾಗಿದೆ.ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯ 20 ರೌಡಿಶೀಟರ್ ಹಾಗೂ ಮದ್ಯ ಕುಡಿದು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ 45 ಜನರನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 50 ಜನರ ವಿರುದ್ಧ ಕೆಪಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಎಚ್ಚರಿಕೆಯನ್ನೂ ನೀಡಲಾಗಿದೆ.
ವಶಕ್ಕೆ ಪಡೆದವರ ಇಂದಿನ ಹಾಗೂ ಹಿಂದಿನ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ತೀವ್ರ ನಿಗಾ ಇಡಲಾಗಿದೆ. ಸೂಕ್ತ ಬುದ್ದಿವಾದ ಹೇಳುವಂತೆ ಪೋಷಕರಿಗೆ ಸೂಚನೆ ನೀಡಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ