
ಅಲಾತ್ರಿ ಹಳ್ಳಕ್ಕೆ ಪ್ರವಾಹ: ಸಿಂಧನೂರು-ಹೆಮ್ಮಡಗಾ ಹೆದ್ದಾರಿ ಜಲಾವೃತ
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಕಳೆದ ಹಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗುರುವಾರ ಮುಂಜಾನೆ ತಾಲ್ಲೂಕಿನ ಮಂತುರ್ಗಾ ಗ್ರಾಮದ ಬಳಿ ಹರಿಯುವ ಅಲಾತ್ರಿ ಹಳ್ಳದಲ್ಲಿ ಪ್ರವಾಹ ಉಂಟಾಗಿತ್ತು. ಅಲಾತ್ರಿ ಹಳ್ಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದ ಪರಿಣಾಮ ಸಿಂಧನೂರು-ಹೆಮ್ಮಡಗಾ ಹೆದ್ದಾರಿ ಎಂಟು ಗಂಟೆಗಳ ಕಾಲ ಜಲಾವೃತಗೊಂಡಿತ್ತು.

ಹೆದ್ದಾರಿಯ ಮೇಲೆ ಹಲವು ಅಡಿಗಳಷ್ಟು ನೀರು ಹರಿಯುತ್ತಿರುವ ಕಾರಣ ಹೆಮ್ಮಡಗಾ-ಅನಮೋಡ ಮಾರ್ಗದ ಬೆಳಗಾವಿ-ಗೋವಾ ಹೆದ್ದಾರಿಯಲ್ಲಿ ವಾಹನ ಸಂಚಾರ ಗುರುವಾರ ಸಂಜೆಯವರೆಗೆ ಸ್ಥಗಿತಗೊಂಡಿತ್ತು. ಜೊತೆಗೆ ತಾಲ್ಲೂಕಿನ ಭೀಮಗಡ ಮತ್ತು ಲೋಂಡಾ ಅರಣ್ಯ ವ್ಯಾಪ್ತಿಯ ಮೂವತ್ತಕ್ಕೂ ಹೆಚ್ಚು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಗುರುವಾರ ಸಂಜೆ 5 ಗಂಟೆಯ ಬಳಿಕ ನೀರಿನ ಹರಿವು ಕಡಿಮೆಯಾದ ಕಾರಣ ಈ ಹೆದ್ದಾರಿಯಲ್ಲಿ ವಾಹನ ಸಂಚಾರ ಪ್ರಾರಂಭಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಪ್ರಾರಂಭದ ದಿನಗಳಲ್ಲಿ ಶಾಂತವಾಗಿ ಸುರಿಯುತ್ತಿದ್ದ ಮಳೆ ಇತ್ತೀಚಿನ ದಿನಗಳಲ್ಲಿ ತನ್ನ ರೌದ್ರಾವತಾರವನ್ನು ಪ್ರದರ್ಶಿಸತೊಡಗಿದೆ. ಮಳೆಯ ಆರ್ಭಟಕ್ಕೆ ತಾಲ್ಲೂಕಿನ ಕಾನನದಂಚಿನ ಬಹುತೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಮತ್ತು ಸೇತುವೆಗಳ ಮೇಲೆ ನೀರು ಅಒಪಾಯದ ಮಟ್ಟದಲ್ಲಿ ಹರಿಯಲಾರಂಭಿಸಿದೆ. ಚಿಕಲೆ-ಪಾರವಾಡ, ಚಿಕಲೆ-ಅಮಗಾಂವ, ಮೋದೆಕೊಪ್ಪ-ತೀರ್ಥಕುಂಡೆ, ಕಾಮಶಿನಕೊಪ್ಪ-ಯಡೋಗಾ, ದೇವಾಚಿಹಟ್ಟಿ-ಜಾಂಬೋಟಿ, ಅಸೋಗಾ-ಭೋಸಗಾಳಿ ಮತ್ತು ಅಮಟೆ-ಗೋಲ್ಯಾಳಿ ಸೇರಿದಂತೆ ವಿವಿಧೆಡೆ ರಸ್ತೆ ಮತ್ತು ಸೇತುವೆಗಳು ಜಲಾವೃತಗೊಂಡಿವೆ. ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ.
ಸತತಧಾರೆಯ ಪರಿಣಾಮ ಬುಧವಾರ ರಾತ್ರಿಯಿಂದಲೇ ಭೀಮಗಡ ವನ್ಯಧಾಮ ವ್ಯಾಪ್ತಿಯ ಹದಿನೈದು ಗ್ರಾಮಗಳಿಗೆ ಮುಖ್ಯ ವಾಹಿನಿಯಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಗ್ರಾಮಗಳ ಮಾರ್ಗಮಧ್ಯದ ಮಹದಾಯಿ, ಮಲಪ್ರಭಾ ನದಿಗಳು ಮತ್ತು ಕಳಸಾ-ಭಂಡೂರಿ ಹಳ್ಳಗಳಲ್ಲಿ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿರುವ ಕಾರಣ ಗವ್ವಾಳಿ, ಪಾಸ್ತೊಳ್ಳಿ, ಕೊಂಗಳಾ, ಅಮಗಾಂವ, ಕೃಷ್ಣಾಪುರ, ತಳೇವಾಡಿ, ದೇಗಾಂವ, ಜಾಮಗಾಂವ, ಪಾಲಿ, ಹುಳಂದ, ಮಾನ, ಸಡಾ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡ ವರದಿಯಾಗಿದೆ.
ಗುರುವಾರ ಮುಂಜಾನೆವರೆಗೆ ತಾಲ್ಲೂಕಿನ ಅಸೋಗಾದಲ್ಲಿ 4.7 ಸೆಂ.ಮೀ, ಬೀಡಿಯಲ್ಲಿ 3.7 ಸೆಂ.ಮೀ, ಕಕ್ಕೇರಿಯಲ್ಲಿ 5.5 ಸೆಂ.ಮೀ, ಗುಂಜಿಯಲ್ಲಿ 6.6 ಸೆಂ.ಮೀ, ಲೋಂಡಾ ರೈಲು ನಿಲ್ದಾಣದಲ್ಲಿ 9.1 ಸೆಂ.ಮೀ, ಲೋಂಡಾ ಪಿಡಬ್ಲ್ಯೂಡಿಯಲ್ಲಿ 9.3 ಸೆಂ.ಮೀ, ನಾಗರಗಾಳಿಯಲ್ಲಿ 6.7 ಸೆಂ.ಮೀ, ಜಾಂಬೋಟಿಯಲ್ಲಿ 9.1 ಸೆಂ.ಮೀ, ಕಣಕುಂಬಿಯಲ್ಲಿ 15.2 ಸೆಂ.ಮೀ ಮತ್ತು ಖಾನಾಪುರ ಪಟ್ಟಣದಲ್ಲಿ 4.2 ಸೆಂ.ಮೀ ಮಳೆಯಾದ ವರದಿಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ