ಪ್ರಗಾತಿವಾಹಿನಿ ಸುದ್ದಿ; ತಿರುವನಂತಪುರಂ: ನಾಥೂರಾಮ್ ಗೋಡ್ಸೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಇಬ್ಬರ ಸಿದ್ಧಾಂತಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ, ಇಬ್ಬರದ್ದೂ ಒಂದೇ ಸಿದ್ಧಾಂತ. ಇದನ್ನು ಮೋದಿ ಒಪ್ಪಿಕೊಳ್ಳಬೇಕು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಕೇರಳದ ವಯನಾಡ್ ನಲ್ಲಿ ಕೇಂದ್ರ ಸರ್ಕಾರದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ಇಂದು ಬೃಹತ್ ಪ್ರತಿಭಟನಾ ರ‍್ಯಾಲಿಯನ್ನು ಹಮ್ಮಿಕೊಂಡಿದ್ದರು. ವಯನಾಡ್‍ನ ಎಸ್‍ಕೆಎಂಜೆ ಪ್ರೌಢ ಶಾಲೆಯಿಂದ ಆರಂಭವಾದ ಮೆರವಣಿಗೆ ಎರಡು ಕಿಲೋ ಮೀಟರ್ ವರೆಗೆ ನಡೆಯಿತು.
ಬಳಿಕ ನಡೆದ ಸಮಾವೇಶದಲ್ಲಿ ಮಾತಾನಾಡಿದ ರಾಹುಲ್ ಗಾಂಧಿ, ರಾಷ್ಟ್ರಪಿತ ಮಹಾತ್ಮ ಗಾಂಧಿ ಹತ್ಯೆಗೈದಿದ್ದ ಗೋಡ್ಸೆ ಹಾಗೂ ಪ್ರಧಾನಿ ಮೋದಿ ಇಬ್ಬರ ಸಿದ್ಧಾಂತವು ಒಂದೇ. ಗೋಡ್ಸೆ ಮಹಾತ್ಮ ಗಾಂಧಿಯ ಮೇಲೆ ಗುಂಡುಹಾರಿಸಿದ್ದಾಗ ಆತ ತನ್ನ ಕಣ್ಣನ್ನು ಮುಚ್ಚಿದ್ದ. ಏಕೆಂದರೆ ಆತನಿಗೆ ತಾನು ಏನು ಮಾಡುತ್ತಿದ್ದೇನೆ ಎಂಬುದು ತಿಳಿದಿತ್ತು. ಗೋಡ್ಸೆ ಮತ್ತು ಮೋದಿ ಇಬ್ಬರದ್ದೂ ಒಂದೇ ಸಿದ್ಧಾಂತ. ನಾನು ಗೋಡ್ಸೆಯನ್ನು ನಂಬುತ್ತೇನೆ ಎಂದು ಬಹಿರಂಗವಾಗಿ ಹೇಳುವ ಧೈರ್ಯ ಮೋದಿಗಿಲ್ಲ. ಅದನ್ನು ಅವರು ಬಹಿರಂಗವಾಗಿ ಒಪ್ಪಿಕೊಳ್ಳಬೇಕು ಎಂದು ಗುಡುಗಿದರು.
ಭಾರತೀಯರೇ ನಾವು ಭಾರತಿಯರು ಎಂದು ಸಾಬೀತುಪಡಿಸಬೇಕಾದ ಸ್ಥಿತಿ ಬಂದಿದೆ. ಯಾರು ಭಾರತೀಯರು ಎಂದು ಗುರುತಿಸಲು ನರೇಂದ್ರ ಮೋದಿ ಯಾರು? ನನ್ನ ಪೌರತ್ವವನ್ನು ಪ್ರಶ್ನಿಸಿವ ಹಕ್ಕು ಮೋದಿಗೆ ಯಾರು ಕೊಟ್ಟಿದ್ದು? ನಾನು ಭಾರತೀಯನೆಂದು ನನಗೆ ಗೊತ್ತು. ನಾನು ಯಾರಿಗೂ ಅದನ್ನ ಸಾಬೀತುಪಡಿಸುವ ಅಗತ್ಯವಿಲ್ಲ. ಹಾಗೆಯೇ ಇಲ್ಲಿರುವ 140 ಕೋಟಿ ಜನರಿಗೂ ಕೂಡ ಭಾರತೀಯರು ಎಂದು ನಿರೂಪಿಸುವ ಅಗತ್ಯವಿಲ್ಲ ಎಂದು ರಾಹುಲ್ ಕಿಡಿಕಾರಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ