ಎಂ.ಕೆ.ಹೆಗಡೆ, ಬೆಳಗಾವಿ -ರಾಜ್ಯದ ಗಮನವನ್ನೇ ತನ್ನತ್ತ ಸೆಳೆದಿರುವ ಗೋಕಾಕದ ಉಪಚುನಾವಣೆ ರಾಜಕೀಯ ಇನ್ನಷ್ಟು ಕುತೂಹಲ ಮೂಡಿಸಿದೆ. ಶನಿವಾರದ ಬೆಳವಣಿಗೆಗಳು ಹೊಸ ತಿರುವು ಪಡೆದುಕೊಂಡಿದ್ದು, ಭಾನುವಾರ ಸಂಜೆಯ ಹೊತ್ತಿಗೆ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಲಿದೆ.
ಶನಿವಾರ ನಡೆದ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಉಪಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ನಿಶ್ಚಿತ. ಕೇವಲ ಜಾರಕಿಹೊಳಿ ಸಹೋದರರ ಮಧ್ಯೆ ಹೋರಾಟ ನಡೆಯಲಿದೆ ಎನ್ನುವ ಭಾವನೆಯನ್ನು ಹೋಗಲಾಡಿಸಿ, ಅಶೋಕ ಪೂಜಾರಿ ಕಣಕ್ಕಿಳಿದು ತ್ರಿಕೋನ ಸ್ಪರ್ಧಾ ಕಣ ನಿರ್ಮಿಸುವ ಸಾಧ್ಯತೆ ಕಾಣುತ್ತಿದೆ.
ಶನಿವಾರ ರಾತ್ರಿಯ ಅಶೋಕ ಪೂಜಾರಿ ಮೂಡ್ ಗಮನಿಸಿದರೆ ಇದು ತಮಗೆ ರಾಜಕೀಯ ಆತ್ಮಹತ್ಯೆಯಾದರೂ ನಾನು ನಂಬಿರುವ ಸಿದ್ಧಾಂತ ಬಲಿಕೊಡಲಾರೆ ಎನ್ನುವ ಮನೋಸ್ಥಿತಿ ಕಾಣುತ್ತಿದೆ. ಅಂದರೆ, ಬೆಂಬಲಿಗರ ಒತ್ತಾಸೆಯಂತೆ ಪಕ್ಷೇತರರಾಗಿ ಕಣಕ್ಕಿಳಿಯುವುದು ನಿಶ್ಚಿತ ಎನ್ನುವ ದಾಟಿಯಲ್ಲಿತ್ತು ಯೊಂದಿಗಿನ ಅವರ ಮಾತು. ಭಾನುವಾರ ಸಂಜೆಯೊಳಗೆ ನಿರ್ಧಾರ ಪ್ರಕಟಿಸುವುದಾಗಿ ಅವರು ತಿಳಿಸಿದ್ದಾರೆ.
ಶನಿವಾರ ಏನೇನಾಯಿತು?
ರಮೇಶ ಜಾರಕಿಹೊಳಿ ಬಿಜೆಪಿ ಸೇರಿದ ನಂತರ ಮೊದಲ ಬಾರಿಗೆ ಶುಕ್ರವಾರ ಗೋಕಾಕ ಪ್ರವೇಶಿಸಿದರು. ಅಭಿಮಾನಿಗಳು ದೊಡ್ಡ ಮಟ್ಟದಲ್ಲಿಯೇ ಸ್ವಾಗತಿಸಿದರು. ಆದರೆ ಕಳೆದ ಚುನಾವಣೆಯಲ್ಲಿ ತಮಗೆ ಕಠಿಣ ಪೈಪೋಟಿ ನೀಡಿದ್ದ ಬಿಜೆಪಿಯ ಅಭ್ಯರ್ಥಿ ಅಶೋಕ ಪೂಜಾರಿಯನ್ನು ನಿರ್ಲಕ್ಷಿಸುವ ಸ್ಥಿತಿಯಲ್ಲಿ ಅವರಿರಲಿಲ್ಲ. ಹಾಗಾಗಿ ಬಹಿರಂಗ ಸಭೆಯಲ್ಲೇ ಅಶೋಕ ಪೂಜಾರಿಯ ನೆರವು ಯಾಚಿಸಿದ್ದರು.
ಶನಿವಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೇರವಾಗಿ ಅಶೋಕ ಪೂಜಾರಿ ಮನೆಗೇ ಹೋಗಿ ಬಂದಿದ್ದಾರೆ. ಕೇಂದ್ರ ರೈಲ್ವೆ ಖಾತೆ ಸಚಿವರೂ, ಗೋಕಾಕ ಚುನಾವಣೆಯ ಉಸ್ತುವಾರಿಗಳೂ ಆಗಿರುವ ಸುರೇಶ ಅಂಗಡಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ವಿಶ್ವನಾಥ ಪಾಟೀಲ ಮತ್ತಿತರ ಮುಖಂಡರ ಜೊತೆ ತಮ್ಮ ಬಹುಕಾಲದ ವಿರೋಧಿ ಅಶೋಕ ಪೂಜಾರಿ ಮನೆಗೆ ಹೋಗಿದ್ದರು.
ಆದರೆ ಈ ಭೇಟಿ ಅಶೋಕ ಪೂಜಾರಿ ಮೇಲೆ ಹೆಚ್ಚಿನ ಪರಿಣಾಮ ಬೀರಿದಂತೆ ಕಾಣಿಸಲಿಲ್ಲ. ಭಾನುವಾರ ಸಂಜೆ ನಿರ್ಧಾರ ಪ್ರಕಟಿಸುವುದಾಗಿ ಹೇಳಿಕಳಿಸಿದ್ದಾರೆ.
ಇದಕ್ಕೂ ಮುನ್ನ ಅಶೋಕ ಪೂಜಾರಿ ಕುರಿತು ದುಡ್ಡು ತೆಗೆದುಕೊಂಡು ಸುಮ್ಮನಾಗುತ್ತಾರೆ ಎನ್ನುವ ಅರ್ಥದಲ್ಲಿ ರಮೇಶ ಜಾರಕಿಹೊಳಿ ಮಾತನಾಡಿದ್ದಾರೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ತೀವ್ರವಾಗಿ ನೊಂದುಕೊಂಡ ಅಶೋಕ ಪೂಜಾರಿ ಕಣ್ಣೀರು ಹಾಕಿದ್ದಲ್ಲದೆ ತಲೆಯಮೇಲೆ 2 ಕೊಡ ತಣ್ಣೀರು ಸುರಿದುಕೊಂಡರು. ಮನೆ ದೇವರನ್ನು ಮುಟ್ಟಿ ತಾವು ಯಾವುದೇ ಆಮಿಶಕ್ಕೆ ಬಲಿಯಾಗಿಲ್ಲ ಎಂದು ಪ್ರಮಾಣ ಮಾಡಿದರು.
ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಸತೀಶ್
ಗೋಕಾಕ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಸತೀಶ್ ಜಾರಕಿಹೊಳಿ, ಲಖನ್ ಪರವಾಗಿ ಈಗಾಗಲೆ ಜೋರಾಗಿ ಪ್ರಚಾರ ನಡೆಸಿದ್ದಾರೆ. ಪಕ್ಷ ಅಧಿಕೃತವಾಗಿ ಟಿಕೆಟ್ ಘೋಷಣೆ ಮಾಡುವ ಮೊದಲೇ ಲಖನ್ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಖಚಿತ ಎಂದುಕೊಂಡು, ರಮೇಶ್ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದರು. ಶನಿವಾರ ಸಂಜೆ ಕಾಂಗ್ರೆಸ್ ಲಖನ್ ಹೆಸರನ್ನು ಅಂತಿಮಗೊಳಿಸಿದೆ. ಅಶೋಕ ಪೂಜಾರಿ ಸ್ಪರ್ಧೆ ಇಬ್ಬರಿಗೂ ಇಕ್ಕಟ್ಟು ತಂದಿಟ್ಟಿರುವುದು ನಿಶ್ಚಿತ.
ಬಾಲಚಂದ್ರ ಎಂಟ್ರಿ ಯಾವಾಗ?
ಗೋಕಾಕ ರಾಜಕೀಯದ ಅತ್ಯಂತ ಪ್ರಮುಖ ಅಂಶ ಬಾಲಚಂದ್ರ ಜಾರಕಿಹೊಳಿ ಎಂಟ್ರಿ. ಅದು ಯಾವಾಗ ಎನ್ನುವುದೇ ಈಗ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಸಾಮಾನ್ಯವಾಗಿ ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಜಗಳ ಮಾಡಿಕೊಂಡಾಗ ಇಬ್ಬರನ್ನೂ ಸುಮ್ಮನಿರಿಸುವವರೇ ಬಾಲಚಂದ್ರ.
ಯಾರೊಂದಿಗೂ ವಿರೋಧ ಕಟಟಿಕೊಳ್ಳದೆ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದ ಅವರು ಈ ಬಾರಿ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಬಿಜೆಪಿಯಲ್ಲಿರುವ ಬಾಲಚಂದ್ರ ರಮೇಶ್ ಬೆಂಬಲಿಸುವುದು ಅನಿವಾರ್ಯ. ಆದರೆ ಸತೀಶ್ ಮತ್ತು ಲಖನ್ ವಿರೋಧ ಕಟ್ಟಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದ್ದಾರೆ.
ಸಧ್ಯ ಬೆಂಗಳೂರಿನಲ್ಲಿರುವ ಬಾಲಚಂದ್ರ ಈವರೆಗೂ ಗೋಕಾಕ ರಾಜಕೀಯದ ಬಗ್ಗೆ ತುಟಿ ಬಿಚ್ಚಲಿಲ್ಲ. ಯಾವ ಕ್ಷಣದಲ್ಲಿ ಅವರು ಎಂಟ್ರಿ ಹೊಡೆಯುತ್ತಾರೆ? ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿ ಮೂಡಿದೆ.
ಒಟ್ಟಾರೆ ಈ ಬಾರಿ ಗೋಕಾಕ ಚುನಾವಣೆ ಕುತೂಹಲವಷ್ಟೇ ಅಲ್ಲ, ಆತಂಕವನ್ನೂ ತಂದಿಟ್ಟಿದೆ. ಪ್ರತಿಷ್ಠೆಗೆ ಬಿದ್ದು ಯಾವ ಮಟ್ಟಕ್ಕೆ ಇಳಿಯುತ್ತಾರೋ ಎನ್ನುವ ಭಯ ಮೂಡಿಸಿದೆ.
ಅಶೋಕ ಪೂಜಾರಿ ಮನೆಗೆ ತೆರಳಿ ಮಾತನಾಡಿ ಬಂದಿದ್ದೇವೆ. ನಾಳೆ ಸಂಜೆಯವರೆಗೂ ಸಮಯ ಕೇಳಿದ್ದಾರೆ. ಅವರು ನಮ್ಮ ಪಕ್ಷದ ಸಕ್ರೀಯ ಸದಸ್ಯರು. ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಬೆಂಬಲಿಸುವ ವಿಶ್ವಾಸವಿದೆ.
-ಸುರೇಶ್ ಅಂಗಡಿ, ಕೇಂದ್ರ ಸಚಿವ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ