ಪ್ರಗತಿವಾಹಿನಿ ಸುದ್ದಿ; ಗೋಕಾಕ: ದೇಶಕ್ಕೆ ಗಾಂಧೀಜಿ ಒಬ್ಬರೇ ಮಹಾತ್ಮರಾಗಿದ್ದಾರೆ. ಸೂರ್ಯ, ಚಂದ್ರರಿರುವವರೆಗೂ ಅವರೊಬ್ಬರೇ ಮಹಾತ್ಮರಾಗಿರುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನಗರದ ರೋಟರಿ ಬ್ಲಡ್ ಬ್ಯಾಂಕ್ ಆವರಣದಲ್ಲಿ ಭಾನುವಾರ ಗೋಕಾಕನ ಬಾಲಕ ಆತ್ರೇಯ ಪಾಟೀಲ ವಿರಚಿತ “ಲಾಕ್ ಡೌನ್ ಟ್ಯಾಲೆಂಟ್ಸ್”ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಗಾಂಧೀಜಿ ಅವರ ನಿರಂತರ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ. ಅವರ ಹೋರಾಟವನ್ನು ಇಂದಿನ ಯುವ ಪೀಳಿಗೆ ಅರ್ಥಮಾಡಿಕೊಳ್ಳಬೇಕಿದೆ. ಆದರೆ, ಇಂದು ಯಾರ್ಯಾರನ್ನೋ ಮಹಾತ್ಮ ಎಂದು ಹೋಲಿಕೆ ಮಾಡುತ್ತಿರುವುದು ಸರಿಯಲ್ಲ ಎಂದರು.
ಬುದ್ದ, ಬಸವಣ್ಣ, ಅಂಬೇಡ್ಕರ್ ಅವರು ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿದ್ದಾರೆ. ಅವರು ತಮ್ಮ ವೈಯಕ್ತಿಕ ಬದುಕನ್ನು ನೋಡದೇ ಜನರು ಹಾಗೂ ಸಮಾಜಕ್ಕಾಗಿ ಬದುಕಿದ್ದರು. ಅವರ ಹೋರಾಟದಿಂದಲೇ ಸಮಾಜದಲ್ಲಿ ಇಂದು ನಾವು ಸಮಾನತೆಯನ್ನು ಕಾಣುವಂತಾಗಿದೆ ಎಂದು ಹೇಳಿದರು.
ಉತ್ತಮ ಕೃತಿಗಳಿಂದ ಸಮಾಜದ ಬದಲಾವಣೆ ಸಾಧ್ಯ:
ಉತ್ತಮ ಕೃತಿಗಳಿಂದ ಸಮಾಜದ ಬದಲಾವಣೆ ಸಾಧ್ಯವಿದೆ. ಆದರೆ, ಪುಸ್ತಕಗಳನ್ನು ಓದಬೇಕಾದ ಯುವ ಪೀಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮಗ್ನವಾಗಿದೆ. ಮಕ್ಕಳು ಹಾಗೂ ಯುವಕರು ಸಾಮಾಜಿಕ ಜಾಲತಾಣಗಳನ್ನು ಹಿತಮಿತವಾಗಿ ಬಳಸಬೇಕು. ಸಾಹಿತ್ಯದ ಓದುವಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಹಿತಿಗಳು ಕಾಲಕ್ಕೆ ತಕ್ಕಂತೆ ತಮ್ಮ ವಿಚಾರ ಹಾಗೂ ಬರವಣಿಗೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಅಂದಾಗ ಆಯಾ ಪೀಳಿಗೆಯವರನ್ನು ಸಾಹಿತ್ಯದತ್ತ ಆಕರ್ಷಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕನ್ನಡ ಶಾಲೆಯಲ್ಲಿ ಕಲಿತಂತ ಮಕ್ಕಳಿಗೆ ಸಾಮಾನ್ಯ ಜ್ಞಾನ ತಾನೇ ತಾನಾಗಿ ಬರುತ್ತದೆ. ಆದರೆ, ಆಂಗ್ಲಮಾಧ್ಯಮದಲ್ಲಿ ಕಲಿತಂತ ಮಕ್ಕಳಿಗೆ ಪ್ರಾಣಿ, ಪಕ್ಷಿಗಳು ಯಾವುವು ಅಂತ ಹೇಳಿಕೊಡಲು ಒಬ್ಬರು ಬೇಕಾಗುತ್ತದೆ ಎಂದು ಸತೀಶ ಕಳವಳ ವ್ಯಕ್ತಪಡಿಸಿದರು.
ಆಟವಾಡುವ ವಯಸ್ಸಿನಲ್ಲಿ ಕವನ ಸಂಕಲನ ರಚಿಸುವ ಮೂಲಕ ಬಾಲಕ ಆತ್ರೇಯ ಪಾಟೀಲ್ ಮಕ್ಕಳು ಹಾಗೂ ಯುವಕರಿಗೆ ಮಾದರಿಯಾಗಿದ್ದಾರೆ. ಆತ್ರೇಯ ಗೆ ನಮ್ಮ ಕಡೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಪರಿಸರ ಸಂರಕ್ಷಣೆ ಅತ್ಯಗತ್ಯ:
ಇಂದು ಪರಿಸರ ಅಸಮತೋಲನವಾಗಿದ್ದು, ಭೂಕಂಪ, ಜಲಪ್ರಳಯದಂತ ಅವಘಡಗಳು ಹೆಚ್ಚಾಗಿ ನಡೆಯುತ್ತಿವೆ. ಶೇ.36 ರಷ್ಟಿದ್ದಅರಣ್ಯಪ್ರದೇಶ ಈಗ ಶೇ.17 ಕ್ಕೆ ತಲುಪಿದೆ. ಇದು ಭವಿಷ್ಯತ್ತಿನಲ್ಲಿ ಗಂಡಾಂತರ ಎದುರಾಗುವ ಲಕ್ಷಣವಾಗಿದೆ. ಹೀಗಾಗಿ, ಗಿಡಮರಗಳನ್ನು ಬೆಳೆಸುವುದಕ್ಕೆ ಹಾಗೂ ಅರಣ್ಯ ಸಂರಕ್ಷಣೆಗೆ ಎಲ್ಲರೂ ಒತ್ತು ನೀಡಬೇಕು. ಜನಸಂಖ್ಯೆ ನಿಯಂತ್ರಣಕ್ಕೂ ಆದ್ಯತೆ ನೀಡಬೇಕು ಎಂದು ಹೇಳಿದರು.
ಕಾವ್ಯಕ್ಕೆ ಬಹಳ ದೊಡ್ಡ ಶಕ್ತಿ ಇದೆ:
ಹಿರಿಯ ಸಾಹಿತಿ ಸಂಗಮೇಶ ಗುಜಗುಂಡ ಮಾತನಾಡಿ, ಭವಿಷ್ಯತ್ತಿನಲ್ಲಿ ಕನ್ನಡ ಸಾಹಿತ್ಯದ ಕಡೆ ಒಲವು ತೋರಿಸಿ ಎಂದು ಬಾಲಕ ಆತ್ರೇಯ ಸಲಹೆ ನೀಡಿದರು. ಆತ್ರೇಯ ಸಾಹಿತ್ಯದ ಜೊತೆಗೆ ಸಾಮಾನ್ಯ ಜ್ಞಾನ ಕೂಡ ಹೆಚ್ಚಿಸಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಪ್ರತಿಭೆ ಹೊಂದಿರುವ ಬಾಲಕ ಗೋಕಾಕನಲ್ಲಿ ಜನಿಸಿರುವುದು ಪುಣ್ಯ ಎಂದು ಹೇಳಿದರು.
ಹಿರಿಯ ಪತ್ರಕರ್ತರಾದ ಹೃಷಿಕೇಶ ದೇಸಾಯಿ ಮಾತನಾಡಿ, ಕಾವ್ಯಕ್ಕೆ ಬಹಳ ದೊಡ್ಡ ಶಕ್ತಿ ಇದೆ. ಯಾವುದೇ ಕಾವ್ಯಕೃಷಿ ನಮ್ಮ ಅನುಭವದ ಆಧಾರದ ಮೇಲೆ ಆಗುತ್ತದೆ. ನಾವು ಕಾವ್ಯದ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ. ಸಾಹಿತಿಗಳು ಎಲ್ಲ ಭಾಷೆಗಳನ್ನು ಕಲಿತಷ್ಟು ಸಹಕಾರಿಯಾಗುತ್ತದೆ. ಇದರಿಂದ ಎಲ್ಲ ವರ್ಗದ ಜನರ ಬಗ್ಗೆ ಅರಿತುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಬಾಲಕ ಆತ್ರೇಯ ಮಾತನಾಡಿ, ಕವನ ಸಂಕಲನ ರಚಿಸಿದ ತಮ್ಮ ಅನುಭವಗಳನ್ನು ಹಂಚಿಕೊಂಡರು. ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಗೋಕಾಕನ ಕೆಎಲ್ ಇ ಶಾಲೆಯ ಆಡಳಿತಾಧಿಕಾರಿ ಅನುಪಾ ಕೌಶಿಕ್, ಹಿರಿಯ ಸಾಹಿತಿ ಸಂಗಮೇಶ ಗುಜಗುಂಡ, ಹಿರಿಯ ಪತ್ರಕರ್ತರಾದ ಶ್ರೀಶೈಲ್ ಮಠದ, ಯುವ ನಾಯಕ ರಾಹುಲ್ ಜಾರಕಿಹೊಳಿ, ಬಾಲಕನ ತಂದೆ ಆನಂದ ಪಾಟೀಲ್, ತಾಯಿ ಜ್ಞಾನಾ ಪಾಟೀಲ್ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಿರಿಯ ಪತ್ರಕರ್ತರಾದ ಮುನ್ನಾ ಬಾಗವಾನ್ ಕಾರ್ಯಕ್ರಮದ ನಿರ್ವಹಣೆ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ