*ದೈವಿಕ ಚಿನ್ನದ ಆಸೆ ತೋರಿಸಿ ₹1.3 ಕೋಟಿ ವಂಚನೆ*: *ಜಮೀನು, ಚಿನ್ನಾಭರಣ ಮಾರಿದ ಅಕ್ಕಸಾಲಿಗ!*

ಪ್ರಗತಿವಾಹಿನಿ ಸುದ್ದಿ: ದೇವಿಯ ಕೃಪೆಯಿಂದ ದೊರೆತ ಐದು ಕೆಜಿ ಚಿನ್ನವನ್ನು ನೀಡುವುದಾಗಿ ನಂಬಿಸಿ ಅಕ್ಕಸಾಲಿಗರೊಬ್ಬರಿಂದ ಬರೋಬ್ಬರಿ ₹1.3 ಕೋಟಿ ಹಣ ಪಡೆದಿರುವ ಆರೋಪ ಕೇಳಿಬಂದಿದೆ. ಚಿನ್ನದ ಆಸೆಗೆ ಬಿದ್ದ ಅಕ್ಕಸಾಲಿಗ ಜಮೀನು ಮತ್ತು ಕುಟುಂಬದ ಚಿನ್ನಾಭರಣಗಳನ್ನು ಮಾರಾಟ ಮಾಡಿ ಹಣ ಹೊಂದಿಸಿದ್ದಾನೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಘಟನೆ ಬೆಳಕಿಗೆ ಬಂದಿದ್ದು, ತೆಲಂಗಾಣ ಮೂಲದ ಭೂತಂ ಲಿಂಗಯ್ಯ ಎಂಬಾತನ ವಿರುದ್ಧ ಸೆಲ್ವರಾಜ್ ಆಚಾರಿ ವಂಚನೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಿಟಿ ಮಾರ್ಕೆಟ್ ಪೊಲೀಸರು ಆರೋಪಿಯ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.
ದೂರಿನ ಪ್ರಕಾರ, ಭೂತಂ ಲಿಂಗಯ್ಯ ಸೆಲ್ವರಾಜ್ ಅವರ ಸೊಸೆಗೆ ಅಸ್ತಮಾ ಕಾಯಿಲೆಗೆ ಔಷಧ ನೀಡುತ್ತಿದ್ದ. ಬಳಿಕ ಸೆಲ್ವರಾಜ್ ಅವರ ಬೆನ್ನುನೋವು ಮತ್ತು ಮಂಡಿನೋವಿಗೂ ಔಷಧ ನೀಡಿದ್ದ. ಈ ಮೂಲಕ ಕುಟುಂಬದ ವಿಶ್ವಾಸ ಗಳಿಸಿದ್ದ ಎಂದು ಆರೋಪಿಸಲಾಗಿದೆ.
ತನ್ನ ಬಳಿ ದೇವಿಯ ಕೃಪೆಯಿಂದ ದೊರೆತ ಐದು ಕೆಜಿ ಚಿನ್ನವಿದೆ ಎಂದು ಲಿಂಗಯ್ಯ ನಂಬಿಸಿದ್ದ. ಆ ಚಿನ್ನವನ್ನು ಖರೀದಿಸಿದರೆ ಸಂಪತ್ತು ಹೆಚ್ಚುವುದರ ಜೊತೆಗೆ ವ್ಯವಹಾರವೂ ಅಭಿವೃದ್ಧಿಯಾಗಲಿದೆ ಎಂದು ಹೇಳಿದ್ದ ಎನ್ನಲಾಗಿದೆ.
ನಂಬಿಕೆ ಮೂಡಿಸಲು ಚಿನ್ನದ ಮಾದರಿಯೊಂದನ್ನು ಸೆಲ್ವರಾಜ್ ಅವರಿಗೆ ನೀಡಿದ್ದ. ಅದನ್ನು ಪರೀಕ್ಷಿಸಿದಾಗ ಅಸಲಿ ಚಿನ್ನವೆಂದು ತಿಳಿದುಬಂದ ಹಿನ್ನೆಲೆಯಲ್ಲಿ ಸೆಲ್ವರಾಜ್ ಆರೋಪಿಯ ಮಾತನ್ನು ನಂಬಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಚಿನ್ನವನ್ನು ದೇವರ ಮುಂದೆ ಇಟ್ಟು ಪೂಜೆ ಮಾಡಬೇಕು. ಈ ವಿಚಾರವನ್ನು ಮನೆಯವರಿಗೂ ತಿಳಿಸಬಾರದು ಎಂದು ಲಿಂಗಯ್ಯ ಷರತ್ತು ವಿಧಿಸಿದ್ದ ಎನ್ನಲಾಗಿದೆ.
ಹೀಗೆ ಸುಮಾರು ಎರಡೂವರೆ ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ₹1.3 ಕೋಟಿ ಹಣ ಪಡೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹಣ ಹೊಂದಿಸಲು ಸೆಲ್ವರಾಜ್ ಜಮೀನು ಹಾಗೂ ಕುಟುಂಬದ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದರು ಎನ್ನಲಾಗಿದೆ.
ಬಳಿಕ ತನ್ನ ತಂದೆಯ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಊರಿಗೆ ತೆರಳಿದ್ದ ಲಿಂಗಯ್ಯ ವಾಪಸ್ ಬರಲಿಲ್ಲ. ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ದ ಎನ್ನಲಾಗಿದೆ. ಇದರಿಂದ ಅನುಮಾನಗೊಂಡ ಸೆಲ್ವರಾಜ್ ಪೊಲೀಸರ ಮೊರೆ ಹೋಗಿದ್ದಾರೆ.
ಸಿಟಿ ಮಾರ್ಕೆಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಆರೋಪಿಯ ಪತ್ತೆಗಾಗಿ ಶೋಧ ನಡೆಸುತ್ತಿದ್ದು, ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ತನಿಖೆಯಿಂದ ತಿಳಿಯಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




