ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಗೋಮಟೇಶ ವಿದ್ಯಾಪೀಠ ಮತ್ತು ಜೈನ ಗುರುಕುಲ ಟ್ರಸ್ಟ್ ಸಂಸ್ಥೆಯ ನೂತನ ಉತ್ತರಾಧಿಕಾರಿಯಾಗಿ ವೃಷಭ ಸಂಜಯ ಪಾಟೀಲ ಅವರ ಪದಗ್ರಹಣ ಸಮಾರಂಭ ಶುಕ್ರವಾರ ಸಾಯಂಕಾಲ ಗೋಮಟೇಶ ವಿದ್ಯಾಪೀಠದ ಆವರಣದಲ್ಲಿ ನಡೆಯಿತು.
ಸಮಾರಂಭದ ಸಾನಿಧ್ಯ ವಹಿಸಿದ್ದ ಕೊಲ್ಲಾಪುರ ಮಠದ ಸ್ವಸ್ತೀಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮಿಜಿಗಳು ವೃಷಭ ಸಂಜಯ ಪಾಟೀಲ ಅವರಿಗೆ ಶಾಸ್ತ್ರೋಕ್ತವಾಗಿ ಉತ್ತರಾಧಿಕಾರಿಯ ಪಟ್ಟಾಭಿಷೇಕವನ್ನು ಮಾಡಿದರು. ಕಳೆದ ೩೦ ವರ್ಷಗಳಿಂದ ಗೋಮಟೇಶ ವಿದ್ಯಾಪೀಠದ ಅಧಿಷ್ಠಾತರಾಗಿ ಕಾರ್ಯ ನಿರ್ವಹಿಸಿದ ಮಾಜಿ ಶಾಸಕ ಸಂಜಯ ಪಾಟೀಲ ಅವರು ಸ್ವತಃ ತಮ್ಮ ಹುದ್ದೆಯಿಂದ ನಿರ್ಗಮಿಸಿ ನೂತನ ಅಧಿಷ್ಠಾತ ನೇಮಕ ಮಾಡಲು ಅನುವು ಮಾಡಿಕೊಟ್ಟರು.

ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕೆ.ಎಲ್.ಇ.ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಫ್ರಭಾಕರ ಕೋರೆ ಅವರು ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ವಿಶೇಷ ಛಾಪು ಮೂಡಿಸಿದ ಗೊಮಟೇಶ ವಿದ್ಯಾಪೀಠ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವ ಮೂಲಕ ಮನೆಮಾತಾಗಿದೆ. ಇಂದು ಈ ಸಂಸ್ಥೆಗೆ ಹೊಸದಾಗಿ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ವೃಷಭ ಸಂಜಯ ಪಾಟೀಲ ಅವರ ಮೇಲೆ ಹೆಚ್ಚಿನ ಜವಾಬ್ದಾರಿಗಳು ಬಂದಿದ್ದು, ಅವುಗಳನ್ನು ಸಮರ್ಥವಾಗಿ ನಿಭಾಯಿಸಲಿ ಎಂದು ಹೇಳಿದರು. ಇನ್ನು ಮುಂದೆ ಮಾಜಿ ಶಾಸಕ ಸಂಜಯ ಪಾಟೀಲ ಅವರು ತಮ್ಮ ಜನಪರ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಲಿ ಎಂದರು.
ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮಾತನಾಡಿ, ಇದೊಂದು ಅಪರೂಪದ ಕಾರ್ಯಕ್ರಮ. ಇಂದಿನ ಕಾಲದಲ್ಲಿ ಯಾರೂ ಸಹ ಅಧಿಕಾರವನ್ನು ಬಿಟ್ಟು ಕೊಡುವುದಿಲ್ಲ. ಆದರೆ ಸಂಜಯ ಪಾಟೀಲ ಅವರು ತಮ್ಮ ಅಧಿಕಾರವನ್ನು ತಮ್ಮ ಮಗನಿಗೆ ನೀಡವ ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿದ್ದಾರೆ ಎಂದರು.
ಶಾಸಕ ಅಭಯ ಪಾಟೀಲ ಅವರು ಮಾತನಾಡಿ, ಕಳೆದ ೩೦ ವರ್ಷಗಳಿಂದ ಮಾಜಿ ಶಾಸಕ ಸಂಜಯ ಪಾಟೀಲ ಅವರು ಅನೇಕ ಕಷ್ಟಗಳನ್ನು ಮತ್ತು ಅನೇಕ ಸವಾಲುಗಳನ್ನು ಎದುರಿಸಿ ಈ ಸಂಸ್ಥೆಯನ್ನು ಇಂದು ಹೆಮ್ಮರವಾಗಿ ಬೆಳೆಸಿದ್ದಾರೆ. ಅವರು ಬೆಳೆಸಿದ ಶಿಕ್ಷಣ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವ ಜವಾಬ್ದಾರಿ ನೂತನ ಉತ್ತರಾಧಿಕಾರಿಗಳ ಮೇಲಿದೆ ಎಂದು ಅವರು ಹೇಳಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಸ್ವಸ್ತೀಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮಿಜಿಗಳು ಆರ್ಶಿವಚನ ನೀಡಿ, ಸಂಜಯ ಪಾಟೀಲ ಅವರಂತೆ ವೃಷಭ ಪಾಟೀಲ ಅವರೂ ಸಹ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಮಾಜ ಕಾರ್ಯದಲ್ಲಿ ಮುಂಚೂಣಿಯಲ್ಲಿರಬೇಕೆಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಸಂಜಯ ಪಾಟೀಲ ಅವರು ಮಾತನಾಡಿ, ಕಳೆದ ೩೦ ವರ್ಷಗಳಿಂದ ಎಲ್ಲರೂ ಸಹ ನನಗೆ ಸಹಕಾರ ನೀಡುತ್ತ ಬಂದಿದ್ದಿರಿ. ಮುಂಬರುವ ದಿನಗಳಲ್ಲಿ ನನಗೆ ಸಹಕಾರ ನೀಡಿದಂತೆ ನೂತನ ಉತ್ತರಾಧಿಕಾರಿಗಳಿಗೆ ಸಹಕಾರ ನೀಡಿಬೇಕೆಂದು ವಿನಂತಿಸಿಕೊಂಡರು.
ಸಮಾರಂಭದಲ್ಲಿ ಶಾಸಕರಾದ ವಿಠ್ಠಲ ಹಲಗೇಕರ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ರಮೇಶ ಕತ್ತಿ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ , ವೀರಕುಮಾರ ಪಾಟೀಲ, ಮೊದಲಾದವರು ಮಾತನಾಡಿ, ನೂತನ ಉತ್ತರಾಧಿಕಾರಿ ವೃಷಭ ಪಾಟೀಲ ಅವರಿಗೆ ಶುಭ ಕೋರಿದರು.
ವೇದಿಕೆ ಮೇಲೆ, ಮಾಜಿ ಶಾಸಕರಾದ ಅನಿಲ ಬೆನಕೆ, ಡಾ. ವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಮಹಾಂತೇಶ ದೊಡಗೌಡರ, ಮಹಾದೇವಪ್ಪ ಯಾದವಾಡ, ವಾಯವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸುನಿಲ ಹನಮಣ್ಣವರ, ಉದ್ಯಮಿ ಗೋಪಾಲ ಜಿನಗೌಡ, ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ಉತ್ತಮ ಪಾಟೀಲ, ಕರ್ನಾಟಕ ಜೈನ ಅಸೋಶಿಯೇಶನ ಉಪಾಧ್ಯಕ್ಷ ಶೀತಲ ಪಾಟೀಲ, ಮಹಾಪೌರ ಮಂಗೇಶ ಪವಾರ, ಉಪ ಮಹಾಪೌರ ವಾಣಿ ಜೋಶಿ, ಬಿಜೆಪಿ ಧುರಿಣರಾದ ಎಂ.ಬಿ.ಝಿರಲಿ, ಸುಭಾಷ ಪಾಟೀಲ, ಗೀತಾ ಸುತಾರ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕ ಸನತಕಕುಮಾರ ವ್ಹಿ.ವ್ಹಿ. ಅತಿಥಿಗಳನ್ನು ಸ್ವಾಗತಿಸಿದರು. ಮೋಕ್ಷ ಸನತಕುಮಾರ ವಂದಿಸಿದರು. ಮಿಥುನ ಶಾಸ್ತ್ರಿ , ಅನೇಕಾಂತ ಶಾಸ್ತ್ರಿ,, ಪದ್ಮಾಕರ ಖತಗಲಿ ಕಾರ್ಯಕ್ರಮ ನಿರೂಪಿಸಿದರು.


