*ಹಾಸನಾಂಬ ಭಕ್ತರಿಗೆ ಗುಡ್ ನ್ಯೂಸ್*: *100 ರ ಬದಲಿಗೆ 60ಕ್ಕೆ ಸಿಗಲಿದೆ ಲಡ್ಡು!*

ಪ್ರಗತಿವಾಹಿನಿ ಸುದ್ದಿ: ಹಾಸನಾಂಬೆ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಸಿಹಿಸುದ್ದಿ ಸಿಕ್ಕಿದೆ. ದೇವಸ್ಥಾನದಲ್ಲಿ ಲಾಡು ಪ್ರಸಾದಕ್ಕೆ ನಿಗದಿಪಡಿಸಲಾಗಿದ್ದ ₹100 ದರವನ್ನು ₹60ಕ್ಕೆ ಇಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಧರ್ಮ ದರ್ಶನಕ್ಕೆ ಬರುವ ಬಡ ಮತ್ತು ಸಾಮಾನ್ಯ ಭಕ್ತರಿಗೆ ಪ್ರಸಾದದ ಬೆಲೆ ಹೊರೆಯಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಶುಕ್ರವಾರ ಬೆಳಗ್ಗೆ ಹಾಸನಾಂಬೆ ದೇವಸ್ಥಾನದ ಲಾಡು ಪ್ರಸಾದ ವಿತರಣೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ದರ ನಿಗದಿ ಬಗ್ಗೆ ಚರ್ಚಿಸಿದರು. ದೇವಸ್ಥಾನದ ಆಡಳಿತ ಮಂಡಳಿಯು ಒಂದು ಲಾಡಿಗೆ ₹100 ದರ ನಿಗದಿಪಡಿಸಲು ನಿರ್ಧರಿಸಿತ್ತು. ಆದರೆ ಸಾಮಾನ್ಯ ಭಕ್ತರಿಗೆ ಈ ದರ ಹೊರೆಯಾಗಬಹುದು ಎಂಬ ಕಾರಣಕ್ಕೆ ₹60ಕ್ಕೆ ಇಳಿಸುವಂತೆ ಸೂಚನೆ ನೀಡಿದ್ದಾರೆ.
ಧರ್ಮ ದರ್ಶನಕ್ಕೆ ಆಗಮಿಸುವವರಲ್ಲಿ ಹೆಚ್ಚಿನವರು ಬಡವರು ಮತ್ತು ಮಧ್ಯಮ ವರ್ಗದವರಾಗಿರುತ್ತಾರೆ. ಹೀಗಾಗಿ ಪ್ರಸಾದ ಮಾರಾಟದಲ್ಲಿ ಹೆಚ್ಚಿನ ಲಾಭ ಗಳಿಸುವ ಉದ್ದೇಶ ಇರಬಾರದು ಎಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಲಾಡಿನ ಮೇಲೆ ₹40 ಲಾಭ ಇಟ್ಟು ಮಾರಾಟ ಮಾಡುವ ಬದಲು ಎಲ್ಲ ಭಕ್ತರಿಗೂ ಕೈಗೆಟುಕುವ ದರದಲ್ಲಿ ಪ್ರಸಾದ ವಿತರಿಸುವಂತೆ ನಿರ್ದೇಶನ ನೀಡಿದ್ದಾರೆ.
ಹಾಸನಾಂಬೆ ದೇವಸ್ಥಾನಕ್ಕೆ ಲಾಡು ಪ್ರಸಾದ ಪೂರೈಸುವ ಟೆಂಡರ್ ಅನ್ನು ಇಸ್ಕಾನ್ ಸಂಸ್ಥೆಗೆ ನೀಡಲಾಗಿದೆ. ಟೆಂಡರ್ ಪ್ರಕಾರ ಒಂದು ಲಾಡಿನ ಪೂರೈಕೆ ವೆಚ್ಚ ₹56 ಆಗಿದೆ. ಈ ಹಿನ್ನೆಲೆಯಲ್ಲಿ ಲಾಡನ್ನು ₹56ಕ್ಕೇ ನೀಡಬೇಕು ಎಂಬುದು ತಮ್ಮ ಅಭಿಲಾಷೆಯಾಗಿತ್ತು. ಆದರೆ ಚಿಲ್ಲರೆ ಹಣದ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ ₹60 ದರ ನಿಗದಿಪಡಿಸುವಂತೆ ಸಲಹೆ ನೀಡಿರುವುದಾಗಿ ಸಚಿವರು ತಿಳಿಸಿದ್ದಾರೆ.
ಇನ್ನು ಹಾಸನಾಂಬೆ ದೇವಿಯ ದರ್ಶನಕ್ಕಾಗಿ ₹1,000 ಟಿಕೆಟ್ ಖರೀದಿಸುವ ಭಕ್ತರಿಗೆ ಎರಡು ಲಾಡುಗಳನ್ನು ಉಚಿತವಾಗಿ ನೀಡಲಾಗುತ್ತದೆ. ಆದರೆ ಉಚಿತ ಧರ್ಮ ದರ್ಶನಕ್ಕೆ ಬರುವ ಭಕ್ತರು ಲಾಡು ಪ್ರಸಾದ ಪಡೆಯಲು ಪ್ರತ್ಯೇಕವಾಗಿ ಹಣ ಪಾವತಿಸಬೇಕಾಗುತ್ತದೆ.
ಸಚಿವರ ಸೂಚನೆಯಂತೆ ಲಾಡು ಪ್ರಸಾದದ ದರ ₹100ರಿಂದ ₹60ಕ್ಕೆ ಇಳಿಕೆಯಾದರೆ ಪ್ರತಿ ಲಾಡಿಗೆ ಭಕ್ತರಿಗೆ ₹40 ಉಳಿತಾಯವಾಗಲಿದೆ. ಎಲ್ಲ ವರ್ಗದ ಭಕ್ತರಿಗೂ ಕೈಗೆಟುಕುವ ದರದಲ್ಲಿ ಪ್ರಸಾದ ದೊರೆಯುವಂತೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



