Kannada NewsKarnataka NewsLatest

*ಗೂಗಲ್ ಮ್ಯಾಪ್ ಎಡವಟ್ಟು*: *ಕಾಡಿನಲ್ಲಿ ಸಿಲುಕಿ, ಕಾಡಾನೆ ಕೂಗಿಗೆ ರಾತ್ರಿಯಿಡೀ ನಡುಗಿದ 9 ಟೆಕ್ಕಿಗಳು!*

ಪ್ರಗತಿವಾಹಿನಿ ಸುದ್ದಿ: ಮೈಸೂರು ದಸರಾ ಕಣ್ತುಂಬಿಕೊಂಡು ಚೆನ್ನೈಗೆ ಹೊರಟಿದ್ದ ಒಂಬತ್ತು ಟೆಕ್ಕಿಗಳಿಗೆ ಗೂಗಲ್ ಮ್ಯಾಪ್ ದಾರಿ ತಪ್ಪಿಸಿದೆ! ಮೊಬೈಲ್‌ನಲ್ಲಿ ತೋರಿಸಿದ ಮಾರ್ಗವನ್ನು ನಂಬಿ ಕಾರು ಚಲಾಯಿಸಿದ ತಂಡ ದಟ್ಟ ಕಾಡಿನೊಳಗೆ ಸಿಲುಕಿಕೊಂಡಿದೆ. ಕತ್ತಲಾವರಿಸಿದ ಕಾಡಿನಲ್ಲಿ ಕಾಡಾನೆಯ ಕೂಗು ಕೇಳಿ ಆತಂಕಗೊಂಡ ಟೆಕ್ಕಿಗಳು ರಾತ್ರಿಯಿಡೀ ಕಾರಿನೊಳಗೇ ಕುಳಿತು ಕಾಲ ಕಳೆದಿದ್ದಾರೆ. ಕೊನೆಗೆ ಬೆಳಕಾಗುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ಸುರಕ್ಷಿತವಾಗಿ ಹೊರತಂದಿದ್ದಾರೆ.

ಬೆಂಗಳೂರಿನಿಂದ ಮೈಸೂರಿಗೆ ಬಂದಿದ್ದ ರೋಜರ್ ಪ್ರಿನ್ಸ್, ಪ್ರಿನ್ಸ್ ಮಾರ್ಟಿನ್, ಮಣಿ, ಅರಿವುಮತಿ, ಗಣ, ಶರ್ಮಿಳಾ, ತ್ರಿಷಾ, ಬೊಪೇಶ್ ಮತ್ತು ಜೋಸಯ್ಯ ಎಂಬ ಒಂಬತ್ತು ಮಂದಿ ದಸರಾ ಉತ್ಸವ ವೀಕ್ಷಿಸಿದ ಬಳಿಕ ಚೆನ್ನೈಗೆ ಪ್ರಯಾಣ ಬೆಳೆಸಿದ್ದರು. ಚಾಮರಾಜನಗರ ಮಾರ್ಗವಾಗಿ ದಿಂಬಂ ಘಾಟ್ ಮೂಲಕ ತೆರಳಲು ನಿರ್ಧರಿಸಿದ್ದ ತಂಡ, ರಾತ್ರಿ ಗೂಗಲ್ ಮ್ಯಾಪ್ ತೋರಿಸಿದ ದಾರಿಯಲ್ಲಿ ಕಾರು ಚಲಾಯಿಸಿತ್ತು. ಆದರೆ, ಆ ಮಾರ್ಗ ಕಾಡಿನ ಒಳಭಾಗಕ್ಕೆ ಕರೆದೊಯ್ದಿದೆ.

ಮುಂದೆ ಸಾಗುತ್ತಿದ್ದಂತೆ ಕಾರು ರಸ್ತೆ ಬದಿಯ ಕಂದಕದಲ್ಲಿ ಸಿಲುಕಿಕೊಂಡಿದೆ. ಸುತ್ತಲೂ ದಟ್ಟ ಕಾಡು, ಕತ್ತಲು ಆವರಿಸಿದ್ದರಿಂದ ಹೊರಬರುವುದು ಹೇಗೆ ಎಂಬುದೇ ತಂಡಕ್ಕೆ ತಿಳಿಯದಂತಾಗಿತ್ತು. ರಾತ್ರಿ ಸಮಯದಲ್ಲಿ ನೆರವು ಪಡೆಯುವುದೂ ಕಷ್ಟವಾಗಿತ್ತು. ಹೀಗಾಗಿ ಕಾರಿನಲ್ಲೇ ಉಳಿದು ಬೆಳಗಾಗುವುದನ್ನೇ ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು.

ಇದರ ನಡುವೆ ಕಾಡಾನೆಯ ಘೀಳಿಡುವ ಶಬ್ದ ಕೇಳಿಬಂದಿದ್ದು, ಆತಂಕ ಮತ್ತಷ್ಟು ಹೆಚ್ಚಿಸಿತು. ಕಾಡಾನೆಯ ಭಯದಿಂದ ಕಾರಿನಿಂದ ಹೊರಬರಲು ಧೈರ್ಯ ಮಾಡದ ಟೆಕ್ಕಿಗಳು, ರಾತ್ರಿಯಿಡೀ ವಾಹನದೊಳಗೇ ಜಾಗರಣೆ ಮಾಡಿದ್ದಾರೆ. ಬೆಳಕು ಹರಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ದೊರೆಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಂದಕದಲ್ಲಿ ಸಿಲುಕಿದ್ದ ಕಾರನ್ನು ಮೇಲಕ್ಕೆತ್ತಿದ್ದಾರೆ. ತಮಿಳುನಾಡು ಪೊಲೀಸರು ಒಂಬತ್ತು ಟೆಕ್ಕಿಗಳನ್ನು ಸುರಕ್ಷಿತವಾಗಿ ಮುಂದಿನ ಪ್ರಯಾಣಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಅಪಾಯ ಸಂಭವಿಸಿಲ್ಲ.

ಗೂಗಲ್ ಮ್ಯಾಪ್ ತೋರಿಸುವ ಪ್ರತಿಯೊಂದು ಮಾರ್ಗವೂ ಸುರಕ್ಷಿತವಾಗಿರುತ್ತದೆ ಎಂದು ನಂಬಲು ಸಾಧ್ಯವಿಲ್ಲ ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ. ವಿಶೇಷವಾಗಿ ರಾತ್ರಿ ಪ್ರಯಾಣಿಸುವಾಗ ಕಾಡಿನ ಒಳರಸ್ತೆಗಳು ಅಥವಾ ಪರಿಚಯವಿಲ್ಲದ ಮಾರ್ಗಗಳನ್ನು ಆಯ್ಕೆ ಮಾಡುವ ಮುನ್ನ ಸ್ಥಳೀಯರ ಮಾಹಿತಿ ಮತ್ತು ರಸ್ತೆ ಪರಿಸ್ಥಿತಿಯನ್ನು ಪರಿಶೀಲಿಸುವುದು ಅತ್ಯಗತ್ಯ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button