*ಗೋಶಾಲೆ ನಿರ್ಮಾಣ ಕಾಮಗಾರಿಗೆ ಶಾಸಕ ಗಣೇಶ ಹುಕ್ಕೇರಿ ಗುದ್ದಲಿ ಪೂಜೆ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಚಿಕ್ಕೋಡಿ ಸದಲಗಾ ಮತಕ್ಷೇತ್ರದ ಶಾಸಕರಾದ ಗಣೇಶ ಪ್ರಕಾಶ ಹುಕ್ಕೇರಿಯವರು ತಮ್ಮ ಹುಟ್ಟುಹಬ್ಬದ ದಿನದಂದು ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದಲ್ಲಿ ಗೋಶಾಲೆಯ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುವುದರ ಮೂಲಕ ಚಾಲನೆ ನೀಡಿದರು.
ಚಿಂಚಣಿಯ ಅಲ್ಲಮಪ್ರಭು ಮಹಾಸ್ವಾಮಿಗಳು, ಚಿಕ್ಕೋಡಿಯ ಚರಮೂರ್ತಿ ಮಠದ ಸಂಪಾದನಾ ಮಹಾಸ್ವಾಮಿಗಳು ಹಾಗೂ ಜೋಡಕುರಳಿ ಸಿದ್ಧಾರೂಢ ಮಠದ ಚಿದ್ಘನಾನಂದ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಗೋವುಗಳ ಪೂಜೆ ನೆರವೇರಿಸುವುದರ ಮೂಲಕ ಸ್ವಾಮೀಜಿಗಳಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಗಣೇಶ ಪ್ರಕಾಶ ಹುಕ್ಕೇರಿ, ಒಟ್ಟು 56 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು ನಾನು ಹಾಗೂ ನಾಯಕರಾದ ಪ್ರಕಾಶಣ್ಣಾ ಹುಕ್ಕೇರಿ ಅವರು ಮುಂದಿನ ಹಂತದಲ್ಲಿ ಹೆಚ್ಚಿನ ಅನುದಾನ ತಂದು ಗಡಿಭಾಗದಲ್ಲಿ ಮಾದರಿಯ ಗೋಶಾಲೆ ನಿರ್ಮಿಸುತ್ತೇವೆ ಎಂದರು. ಈ ಗೋಶಾಲೆಯು ಒಟ್ಟು 10 ಎಕರೆ ಬೃಹತ್ ವಿಸ್ತೀರ್ಣದಲ್ಲಿ ನಿರ್ಮಿಸಲಾಗುತ್ತಿದೆ. ಇದರಲ್ಲಿ ಔಷಧ ಕೊಠಡಿ, ವಿಶ್ರಾಂತಿ ಕೊಠಡಿ ಹಾಗೂ ಮೇವೂ ಸಂಗ್ರಹಣಾ ಶೆಡ್ ಸೇರಿದಂತೆ ಇತರೆ ಕೊಠಡಿಗಳನ್ನು ನಿರ್ಮಿಸಲಾಗುವುದು. ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಈ ವೇಳೆ ಸಸ್ಯೋತ್ಸವ ಎಂಬ ಅಭಿಯಾನದ ಅಡಿ ಚಿಕ್ಕೋಡಿ ಸದಲಗಾ ಕ್ಷೇತ್ರದಾದ್ಯಂತ 1 ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಪ್ರಾಯೋಗಿಕವಾಗಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಆಗಮಿಸಿದ ಸಾವಿರಾರು ಜನರು ಶಾಸಕರ ಹುಟ್ಟು ಹಬ್ಬಕ್ಕೆ ಶುಭ ಕೋರಿ ಅವರ ಪ್ರಗತಿಪರ ಕಾರ್ಯಗಳನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಪಾಟೀಲ, ರಂಜಿತ ಶಿರಸೆಟ, ಬಸು ಪಾಟೀಲ, ರವಿ ಪಾಟೀಲ, ವಿಠಲ ವಾಳಕಿ, ಪಾಪು ಕಿಲಿಕತ್ ಹಾಗೂ ಕೆರೂರ, ಜೋಡಕುರಳಿ, ಕಾಡಾಪುರ ಮತ್ತು ಅಂಕಲಿ ಗ್ರಾಮದ ಗಣ್ಯ ವ್ಯಕ್ತಿಗಳು, ಪಂಚಾಯತ್ ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ