Kannada NewsLatest

1956 ರಲ್ಲಿ ಚಿಕ್ಕೋಡಿಯ ಅಂಕಲಿಯಲ್ಲಿ ಆಯೋಜಿಸಿದ್ದ ಸಭೆಯ ಕರಪತ್ರ ಲಭ್ಯ

1956 ರಲ್ಲಿ ಚಿಕ್ಕೋಡಿಯ ಅಂಕಲಿಯಲ್ಲಿ ಆಯೋಜಿಸಿದ್ದ ಸಭೆಯ ಕರಪತ್ರ ಲಭ್ಯ

ಕರ್ನಾಟಕ ಏಕೀಕರಣದಲ್ಲಿ ಮುಂಬೈ-ಕರ್ನಾಟಕ ಪಾತ್ರಕ್ಕೆ ಸಾಕ್ಷ್ಯ

 

ಡಾ. ರವೀಂದ್ರ ತೋಟಿಗೇರ, ಬೆಳಗಾವಿ :

ಕರ್ನಾಟಕ ಏಕೀಕರಣ ಹೋರಾಟದಲ್ಲಿ ಮುಂಬೈ-ಕರ್ನಾಟಕ ಪ್ರಾಂತ್ಯ ಸಕ್ರೀಯವಾಗಿತ್ತು. ಕನ್ನಡ ನಾಡು ಕಟ್ಟುವದಕ್ಕಾಗಿ ಈ ಭಾಗದ ಜನರೂ ಕೂಡ ದಣಿವರಿಯದೇ ದುಡಿದಿದ್ದರು. ಇದಕ್ಕೆ ಸಾಕ್ಷಿ-ಪುರಾವೆ ಎಂಬಂತೆ, 1956 ರ ಜ.10 ರಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಬೆಳಗಾವಿ ಜಿಲ್ಲೆಯ ಕರ್ನಾಟಕ ಏಕೀಕರಣ ಪರಿಷತ್ ಸಭೆ ನಡೆದಿರುವ ಕುರಿತು ಮಹತ್ವದ ದಾಖಲೆಗಳು ಲಭ್ಯವಾಗಿವೆ.

ಬೆಳಗಾವಿ ಕಾಯಂ ಜನತಾ ನ್ಯಾಯಾಲಯದ ಸದಸ್ಯ ಅನಿಲಕುಮಾರ ಬಾಳಗೌಡ ಪಾಟೀಲ ಎಂಬುವವರಿಂದ ಗಡಿತಜ್ಞ ಹಾಗೂ ರಾಜ್ಯ ವಕೀಲರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ರವೀಂದ್ರ ತೋಟಗೇರ ಈ ದಾಖಲೆ ಸಂಗ್ರಹಿಸಿದ್ದಾರೆ. ಕರ್ನಾಟಕ ಗಡಿ ರಕ್ಷಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ ಅವರಿಗೆ ಶೀಘ್ರದಲ್ಲಿ ಈ ದಾಖಲೆ ಹಸ್ತಾಂತರಿಸಲಿದ್ದಾರೆ.

ಕರ್ನಾಟಕ-ಮಹಾರಾಷ್ಟ್ರ ಗಡಿ ಹಂಚಿಕೆ ವಿವಾದ ಈಗ ಸುಪ್ರಿಂಕೋರ್ಟಿನ ಅಂಗಳದಲ್ಲಿದೆ. ಬೆಳಗಾವಿ-ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಪ್ರಮುಖ ಸ್ಥಳ. ಈ ಭೌಗೋಳಿಕ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡಲು ಸಾಧ್ಯವೇ ಇಲ್ಲ ಎಂದು ಕರ್ನಾಟಕದ ಪರವಾಗಿ ವಾದ ಮಂಡಿಸಲು ವಕೀಲರಿಗೆ ಈ ದಾಖಲೆ ಪುಷ್ಟಿ ನೀಡಲಿದೆ.

ಕರಪತ್ರ ಏನು ಹೇಳುತ್ತದೆ ? :

ಕರ್ನಾಟಕ ಪ್ರಾಂತವು ಉದಯವಾಗುತ್ತಿರುವ ಸಂಧಿ ಕಾಲದಲ್ಲಿ ಬೆಳಗಾವಿ ಜಿಲ್ಲೆಯ ಕರ್ನಾಟಕ ಏಕೀಕರಣ ಪರಿಷತ್ತಿನ ಸಭೆಯನ್ನು ವಿಶೇಷ ಉದ್ದೇಶಕ್ಕಾಗಿ ಏರ್ಪಡಿಸುವ ಬಹುದಿನಗಳ ಕನಸು ನನಸಾಗುವ ಸಂದರ್ಭದಲ್ಲಿ, ಕನ್ನಡಿಗರು ಕರ್ನಾಟಕ ಪ್ರಾಂತ್ಯದ ಏಳ್ಗಿಗಾಗಿ ಏನು ಸಿದ್ದತೆ ಮಾಡಿಕೊಳ್ಳಬೇಕು, ಯಾವ ಕಾರ್ಯ ಯೋಜನೆ ಹಾಕಿಕೊಳ್ಳಬೇಕು ಎಂಬ ಸಮಾಲೋಚನೆ ನಡೆಸುವುದಕ್ಕಾಗಿ ವೇದಿಕೆ ರೂಪಗೊಂಡಿತ್ತು.

ಕರ್ನಾಟಕ ಉದಯವಾಗುವ ಕಾಲದಲ್ಲಿ ಗಡಿನಾಡಿನ ಪ್ರಶ್ನೆಯೊಂದು ಸೂಕ್ಷ್ಮ ಸ್ಥಿತಿಗೆ ಮುಟ್ಟಿದೆ, ಅನ್ಯ-ಭಾಷಿಕ ಬಂದುಗಳು ಆಕ್ರಮಿಕದೊರಣೆಯನ್ನು ಅನುಸರಿಸಿ ಅಲ್ಲ-ಸಲ್ಲದ ಬೇಡಿಕೆ ಮುಂದಿಟ್ಟು ವಿಷಮಯ ವಾತಾವರಣವನ್ನು ಹಬ್ಬಿಸತೊಡಗಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ನಿಜ ಸಂಗತಿ ತಿಳಿಯದೇ ತಪ್ಪು ತಿಳುವಳಿಕೆ ಮಾಡಿಕೊಳ್ಳುವುದು ಸಹಜವಾಗಿದೆ. ಆದ್ದರಿಂದ ಅಂತವರಿಗೆ ಯೋಗ್ಯವಾದ ತಿಳುವಳಿಕೆಯನ್ನುಂಟು ಮಾಡಿ, ಕನ್ನಡ ನಾಡಿನ ಜನರಲ್ಲಿ ಒಗ್ಗಟ್ಟು, ಸೌಹಾರ್ದ ಭಾವನೆ, ಸ್ವಾಭಿಮಾನಗಳನ್ನು ತುಂಬುವ ಮಹತ್ಕಾರ್ಯವಾಗುವ ಉದ್ದೇಶ ಹೊಂದಿ ಬೆಳಗಾವಿ ಜಿಲ್ಲೆ ಕರ್ನಾಟಕ ಏಕೀಕರಣ ಸಭೆ ಕರೆಯಲಾಗಿತ್ತು.

ಕನ್ನಡ ನಾಡಿನ ಹಿಂದಿನ ಇತಿಹಾಸವನ್ನು ನೆನಪಿಸಿಕೊಂಡಾಗ ಕನ್ನಡಿಗರ ಎದೆಯು ಸ್ವಾಭಿಮಾನದಿಂದ ಹಿಗ್ಗುತ್ತದೆ. ಕನ್ನಡ ನಾಡನ್ನು ಆಳಿದ ರಾಜ-ವಂಶಗಳು, ಸಾಹಿತ್ಯ ಸೇವೆ ಗೈದ ಕವಿಗಳು, ಧರ್ಮವನ್ನು ಬೆಳಗಿದ ಶರಣರು, ದಾಸರು, ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡಲಿಕ್ಕೆ ಅತ್ಯಂತ ಪರಿಶ್ರಮವಹಿಸಿರುವುದು ಅಭಿಮಾನದ ಸಂಗತಿಯಾಗಿದೆ.

ಹಾಗೆಯೇ ಕನ್ನಡ ನಾಡಿನ ಏಕೀಕರಣ ಹೊರಾಟದಲ್ಲಿಯೂ ಕನ್ನಡಿಗರು ತಮ್ಮ ತ್ಯಾಗ ಬಲಿದಾನಗಳಿಂದ ಹಿಂದಿನ ಪರಂಪರೆಯನ್ನು ಮುಂದುವರೆಸಿರುತ್ತಾರೆ. ಕಾರಣ ಕನ್ನಡ ನಾಡನ್ನು ಸರ್ವಾಂಗ ಸುಂದರವನ್ನಾಗಿ ಮಾಡಲಿಕ್ಕೆ ಸುಸಂಧಿ ಬಂದೊದಗಿದೆ. ಅದನ್ನು ಸರಿಯಾಗಿ ಉಪಯೋಗಿಸಿಕೊಂಡು ರಾಷ್ಟ್ರದ ಒಗಟ್ಟನ್ನು ಕಾಪಾಡಲಿಕ್ಕೆ ಹಾಗೂ ಕನ್ನಡಿಗರ ಏಳ್ಗೆಯನ್ನು ಸಾಧಿಸಲಿಕ್ಕೆ÷ಶತಪ್ರಯತ್ನಗಳು ಆಗಬೇಕಿವೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮೀತಿ ಅಧ್ಯಕ್ಷ ಅಂಬಲಿ ಚನ್ನಬಸಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಆಗಿನ ಲೋಕಸಭೆ ಸದಸ್ಯ ಎಸ್. ನಿಜಲಿಂಗಪ್ಪ ಉದ್ಘಾಟಿಸಿದ್ದರು. ಹುಬ್ಬಳ್ಳಿಯ ಗುದ್ಲೆಪ್ಪ ಹಳ್ಳಿಕೇರಿ, ರೋಣದ ಅಂದಾನೆಪ್ಪ ಕುಂದರಗಿ, ಶಿವನಗೌಡಾ ಪಾಟೀಲ, ಬೆಳಗಾವಿಯ ಅರವಿಂದ ಜೋಶಿ, ಅನಂತರಾವ ಚಿಕ್ಕೋಡಿ, ಎಸ್. ಐ. ಗುತ್ತಿಗೋಳ, ಡಾ. ತೇರಗುಂಡಿ, ಜಿ.ಬಿ.ಪಾಟೀಲ, ಚನ್ನಪ್ಪ ವಾಲಿ, ಷಣ್ಮುಖಪ್ಪ ಅಂಗಡಿ, ವಿ.ಸಿ.ಹೆದ್ದೂರಶೆಟ್ಟಿ, ಅಣ್ಣೂ ಗುರೂಜಿ, ಸೊಲ್ಲಾಪೂರದ ಜಯದೇವಿತಾಯಿ ಲಿಗಾಡೆ, ಶಾಸಕಿ ಸುಶೀಲಾದೇವಿ ಕುಲಕರ್ಣಿ, ಪದ್ಮಾವತಿದೇವಿ ಅಂಗಡಿ ಪಾಲ್ಗೊಂಡಿದ್ದರು. ಶಾಸಕ ಹಾಗೂ ನಿವೃತ್ತ ನ್ಯಾಯಾಧೀಶ ಪಿ.ಎಚ್.ಗುಂಜಾಳ ಪರಿಷತ್ತಿನ ಸ್ವಾಗತಾಧ್ಯಕ್ಷರಾಗಿದ್ದರೆ, ಶಾಸಕ ಎಸ್.ಡಿ.ಕೊಠಾವಳಿ ಕಾರ್ಯಾಧ್ಯಕ್ಷರಾಗಿದ್ದರು, ಬಾಳಗೌಡ ಪಾಟೀಲ ಮತ್ತು ಚಿದಾನಂದ ಕೋರೆ ಪರಿಷತ್‌ನ ಪ್ರಧಾನ ಕಾರ್ಯದರ್ಶಿಗಳಾಗಿ ಸಭೆಯ ಯಶಸ್ವಿಗೆ ದುಡಿದಿದ್ದರು.

ಈ ಕರಪತ್ರವನ್ನು ದಿನಾಂಕ :04/01/1956 ರಂದು ನಿಪ್ಪಾಣಿ ಶ್ರೀ ವರ್ಧಮಾನ ಪ್ರೆಸ್‌ನಲ್ಲಿ ಮುದ್ರಣಗೊಂಡಿತ್ತು. ಈ ಕರಾರು ಪತ್ರದ ಮಜಕೂರವನ್ನೊಳಗೊಂಡು ಅಂಕಿ ಅಂಶಗಳು ಕೂಡ ಅಚ್ಛ ಕನ್ನಡದಲ್ಲಿದೆ. ಈ ಕರಪತ್ರ ಜೊತೆಗೆ ಎಸ್. ನಿಜಲಿಂಗಪ್ಪನವರನ್ನು ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಚಿದಾನಂದ ಕೋರೆಯವರು ಸಭೆಗೆ ಸ್ವಾಗತ್ತಿಸುತ್ತಿರುವ ಕಪ್ಪು-ಬಿಳುಪು ಛಾಯಾಚಿತ್ರಕೂಡ ಲಭ್ಯವಾಗಿದೆ. ಚಿತ್ರದಲ್ಲಿ ಇನ್ನೊರ್ವ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ಬಾಳಗೌಡ ಪಾಟೀಲರು ಕೂಡ ಇರುವುದು ಕಂಡು ಬರುತ್ತದೆ.

ನಮ್ಮ ಬೆಳಗಾವಿಯ ಗಡಿ-ಭಾಗವು ಕೂಡ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಕೈಜೋಡಿಸಿತ್ತು ಹಾಗೂ ಗಡಿ ನಾಡಿನ ಜನ ಕನ್ನಡ ನಾಡು ಕಟ್ಟಲು ಶ್ರಮಿಸಿದ್ದರು ಎನ್ನುವ ಅಂಶವನ್ನು ಈ ದಾಖಲೆಗಳ ಮುಖಾಂತರ ಸಾಕ್ಷಿಕರಿಸುತ್ತವೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button