Latest

ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ ಸರಕಾರಿ ನೌಕರರು

ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ ಸರಕಾರಿ ನೌಕರರು

ಎಂ.ಕೆ.ಹೆಗಡೆ, ಬೆಳಗಾವಿ – ರಾಜ್ಯ ಸರಕಾರಿ ನೌಕರರು ಪ್ರತಿಭಟನೆಗೆ ಇಳಿದರೆ ಸರಕಾರಕ್ಕೂ ಇಕ್ಕಟ್ಟು, ಜನಸಾಮಾನ್ಯರಿಗೂ ಸಂಕಟ. ಇಡೀ ಆಡಳಿತ ಯಂತ್ರವೇ ಸ್ಥಗಿತವಾಗಿ ವ್ಯವಸ್ಥೆಯೇ ಅಲ್ಲೋಲ ಕಲ್ಲೋಲವಾಗುತ್ತದೆ. ಹಾಗಾಗಿ ಯಾವುದೇ ಸರಕಾರ ಬಂದರೂ ಸರಕಾರಿ ನೌಕರರನ್ನು ಓಲೈಸಲು, ಸಮಾಧಾನಪಡಿಸಲು ಮೊದಲ ಆಧ್ಯತೆ ನೀಡುತ್ತವೆ.

ಈಗ ಮತ್ತೆ ರಾಜ್ಯ ಸರಕಾರಿ ನೌಕರರು ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ. ಅದರಲ್ಲೂ ಬೆಳಗಾವಿಯಲ್ಲಿ ವಿಧಾನಮಂಡಳದ ಅಧಿವೇಶನ ನಡೆಯುವ ವೇಳೆಯೇ ಸುವರ್ಣವಿಧಾನಸೌಧದ ಮುಂದೆ ಪ್ರತಿಭಟಿಸುವುದಾಗಿ ನೌಕರರ ಸಂಘ ಪ್ರಕಟಿಸಿದೆ.

ನೌಕರರು ಈ ಬಾರಿ ಪ್ರತಿಭಟನೆಗಿಳಿಯುತ್ತಿರುವುದು ನಿವೃತ್ತಿವೇತನ ವಿಷಯವಾಗಿ. 2006ರ ನಂತರ ನೇಮಕವಾಗಿರುವ ಸರಕಾರಿ ನೌಕರರಿಗೆ ನಿಶ್ಚಿತ ಪಿಂಚಣಿ ಸೌಲಭ್ಯ ರದ್ದುಪಡಿಸಿ, ಎನ್ ಪಿಎಸ್ (ನ್ಯಾಶನಲ್ ಪೆನ್ಶನ್ ಸ್ಕೀಂ) ಜಾರಿಗೊಳಿಸಲಾಗಿದೆ. ಈ ಯೋಜನೆ ಅನ್ವಯ, ನೌಕರರ ವೇತನದಲ್ಲಿ ಕಡಿತ ಮಾಡಿ ಅದಕ್ಕೆ ಸರಕಾರದ ಪಾಲನ್ನೂ ಸೇರಿಸಿ ಪೆನ್ಶನ್ ಯೋಜನೆಯಲ್ಲಿ ತೊಡಗಿಸಲಾಗುತ್ತದೆ.

ಮಾರ್ಕೆಟ್ ರಿಸ್ಕ್

ಇದು ಸಂಪೂರ್ಣ ಮಾರುಕಟ್ಟೆ ಏರಿಳಿತದ ಮೇಲೆ ಅವಲಂಭಿಸಿರುತ್ತದೆ. ಯಾವುದೇ ನಿಶ್ಚಿತ ಮೊತ್ತವನ್ನು ನೌಕರರು ನಿರೀಕ್ಷಿಸುವಂತಿಲ್ಲಿ. ಹಾಗಾಗಿ ಇದನ್ನು ವಾಪಸ್ ಪಡೆದು ಹಳೆಯ ನಿಶ್ಚಿತ ಪೆನ್ಶನ್ ಸ್ಕೀಂ ಅನ್ನೇ ಜಾರಿಗೆ ತರಬೇಕೆಂದು ನೌಕರು ಅದು ಜಾರಿಯಾದ ಲಾಗಾಯ್ತಿನಿಂದಲೂ ಹೋರಾಟ ಮಾಡುತ್ತಲೇ ಬಂದಿದ್ದಾರೆ.

ಆದರೆ ಸರಕಾರ ಭರವಸೆಯ ಮೇಲೆ ಭರವಸೆ ನೀಡುತ್ತಿದೆಯೇ ಹೊರತು ಕ್ರಮ ತೆಗೆದುಕೊಂಡಿಲ್ಲ. ಜೆಡಿಎಸ್ ಚುನಾವಣೆ ಪೂರ್ವ ತಮ್ಮ ಸರಕಾರ ಬಂದಲ್ಲಿ ಎನ್ ಪಿಎಸ್ ರದ್ದುಪಡಿಸುವುದಾಗಿ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದು 14 ತಿಂಗಳು ಆಡಳಿತ ನಡೆಸಿದರೂ ಭರವಸೆಯನ್ನು ಮಾತ್ರ ಈಡೇರಿಸಿಲ್ಲ. ಕಳೆದ ವಾರ ಒಂದು ಆದೇಶ ಹೊರಡಿಸಿ ಸರಕಾರ ತನ್ನ ಪಾಲನ್ನು ಶೇ.10ರಿಂದ 14ಕ್ಕೆ ಏರಿಸುವುದಾಗಿ ತಿಳಿಸಿದೆ. ಆದರೆ, ಈ ಯೋಜನೆಯನ್ನೇ ವಾಪಸ್ ಪಡೆಯಬೇಕೆನ್ನುವುದು ನೌಕರರ ಆಗ್ರಹ.

ಈ ಬಾರಿ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರೇ ಹೋರಾಟದ ನೇತೃತ್ವ ವಹಿಸುವುದಾಗಿ ಘೋಷಿಸಿದ್ದಾರೆ. 2006ರ ನಂತರ ನೇಮಕವಾದ ನೌಕರರ ಪರವಾಗಿ ಇಡೀ ಸರಕಾರಿ ನೌಕರರ ಸಂಘವೇ ನಿಂತಿದೆ. ಹಾಗಾಗಿ ಹೋರಾಟ ತೀವ್ರವಾಗುವ ಮತ್ತು ನಿರ್ಣಾಯಕ ಹೋರಾಟವಾಗುವ ಸಾಧ್ಯತೆ ಇದೆ.

ಅದರಲ್ಲೂ ವಿಧಾನಮಂಡಳದ ಅಧಿವೇಶನದ ವೇಳೆಯೇ ಹೊರಾಟ ನಡೆಸಲು ನಿರ್ಧರಿಸಿರುವುದರಿಂದ ವಿಷಯ ಗಂಭೀರವಾಗಿದೆ. ಸರಕಾರಿ ಅಧಿವೇಶನಕ್ಕೂ ಮೊದಲೇ ನೌಕರರ ಸಂಘದೊಂದಿಗೆ ಮಾತನಾಡಿ ಅದಕ್ಕೊಂದು ಪರಿಹಾರ ಕಂಡುಕೊಳ್ಳುತ್ತದೆಯೋ ಅಥವಾ ಪ್ರತಿಭಟನೆಗೆ ಅವಕಾಶ ಮಾಡಿಕೊಡುತ್ತದೆಯೋ ಕಾದು ನೋಡಬೇಕಿದೆ.

ಸಂಬಂಧಿಸಿದ ಸುದ್ದಿಗಳು –

ಎನ್ ಪಿಎಸ್ ನೌಕರರ ಪ್ರತಿಭಟನೆ

ಎನ್ ಪಿಎಸ್ ರದ್ಧುಗೊಳಿಸಿ, ಹಳೆ ಪಿಂಚಣಿ ಜಾರಿಗೊಳಿಸಿ

ಡಿ.12ಕ್ಕೆ ಎನ್ ಪಿಎಸ್ ನೌಕರರ ಬೆಳಗಾವಿ ಚಲೋ

ದೆಹಲಿ ಸರಕಾರಿ ನೌಕರರಿಗೆ ಎನ್ ಪಿಎಸ್ ರದ್ಧು-ಕೇಜ್ರಿವಾಲ್ ಘೋಷಣೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button