ರಾಮರಾಜ್ಯದ ಪರಿಕಲ್ಪನೆ ಇಟ್ಟುಕೊಂಡು ಸರಕಾರ ಕೆಲಸ ಮಾಡುತ್ತಿದೆ – ಲಕ್ಷ್ಮೀ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಮರಾಜ್ಯದ ಪರಿಕಲ್ಪನೆ ಇಟ್ಟುಕೊಂಡು ನಮ್ಮ ಸರಕಾರ ಕೆಲಸ ಮಾಡುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಕೇಂದ್ರ ಬಸ್ ನಿಲ್ದಾಣದಲ್ಲಿ ಭಾನುವಾರ ನಡೆದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ಬಸ್ಸುಗಳ ಲೋಕಾರ್ಪಣೆ, ಅಪಘಾತರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಹಾಗೂ ಹಾರೂಗೇರಿ ನೂತನ ಬಸ್ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿಯೊಂದು ಪ್ರಜೆ ಸುಖದಿಂದ, ನೆಮ್ಮದಿಯಿಂದ ಜೀವನ ಮಾಡುವುದೇ ರಾಮರಾಜ್ಯ. ನಮ್ಮ ಸರಕಾರ ಸಿದ್ದರಾಮಯ್ಯನವರ ಮುಖಂಡತ್ವದಲ್ಲಿ ಚಾಚೂ ತಪ್ಪದೆ ರಾಮರಾಜ್ಯದ ಪರಿಕಲ್ಪನೆಯಲ್ಲಿ ಕೆಲಸ ಮಾಡುತ್ತಿದೆ. ಮನೆ ಮನೆಯಲ್ಲಿ ರಾಮರಾಜ್ಯ ನಿರ್ಮಾಣ ಮಾಡಬೇಕೆನ್ನುವುದೇ ನಮ್ಮ ಉದ್ದೇಶ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ನಿನ್ನೆ ನಾನು ಒಂದು ವಿಡಿಯೋ ನೋಡ್ತಾ ಇದ್ದೆ. 30 ವರ್ಷದ ಮಗನನ್ನು ಕಳೆದುಕೊಂಡ ತಾಯಿ ಮಗನ ಅಂತ್ಯಸಂಸ್ಕಾರದ ವೇಳೆ ನಮ್ಮ ಗೃಹ ಲಕ್ಷ್ಮೀ ಯೋಜನೆಯ 2 ಸಾವಿರ ರೂ. ಬಗ್ಗೆ ಮಾತಾಡ್ತಾ ಇದ್ಲು. 2 ಸಾವಿರ ರೂ. ಗಳಿಂದ ನಾವು ಸುಖವಾಗಿ ಬಾಳ್ತಾ ಇದ್ವಿ, ನೀನು ನನ್ನ ಬಿಟ್ಟು ಹೊದೆಯಲ್ವೋ ಎಂದು ಗೋಳಾಡ್ತಾ ಇದ್ಲು. ಆ ದುಖಃದಲ್ಲೂ ಆ ತಾಯಿ ಗೃಹ ಲಕ್ಷ್ಮೀ ಯೋಜನೆ ನೆನೆದಳಲ್ವಾ, ಇಂತವರಿಗಾಗಿಯೇ ನಮ್ಮ ಯೋಜನೆ, ಬಡ ಕುಟುಂಬದ ನೆರವಿಗೆ ನಮ್ಮ ಸರಕಾರ ನಿಲ್ಲಬೇಕೆನ್ನುವುದೇ ನಮ್ಮ ಉದ್ದೇಶ, ಅದೇ ಸಾರ್ಥಕತೆ ಎಂದು ಅವರು ಹೇಳಿದರು.
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಜನರು ನೆಮ್ಮದಿಯಿಂದ ಬದುಕಿದ್ದಾರೆ. ಸರ್ಕಾರ ನುಡಿದಂತೆ ನಡೆದಿದೆ. ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ಹೆಚ್ಚು ಒತ್ತು ನೀಡಿದೆ. ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು, ಯಶಸ್ವಿಗೊಳಿಸಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದರು.
ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ, ಗೃಹಜ್ಯೋತಿ ಯೋಜನೆಗಳು ಬಡವರಪರ ಯೋಜನೆಗಳಾಗಿವೆ. ರಾಜ್ಯದ ಬಹುಸಂಖ್ಯಾತ ಜನಸಮುದಾಯವನ್ನು ತಲುಪುವ ‘ಗ್ಯಾರಂಟಿ’ ಯೋಜನೆಗಳು ಸಂಪೂರ್ಣ ಯಶಸ್ವಿಯಾಗಿವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಸಂತಸ ವ್ಯಕ್ತಪಡಿಸಿದರು.
ಶಕ್ತಿ ಮತ್ತು ಗೃಹ ಲಕ್ಷ್ಮೀ ಬಂದ ಮೇಲೆ ಮಹಿಳೆಯರು ಸ್ವತಂತ್ರವಾಗಿ ಓಡಾಡಲು ಅನುಕೂಲವಾಗಿದೆ. ದೇವಸ್ಥಾನಗಳಿಗೆ ತೆರಳಿ ಅಲ್ಲಿ ಉಡಿ ತುಂಬಿ ನೆಮ್ಮದಿಯಿಂದ ಬರುತ್ತಿದ್ದಾರೆ. ಎಂಥ ಪುಣ್ಯದ ಕೆಲವನ್ನು ನಮ್ಮ ಸರಕಾರ ಮಾಡುತ್ತಿದೆ. ಕಾಂಗ್ರೆಸ್ ಸರಕಾರ ಎಂದರೆ ಬದ್ಧತೆ. ಚುನಾವಣೆ ಪೂರ್ವ ಕರ್ನಾಟಕ ರಾಜ್ಯದ ಮಹಾ ಜನತೆಗೆ, ವಿಶೇಷವಾಗಿ ಮಹಿಳೆಯರಿಗೆ ನೀಡಿದ್ದ ಭರವಸೆಯಂತೆ ಪಂಚ ಗ್ಯಾರಂಟಿ ಜಾರಿ ಮಾಡಿದೆವು. ನಾವು ಕೊಟ್ಟ ಭಾಷೆಯನ್ನು ಬದ್ಧತೆಯಿಂದ ಜಾರಿಗೆ ತಂದೆವು. ಎಲ್ಲರೂ ಸಾಮರಸ್ಯದಿಂದ ಇರುವುದೇ ಕಾಂಗ್ರೆಸ್ ಪಕ್ಷದ ಬದ್ಧತೆ ಎಂದು ಸಚಿವರು ಹೇಳಿದರು.
ಈ ವರ್ಷ ಸುಮಾರು 749 ಹೊಸ ಬಸ್ ಗಳ ಖರೀದಿ ಪ್ರಕ್ರಿಯೆ ನಡೆದಿದೆ. 2000 ಹುದ್ದೆ ನೇಮಕ ಪ್ರಕ್ರಿಯೆ ನಡೆದಿದೆ. ಮಳೆ, ಚಳಿ, ಬಿಸಿಲು ಏನೇ ಇದ್ದರೂ ಸಾರ್ವಜನಿಕರ ಸೇವೆಗೆ ಸಾರಿಗೆ ಇಲಾಖೆಯ ನೌಕರರು ಸದಾ ಶ್ರಮಿಸುತ್ತಿದ್ದಾರೆ. ಮನೆಯಲ್ಲಿ ಏನೇ ಕೆಲಸ, ಕಾರ್ಯಕ್ರಮ ಇದ್ದರೂ ಬಿಟ್ಟು ಸೇವೆ ಮಾಡುವ ಅವರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಿಮ್ಮ ಸೇವಾ ಮನೋಭಾವದ ಹಿಂದೆ ನಿಮ್ಮ ಕುಟುಂಬದ ತ್ಯಾಗ ಬಹಳಷ್ಟಿದೆ. ಈಗ ಮಾಡಿರುವ ಸನ್ಮಾನ ಕೇವಲ ನಿಮಗಲ್ಲ, ನಿಮ್ಮ ಕುಟುಂಬ ವರ್ಗದವರಿಗೂ ಸಲ್ಲುತ್ತದೆ. ನಮ್ಮ ಸರಕಾರ ಬಂದ ಮೇಲೆ 145 ಜನರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಲಾಗಿದೆ. ಕರ್ತವ್ಯದ ವೇಳೆ ಮೃತರಾದವರ ಕುಟುಂಬಕ್ಕೆ 50 ಲಕ್ಷ ರೂ. ಕೊಡುತ್ತಿದ್ದೇವೆ. ಇದನ್ನು ಒಂದು ಕೋಟಿ ರೂ.ಗೆ ಏರಿಸಲು ರಾಮಲಿಂಗಾ ರಡ್ಡಿ ಅವರ ಪ್ರಸ್ತಾವನೆ ಸಲ್ಲಿಸಿದ್ದಾರೆ. ರಾಮಲಿಂಗಾ ರಡ್ಡಿ ಅವರು ಅತ್ಯಂತ ಕ್ರಿಯಾ ಶೀಲ ಮಂತ್ರಿಗಳು. ದಿನದ 24 ಗಂಟೆ ಕೆಲಸ ಮಾಡುತ್ತಾರೆ ಎಂದು ಹೆಬ್ಬಾಳಕರ್ ಹೇಳಿದರು.
ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಸ್ವಲ್ಪ ಅನಾನುಕೂಲತೆ ಆಯಿತು. ಹಾಗಾಗಿಯೇ ಹೊಸ ಬಸ್ ಗಳ ಸೇರ್ಪಡೆ ಮೂಲಕ ಆ ಸಮಸ್ಯೆ ನಿವಾರಿಸುವ ಪ್ರಯತ್ನ ಮಾಡಲಾಗುತ್ತಿದೆ. ಅಧಿಕಾರಿಗಳು ಸಮಾಧಾನದಿಂದ ಸಹಕಾರ ಮಾಡಿದ್ದರಿಂದ ಯೋಜನೆ ಯಶಸ್ವಿಯಾಗಿದೆ. ಸರಕಾರದಷ್ಟೇ ಅಧಿಕಾರಿ, ಸಿಬ್ಬಂದಿಯೂ ಈ ಯಶಸ್ಸಿಗೆ ಕಾರಣ. ಸರಕಾರದ ಯೋಜನೆಗಳನ್ನು ಅರ್ಥಪೂರ್ಣವಾಗಿ ಜಾರಿಗೆ ತರುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕು ಎಂದು ಹೆಬ್ಬಾಳಕರ್ ಹೇಳಿದರು.
ಸಮಾರಂಭದಲ್ಲಿ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ವಿಧಾಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕರಾದ ಅಶೋಕ ಪಟ್ಟಣ, ಬಾಬಾಸಾಹೇಬ್ ಪಾಟೀಲ, ಆಸೀಫ್ ಸೇಠ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ರಾಜು ಕಾಗೆ , ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಭರತ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ