*ರಾಜ್ಯದ ಐದು ಜಿಲ್ಲೆಗಳ ವಿಭಜನೆಗೆ ಸರ್ಕಾರದ ಚಿಂತನ*

ಪ್ರಗತಿವಾಹಿನಿ ಸುದ್ದಿ : ಬೆಳಗಾವಿ ಜಿಲ್ಲೆ ವಿಭಜನೆ ಕೂಗು ಜೋರಾಗಿದ್ದು, ಚಿಕ್ಕೋಡಿ ಹಾಗೂ ಗೋಕಾಕ ಜಿಲ್ಲೆ ರಚನೆಗೆ ಸರ್ಕಾರ ಆಸಕ್ತಿ ತೋರಿದೆ ಎನ್ನಲಾಗುತ್ತಿದ್ದು, ಜೊತೆಗೆ ರಾಜ್ಯದ ನಾಲ್ಕು ಜಿಲ್ಲೆಗಳನ್ನು ಸಹ ಸರ್ಕಾರ ವಿಭಜಿಸಲಿದೆ ಎಂದು ಹೇಳಲಾಗುತ್ತಿದೆ.
ಸುಗಮ ಆಡಳಿತದ ದೃಷ್ಟಿಯಿಂದ ಬೆಳಗಾವಿ, ತುಮಕೂರು, ಮೈಸೂರು, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದ ಜಿಲ್ಲೆಗಳ ವಿಭಜನೆ ಮಾಡಬೇಕು ಎನ್ನುವ ಚರ್ಚೆ ನಡೆದಿದೆ.
ರಾಜ್ಯದಲ್ಲಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯನ್ನು ಮೂರು ಜಿಲ್ಲೆಗಳಾಗಿ ವಿಂಗಡಣೆ ಮಾಡೋಕೆ ಸರ್ಕಾರ ನಿರ್ಧಾರ ಮಾಡಿದೆ. ಬೆಳಗಾವಿಯನ್ನು ವಿಭಜನೆ ಮಾಡಿ ಚಿಕ್ಕೋಡಿ ಹಾಗೂ ಗೋಕಾಕ್ ಜಿಲ್ಲೆಗಳನ್ನಾಗಿ ಮಾಡಲು ಸರ್ಕಾರ ಚಿಂತಿಸುತ್ತಿದೆ.
ಉತ್ತರ ಕನ್ನಡ ಜಿಲ್ಲೆ
ಶಿರಸಿ ಅದರ ಭಾಗವಾಗಿರುವ ಒಂದು ಪ್ರಮುಖ ತಾಲ್ಲೂಕು ಕೇಂದ್ರವಾಗಿದೆ. ಶಿರಸಿಯನ್ನು ಪ್ರತ್ಯೇಕ ಜಿಲ್ಲೆಯಾಗಿ ವಿಭಜಿಸುವ ಒತ್ತಡ ಇದೆ. ಇದು ಕರಾವಳಿ ಜಿಲ್ಲೆಯಾಗಿದ್ದು, ಇದು 12 ತಾಲ್ಲೂಕುಗಳನ್ನು ಒಳಗೊಂಡಿದೆ.
ಇದನ್ನೂ ಸಹ ಎರಡೂ ಭಾಗಗಳನ್ನಾಗಿ ಮಾಡಿ ಆಡಳಿತ ಸುಧಾರಣೆ ಮಾಡೋಕೆ ಸರ್ಕಾರ ಚಿಂತನೆ ನಡೆಸಿದೆ
ತುಮಕೂರು ಜಿಲ್ಲೆ
ಇನ್ನು ಕಲ್ಪತರ ನಾಡು ತುಮಕೂರು ಕೂಡ ದೊಡ್ಡದಾಗಿದೆ. ತುಮಕೂರಲ್ಲಿ 10 ತಾಲೂಕುಗಳಿದ್ದು, ಬೆಂಗಳೂರಿಗೆ ತುಂಬಾ ಹತ್ತಿರದಲ್ಲಿದೆ. ಅಭಿವೃದ್ಧಿಗೆ ವೇಗ ನೀಡುವ ಕಾರಣ ತುಮಕೂರು ವಿಂಗಡಣೆಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಮಧುಗಿರಿ ಮತ್ತು ತಿಪಟೂರು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸುವ ಚರ್ಚೆ ಶುರುವಾಗಿದೆ.
ಮೈಸೂರು ಎರಡು ಜಿಲ್ಲೆಯಾಗಿ ರಚನೆ
ಇನ್ನು ರಾಜ್ಯದ ಎರಡನೇ ಸುಸಜ್ಜಿತ ನಗರ ಮೈಸೂರು ಸಹ ದೊಡ್ಡದಾಗಿದ್ದು, ಇದನ್ನು ವಿಭಜಿಸುವ ಮಾತುಗಳು ಹೆಚ್ಚಾಗಿದೆ. ಹುಣಸೂರನ್ನು ಪ್ರತ್ಯೇಕಗೊಳಿಸಿ ತಾಲೂಕುಗಳನ್ನು ಸೇರಿಸಿ ಹೊಸ ಜಿಲ್ಲೆ ಘೋಷಣೆ ಮಾಡಬೇಕು ಎಂದು ಒತ್ತಡ ಕೇಳಿಬರುತ್ತಿದೆ.




