ಪ್ರಗತಿವಾಹಿನಿ ಸುದ್ದಿ, ಮಾಂಜರಿ – ಸಣ್ಣ ನೀರಾವರಿ ಇಲಾಖೆಯಿಂದ ಚಿಕ್ಕೋಡಿ ತಾಲೂಕಿನಲ್ಲಿ 9 ಹಾಗೂ ಖಾನಾಪುರ ತಾಲೂಕಿನಲ್ಲಿ 1 ಬ್ರೀಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನವನ್ನು ಸರ್ಕಾರ ಮಂಜೂರು ಮಾಡಿದೆ ಎಂದು ವಿಧಾನ ಪರಿಷತ್ ಸರಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ತಾಲೂಕಿನ ಖಡಕಲಾಟ, ನವಲಿಹಾಳ, ಪಟ್ಟಣಕುಡಿ ಮುಂತಾದ ಗ್ರಾಮದ ಬಳಿ ಹಳ್ಳಕ್ಕೆ ಭಾನುವಾರ ಬ್ರೀಜ್ ಕಂ ಬಾಂದಾರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಯೋಜನೆಯಿಂದ ಈ ಭಾಗದ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರಕಲಿದೆ. ಮಳೆಗಾಲದಲ್ಲಿ ಪ್ರವಾಹ ಬಂದು ತೊಂದರೆ ಅನುಭವಿಸಿದ್ದೇವೆ. ಅದೇ ನೀರನ್ನು ತಡೆ ಹಿಡಿದು ಅದನ್ನು ಇಂಗಿಸುವ ಮೂಲಕ ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಬ್ರೀಜ್ ಕಂ ಬಾಂದಾರಗಳನ್ನು ನಿರ್ಮಾಣ ಮಾಡಲಾಗುತ್ತದೆ. ಬಿಜೆಪಿ ಸರಕಾರ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆಧ್ಯತೆ ನೀಡಿದೆ ಎಂದು ಹೇಳಿದರು.
ಇದೀಗ ನೀರನ್ನು ತಡೆ ಹಿಡಿದು ಇಂಗಿಸುವ ಯೋಜನೆಗೆ ಕರ್ನಾಟಕದಲ್ಲಿಯೂ ಚಾಲನೆ ನೀಡಲಾಗಿದೆ. ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಯಡಿ 0.95 ಟಿಎಂಸಿ ನೀರನ್ನು ದೂಧಗಂಗಾ ನದಿ ಕೂಡುವ ಕೃಷ್ಣಾ ನದಿಯಿಂದ ಎತ್ತು ಮೂಲಕ 4500 ಹೆಕ್ಟೇರ್ ಕ್ಷೇತ್ರ ನೀರಾವರಿಗೆ ಒಳಪಡಲಿದ್ದು, ಇದಕ್ಕೆ 375 ಕೋಟಿ ರೂ.ಗಳ ವೆಚ್ಚವಾಗಲಿದೆ. ಇದಕ್ಕೆ ಈಗಾಗಲೇ ಆಡಳಿತಾತ್ಮಕ ಅನುಮೋದನೆ ದೊರಕಿದೆ. ಶೀಘ್ರ ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.
ರಾಯಬಾಗ ತಾಲೂಕಿನ ದಿಗ್ಗೇವಾಡಿ ಗ್ರಾಮದ ಬಳಿ ಕೃಷ್ಣಾ ನದಿಗೆ 32 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಬೃಹತ್ ನೀರಾವರಿ ಸಚಿವ ರಮೇಶ ಜಾರಕಿಹೋಳಿ ಚಾಲನೆ ನೀಡಲಿದ್ದಾರೆ. ಈಗಿರುವ ಕಲ್ಲೋಳ ಬ್ಯಾರೇಜ್ ಶಿಥಿಲಗೊಂಡಿದ್ದು, ನೀರು ನಿಲ್ಲುವುದಿಲ್ಲ. ಈ ಸೇತುವೆ ನಿರ್ಮಾಣವಾಗಬೇಕು ಎಂಬುದು ಈ ಭಾಗದ ರೈತರ ಬೇಡಿಕೆ ಇದೆ. ಆದರೆ 30 ವರ್ಷಗಳಿಂದ ರಾಜಕೀಯ ಮಾಡಿರುವ ಕಾಂಗ್ರೆಸ್‍ನವರು ಬ್ಯಾರೇಜ್ ನಿರ್ಮಾಣ ಮಾಡುತ್ತೇವೆಂದು ಹೇಳುವುದರಲ್ಲಿಯೇ ಕಾಲ ಕಳೆದರೇ ಹೊರತು ಸೇತುವೆ ನಿರ್ಮಾಣ ಮಾಡಲಿಲ್ಲ. ಕಲ್ಲೋಳ ಬ್ಯಾರೇಜ್ ಪುನರ್ ನಿರ್ಮಾಣ ಕಾಮಗಾರಿಗೂ ಈಗ ಬಿಜೆಪಿ ಸರಕಾರ ಚಾಲನೆ ನೀಡಲಿದೆ ಎಂದು ಹೇಳಿದರು.
ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಹರಿಯುವ ನೀರನ್ನು ಹಿಡಿದು ಮುಂಬರುವ ಏಪ್ರೀಲ್, ಮೇ ತಿಂಗಳಲ್ಲಿ ಬೇಸಿಗೆಯಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ಉದ್ದೇಶದಿಂದ ಕಲ್ಲೋಳ ಬಳಿ ಕೃಷ್ಣಾ ನದಿಗೆ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಈ ಕುರಿತು ಮುಖ್ಯಮಂತ್ರಿಗೆ ಮನವಿ ಮಾಡಲಾಗಿದ್ದು, ಈ ಯೋಜನೆಗೆ ಮಂಜೂರಾತಿ ನೀಡುವುದಾಗಿ ಹೇಳಿದ್ದಾರೆ. ಕರಗಾಂವ ಏತ ನೀರಾವರಿಗೂ ನೀರಿನ ಹಂಚಿಕೆ ಮಾಡಿ ಅದಕ್ಕೆ ಹಣ ಕೊಡುವ ಕೆಲಸ ಸರಕಾರ ಮಾಡಲಿದೆ. ಒಂದು ಲಕ್ಷ ಕೋಟಿ ರೂ.ವೆಚ್ಚದ ಆಲಮಟ್ಟಿ ಜಲಾಶಯವನ್ನು 524 ಮೀಟರ್ ಎತ್ತರ ಮಾಡುವುದರಿಂದ 130 ಟಿಎಂಸಿ ನೀರು ಹೆಚ್ಚುವರಿಯಾಗಿ ಕರ್ನಾಟಕಕ್ಕೆ ದೊರಕಲಿದೆ. ಆ ನೀರಿನ ಸದ್ಬಳಕೆ ಮಾಡಬೇಕಾಗಿದೆ. ಒಂದು ವೇಳೆ ಆ ನೀರನ್ನು ಸದ್ಬಳಕೆ ಮಾಡದಿದ್ದರೆ ಆ ನೀರು ಆಂದ್ರ ಪ್ರದೇಶಕ್ಕೆ ಹರಿದು ಹೋಗಲಿದೆ. ಆದ್ದರಿಂದ ಆ ನೀರನ್ನು ಕಾಲಮಿತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ. ಅದರೊಂದಿಗೆ
ಬಾದಿತವಾದ ಗ್ರಾಮಗಳನ್ನು ಸ್ಥಳಾಂತರ ಮಾಡಬೇಕಾಗಿದೆ. ಆದ್ದರಿಂದ ಈ ಯೋಜನೆಯನ್ನು ಕೇಂದ್ರ ಸರಕಾರದ ವಿಶೇಷ ಯೋಜನೆಯಡಿ ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ಒತ್ತಾಯಿಸಲಾಗಿದೆ ಎಂದು ಹೇಳಿದರು.
ವಿಶ್ವನಾಥ ಕಮತೆ, ತಾತ್ಯಾಸಾಹೇಬ ಪಾಟೀಲ, ವಿರುಪಾಕ್ಷಿ ಸಂಕಾಜೆ, ನಾಸೀರ ತಹಸೀಲ್ದಾರ, ರಾವಸಾಬ ಜಿಪರೆ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ