Kannada NewsKarnataka NewsLatest

ಕಾಡಂಚಿನ ಖಾಸಗಿ ಜಾಗದಲ್ಲಿ ವಾಸಿಸುವವರಿಗೂ ಹಕ್ಕುಪತ್ರ ನೀಡಲು ಸರಕಾರ ಬದ್ಧ: ಸಿಎಂ ಬೊಮ್ಮಾಯಿ ಭರವಸೆ

ಬೆಳಗಾವಿ ಜಿಲ್ಲೆಯ 11,600 ಜನರಿಗೆ ಹಕ್ಕುಪತ್ರ ವಿತರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಹಲವು ಕಾನೂನು ತೊಡಕುಗಳನ್ನು ಪರಿಹರಿಸಿ ಲಂಬಾಣಿ ತಾಂಡ, ಗೊಲ್ಲರಹಟ್ಟಿ, ಕುರುಬರಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗಿದೆ. ಅದೇ ರೀತಿ ಕಾಡಂಚಿನಲ್ಲಿ ಹಾಗೂ ಖಾಸಗಿ ಜಾಗದಲ್ಲಿ ವಾಸಿಸುವ ಜನರಿಗೂ ಹಕ್ಕುಪತ್ರ ನೀಡಲು ಸರಕಾರ ಬದ್ಧವಿದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ರಾಮದುರ್ಗ ತಾಲೂಕಿನ ಬಟಕುರ್ಕಿಯಲ್ಲಿ ಬುಧವಾರ ನಡೆದ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಹಕ್ಕುಪತ್ರ ವಿತರಣಾ ಸಮಾವೇಶ, ಅನುಷ್ಠಾನ ಹಾಗೂ ಅರಿವು ಕಾರ್ಯಕ್ರಮದಲ್ಲಿ ವಿವಿಧ ತಾಂಡಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

“ಪ್ರಧಾನಮಂತ್ರಿಗಳು ಇತ್ತೀಚೆಗೆ ಕಲಬುರಗಿಯಲ್ಲಿ 50 ಸಾವಿರಕ್ಕೂ ಅಧಿಕ ಜನರಿಗೆ ಹಕ್ಕುಪತ್ರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ ಇನ್ನೂ 50 ಸಾವಿರ ಜನರಿಗೆ ಹಕ್ಕುಪತ್ರ ವಿತರಿಸಲಿದ್ದಾರೆ. ಸಮಾಜದಲ್ಲಿ ಯಾವುದೇ ನಿರ್ಣಯ ತೆಗೆದುಕೊಳ್ಳುವಾಗ ಏನೇ ಗೊಂದಲ ಎದುರಾದರೂ ಸಮಾಜದ ಕಟ್ಟಕಡೆಯ ಜನರ ಕಣ್ಣೀರು ನೋಡಿ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು. ಅಂತಹ ನಿರ್ಧಾರ ತೆಗೆದುಕೊಂಡಿದ್ದೇನೆ” ಎಂದು ಬೊಮ್ಮಾಯಿ ಹೇಳಿದರು.

“ಸರಕಾರಿ ಯೋಜನೆಯ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವುದರ ಜತೆಗೆ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮಲಪ್ರಭೆ ನದಿತೀರದಲ್ಲಿ ಪ್ರವಾಹ ಹಾನಿ ತಪ್ಪಿಸಲು 125 ಕೋಟಿ ರೂ. ವೆಚ್ಚದಲ್ಲಿ ರಕ್ಷಣಾ ಗೋಡೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಪ್ರವಾಹ ಬಂದು ಒಂದು ವರ್ಷದೊಳಗೆ ನಮ್ಮ ಸರ್ಕಾರ ಈ ತೀರ್ಮಾನ ಮಾಡಿದೆ. ಹೊಸ ವ್ಯವಸ್ಥೆಯಲ್ಲಿ ಕೂಡಲೇ ಸ್ಪಂದಿಸಿ ಕೆಲಸ ಮಾಡುವುದು ನಮ್ಮ ಧರ್ಮ” ಎಂದರು.

“ಬೆಳೆಹಾನಿ ಪರಿಹಾರವಾಗಿ ಕೇಂದ್ರ ಸರಕಾರ ನೀಡುವ ಪರಿಹಾರಧನದ ಎರಡು ಪಟ್ಟು ಪರಿಹಾರವನ್ನು ರಾಜ್ಯ ಸರಕಾರ ನೀಡಿರುವುದು ದೇಶದಲ್ಲೇ ಮೊದಲು. ಇದು ನಮ್ಮ ಸರಕಾರದ ಬದ್ಧತೆಯಾಗಿದೆ. ಇದುವರೆಗೂ ಯಾವುದೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ದುಪ್ಪಟ್ಟು ಪರಿಹಾರ ಕೊಟ್ಟಿರುವುದು ಇತಿಹಾಸದಲ್ಲಿ ಯಾರೂ ಮಾಡಿಲ್ಲ. ಬೆಲೆ ನಾಶ ಆದ 2 ತಿಂಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಹಿಂದಿನಂತೆ ಬಾಯಿಮಾತಿನಲ್ಲಿ ಪರಿಹಾರ ನೀಡುವ ಸರಕಾರ ಇದಲ್ಲ, ಪ್ರತಿಯೊಂದು ಸಂದರ್ಭದಲ್ಲಿ ತ್ವರಿತವಾಗಿ ಸ್ಪಂದಿಸುವ ಮೂಲಕ ಜನರ ಸಮಸ್ಯೆಗಳ ನಿವಾರಣೆಗೆ ಶ್ರಮಿಸಲಾಗಿದೆ” ಎಂದರು.

“ಪಿಎಂ-ಕಿಸಾನ್ ಯೋಜನೆಯಡಿ 5.61 ಲಕ್ಷ ರೈತರ ಖಾತೆಗೆ 1130 ಕೋಟಿ ಹಣವನ್ನು ಜಮೆ ಮಾಡಲಾಗಿದೆ. ಸ್ವತಃ ಮಾನ್ಯ ಪ್ರಧಾನಮಂತ್ರಿಗಳು ನೇರವಾಗಿ ರೈತರ ಖಾತೆಗೆ ಹಣ ಜಮೆ ಮಾಡಿದ್ದಾರೆ. ಜಲಜೀವನ ಮಿಷನ್ ಯೋಜನೆಯಡಿ ದೇಶದ 12 ಕೋಟಿ ಮನೆಗಳಿಗೆ ಹಾಗೂ ರಾಜ್ಯದಲ್ಲಿ ಮೂರು ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನೀರು ಒದಗಿಸಲಾಗಿದೆ. ಇನ್ನೂ 25 ಲಕ್ಷ ಮನೆಗಳಿಗೆ ನಳದ ಮೂಲಕ ಕುಡಿಯುವ ನೀರು ಒದಗಿಸುವ ಗುರಿ ಹೊಂದಲಾಗಿದೆ. ಗ್ಯಾಸ್ ಸಂಪರ್ಕ, ವಿದ್ಯುತ್ ಸೇರಿದಂತೆ ಒಂದು ಕುಟುಂಬಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ನೀಡಿವೆ” ಎಂದು ಸಿಎಂ ಹೇಳಿದರು.

ಬೆಳಗಾವಿಯಲ್ಲಿ 1, 2, 370 ಮಕ್ಕಳಿಗೆ ರೈತ ವಿದ್ಯಾ ನಿಧಿ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಾಗೂ ನಮ್ಮ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ 16 ಸಾವಿರ ಕೋಟಿ ರೂ.ಗಳನ್ನು ಒದಗಿಸಲಾಗಿದ್ದು, 53 ಲಕ್ಷ ರೈತರಿಗೆ ನೇರವಾಗಿ ಅವರ ಖಾತೆಗಳಿಗೆ ಡಿಬಿಟಿ ಮೂಲಕ ಹಣ ಪಾವತಿಯಾಗಿದೆ.

“ಪ್ರಧಾನ ಮಂತ್ರಿ ಆವಾಸ್ ಯೋಜನೆ, ಸ್ವಚ್ಛ ಭಾರತ, ಬೆಳಕು, ಉಜ್ವಲ ಮೂಲಕ ಗ್ಯಾಸ್ ಸಂಪರ್ಕ ನೀಡಲಾಗಿದೆ. ರೈತ ವಿದ್ಯಾ ನಿಧಿ ಯೋಜನೆಯಡಿ 13 ಲಕ್ಷ ರೈತರ ಮಕ್ಕಳಿಗೆ ಈ ಯೋಜನೆ ತಲುಪಿದೆ. ಬೆಳಗಾವಿಯಲ್ಲಿ 1, 2, 370 ಮಕ್ಕಳಿಗೆ ರೈತ ವಿದ್ಯಾ ನಿಧಿ ದೊರೆತಿದೆ. ದುಡಿಯುವ ವರ್ಗ ಸಬಲರಾಗಿದ್ದಾಗ ರಾಜ್ಯದ ಅಭಿವೃದ್ಧಿಯಾಗುತ್ತದೆ. ಸಮಸ್ಯೆ ಅರಿತು, ಸಂವೇದನಾಶೀಲವಾಗಿ ಸರ್ಕಾರ ಕೆಲಸ ಮಾಡುತ್ತಿದೆ. ಸ್ತ್ರೀ ಸಾಮರ್ಥ್ಯ ಯೋಜನೆಯಡಿ 50 ಸಾವಿನ ಸಂಘಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ” ಎಂದರು.

“ಸ್ತ್ರೀಶಕ್ತಿ ಸಂಘಗಳಿಗೆ ಐದು ಲಕ್ಷ ರೂಪಾಯಿವರೆಗೆ ನೆರವು ನೀಡಲಾಗುವುದು. ಸ್ವಾಮಿ ವಿವೇಕಾನಂದ ಯೋಜನೆಯಡಿ ಪ್ರತಿ ಗ್ರಾಮದ ಎರಡು ಯುವಕ ಸಂಘಗಳಿಗೆ ತಲಾ ಐದು ಲಕ್ಷ ನೆರವು ನೀಡಿ, ಸ್ವಯಂ ಉದ್ಯೋಗ ಕೈಗೊಳ್ಳಲು ಅವಕಾಶ ಕಲ್ಪಿಸಲಾಗುವುದು. ದುಡಿಮೆ ಇದ್ದರೆ ಬಡತನ ಇರುವುದಿಲ್ಲ. ಆದ್ದರಿಂದ ಕಾಯಕ ಅವಲಂಬಿಸಿದ ಸಮುದಾಯಗಳಿಗೆ ವಿಶೇಷ ಯೋಜನೆ ಜಾರಿಗೊಳಿಸಲಾಗಿದೆ. ಪರಿಶಿಷ್ಟ ಜಾತಿ/ಪಂಗಡಗಳ ಜನರ ಬಹುದಿನಗಳ ಬೇಡಿಕೆಯಂತೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಕಾನೂನು ಮಾಡಲಾಗಿದೆ. ಸಂವಿಧಾನದ ಶೆಡ್ಯೂಲ್ 9 ರಲ್ಲಿ ಸೇರ್ಪಡೆಗೊಳಿಸಲಾಗುವುದು. ಮೀಸಲಾತಿ ಹೆಚ್ಚಿಸುವ ನಿರ್ಧಾರ ಜೇನುಗೂಡಿಗೆ ಕೈಹಾಕಿದಂತೆ ಅನೇಕ ಜನರು ಎಚ್ಚರಿಸಿದರು. ಆದರೆ ಇದನ್ನು ಲೆಕ್ಕಿಸದೇ ಜೇನುಗೂಡಿಗೆ ಕೈಹಾಕಿ ಅದರಲ್ಲಿನ ಜೇನು ತೆಗೆದು ಜನರಿಗೆ ಕೊಡುವ ಧೈರ್ಯ ನಮ್ಮ ಸರಕಾರ ಮಾಡಿದೆ” ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

“ಶಾಲಾ ಮಕ್ಕಳಿಗಾಗಿಯೇ ವಿಶೇಷವಾಗಿ ಎರಡು ಸಾವಿರ ಬಸ್ ಗಳನ್ನು ನೀಡಲು ಸರಕಾರ ತೀರ್ಮಾನಿಸಿದೆ” ಎಂದು ಹೇಳಿ ಬೊಮ್ಮಾಯಿ, ಇದೇ ವೇಳೆ ಬೆಳಗಾವಿ ಜಿಲ್ಲೆಯ ಒಟ್ಟು 11,600 ಜನರ ಪೈಕಿ ವೇದಿಕೆಯ ಮೇಲೆ ಕೆಲವು ಜನರಿಗೆ ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್, “ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುತುವರ್ಜಿಯಿಂದ ಹತ್ತಾರು ಕಾನೂನು ತೊಡಕುಗಳನ್ನು ಬಗೆಹರಿಸಿದ ಪರಿಣಾಮ ಇಂದು ಸಾವಿರಾರು ಕುಟುಂಬಗಳಿಗೆ ಹಕ್ಕುಪತ್ರ ದೊರೆತಿದೆ. ಇದರಲ್ಲಿ ಕಂದಾಯ ಸಚಿವರಾದ ಆರ್.ಅಶೋಕ ಅವರ ಶ್ರಮ ಕೂಡ ಬಹಳಷ್ಟಿದೆ” ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಮದುರ್ಗ ಶಾಸಕರಾದ ಮಹಾದೇವಪ್ಪ ಯಾದವಾಡ , “ಮುಖ್ಯಮಂತ್ರಿ ಬೊಮ್ಮಾಯಿ ಅವರು ರಾಮದುರ್ಗ ತಾಲ್ಲೂಕಿಗೆ ಒಟ್ಟಾರೆ 3100 ಕೋಟಿ ರೂ. ಅನುದಾನ ನೀಡುವ ಮೂಲಕ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ್ದಾರೆ.
ತಾಲ್ಲೂಕಿನ ಉಳಿದ ತಾಂಡ ಹಾಗೂ ಕೆಲ ಗ್ರಾಮಗಳನ್ನು ಕಂದಾಯ ಗ್ರಾಮವೆಂದು ಘೋಷಿಸಬೇಕು” ಎಂದು ಕೋರಿದರು.
ರಾಮದುರ್ಗ ತಾಲ್ಲೂಕಿನ ಐದು ಗ್ರಾಮಗಳು ಸೇರಿದಂತೆ ಜಿಲ್ಲೆಯ 75 ಗ್ರಾಮಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಿರುವುದಕ್ಕೆ ಯಾದವಾಡ ಸಂತಸ ವ್ಯಕ್ತಪಡಿಸಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, “ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಕಳಸಾ-ಬಂಡೂರಿ ಯೋಜನೆಗೆ ಕೇಂದ್ರದ ಹಸಿರುನಿಶಾನೆ ಪಡೆಯಲು ಮುಖ್ಯಮಂತ್ರಿಗಳ ವಿಶೇಷ ಪ್ರಯತ್ನವೇ ಕಾರಣವಾಗಿದೆ. ಡಿಪಿಆರ್ ಗೆ ಅನುಮೋದನೆ ಪಡೆಯುವುದರ ಜತೆಗೆ ಯೋಜನೆ ಅನುಷ್ಠಾನಕ್ಕೆ ಒಂದು ಸಾವಿರ ಕೋಟಿ ರೂಪಾಯಿ ತೆಗೆದಿರಿಸುವ ಮೂಲಕ ತಮ್ಮ ಬದ್ಧತೆ ತೋರಿಸಿದ್ದಾರೆ” ಎಂದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸ್ವಾಗತಿಸಿದರು. ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಂ. ಐಹೊಳೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸಂಜೀವ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

https://pragati.taskdun.com/urgent-order-for-installation-of-108-feet-statue-of-basavanna-on-the-bank-of-river-ghataprabha-cm-basavaraja-bommai/
https://pragati.taskdun.com/all-are-equal-in-cooperative-arena-cm-bommai/

https://pragati.taskdun.com/this-young-mans-stomach-had-56-blades/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button