ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಕೈಗಾರಿಕೆಗಳ ಅಭಿವೃದ್ಧಿ ವಿಚಾರದಲ್ಲಿ ಬೆಳಗಾವಿ- ಹುಬ್ಬಳ್ಳಿ ನಡುವೆ ಸರಕಾರ ತಾರತಮ್ಯ ಮಾಡುತ್ತಿದೆ ಎಂದು ಸ್ವಪಕ್ಷದ ಶಾಸಕ ಅಭಯ ಪಾಟೀಲ್ ಗಂಭೀರ ಆರೋಪ ಮಾಡಿದರು.
ವಿಧಾನಸಭೆ ಅಧಿವೇಶನದಲ್ಲಿ ಕೈಗಾರಿಕಾ ಮಂತ್ರಿ ಮುರುಗೇಶ ನಿರಾಣಿ ಅವರ ಬೆವರಳಿಸಿದ ಅಭಯ ಪಾಟೀಲ್ ಕೈಗಾರಿಕೆಗಳನ್ನು ಬೆಳಗಾವಿಯಲ್ಲಿ ಸ್ಥಾಪಿಸಲು ಮುಂದಾಗುವ ಉದ್ಯಮಗಳಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಒತ್ತಾಯಿಸಿದರು.
ಬಿಯಾಂಡ್ ಬೆಂಗಳೂರು (ಬೆಂಗಳೂರಿನ ಆಚೆ) ಯೋಜನೆ ಬೆಳಗಾವಿಗೆ ಲಭ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅಭಯ ಪಾಟೀಲ್, ಬೆಳಗಾವಿ ಜಿಲ್ಲೆಗೆ ಇಂಡಸ್ಟ್ರಿಗಳು ಬರುತ್ತಲೇ ಇಲ್ಲ. ಬಿಯಾಂಡ್ ಬೆಂಗಳೂರು ಅಂತೀರಿ, ಬಿಯಾಂಡ್ ಹುಬ್ಬಳ್ಳಿ ಆಗುತ್ತಲೇ ಇಲ್ಲ. ಯೋಜನೆಗಳು ಬೆಂಗಳೂರಿನಿಂದ ಹುಬ್ಬಳ್ಳಿವರೆಗೆ ಬರುತ್ತವೆ. ಹುಬ್ಬಳ್ಳಿ ಬಿಟ್ಟು ಬೆಳಗಾವಿಯವರೆಗೆ ಬರುತ್ತಲೇ ಇಲ್ಲ. ಬಿಯಾಂಡ್ ಹುಬ್ಬಳ್ಳಿ ಮಾಡಬೇಕು ಅಂತ ವಿನಂತಿ ಮಾಡುತ್ತೇವೆ ಎಂದರು.
ಭಾಷಣ ಮಾಡಿದರೆ ಪ್ರಯೋಜನವಿಲ್ಲ
ಬೆಳಗಾವಿ ಕರ್ನಾಟಕದಲ್ಲೇ ಇದೆಯೋ ಇಲ್ಲವೊ ಎಂದು ಕೇಳುವ ಪರಸ್ಥಿತಿ ಸ್ಥಳೀಯ ಶಾಸಕರಿಗೆ ನಿರ್ಮಾಣವಾಗಿದೆ. ಹಿಂಡಾಲ್ಕೋ ಬಂದ ಬಳಿಕ ಕಳೆದ 30-35 ವರ್ಷದಿಂದ ಒಂದೂ ಬೃಹತ್ ಕೈಗಾರಿಕೆಗಳು ಬೆಳಗಾವಿ ಜಿಲ್ಲೆಗೆ ಬಂದಿಲ್ಲ.
ಬೆಳಗಾವಿ ಕರ್ನಾಟಕದಲ್ಲೇ ಇರಬೇಕು ಅಂತ ಇಲ್ಲಿ ಬಂದವರೆಲ್ಲ ಭಾಷಣ ಮಾಡಿ ಹೋದರೆ ಏನು ಪ್ರಯೋಜನ ? ನಮ್ಮಲ್ಲಿ ಇರುವ ಯುವಜನತೆಗೆ ಉದ್ಯೋಗ ನೀಡದಿದ್ದರೆ ಯಾವ ಪ್ರಸ್ತಾವನೆ ಪಾಸ್ ಮಾಡಿ ಏನು ಪ್ರಯೋಜನ ? ಎಂದು ಗುಡುಗಿದರು.
ಇಲ್ಲೇ ಸಮೀಪದಲ್ಲಿ ಮಹಾರಾಷ್ಟ್ರದಲ್ಲಿ ಕಾಗಲ್ ಇಂಡಸ್ಟ್ರಿಯಲ್ ಎಸ್ಟೇಟ್ ಇದೆ. ನಮ್ಮಲ್ಲಿನ ಯುವಜನರೇ ಅಲ್ಲಿ ಉದ್ಯೋಗಕ್ಕೆ ಹೋಗುವಂತಾಗಿದೆ. ನೀವು ಇಡೀ ರಾಜ್ಯಕ್ಕೆ ಕೈಗಾರಿಕಾ ನೀತಿ ಮಾಡುತ್ತೀರಿ.
ಬೆಳಗಾವಿಗೆ ವಿಶೇಷ ಕೈಗಾರಿಕಾ ನೀತಿ ಮಾಡಿ. ರಾಜ್ಯದಲ್ಲಿ ಕೊಡುವುದನ್ನೇ ಬೆಳಗಾವಿಗೆ ಕೊಟ್ಟರೆ ಏನೂ ಪ್ರಯೋಜನವಿಲ್ಲ. ಬರೀ ಇಲ್ಲಿ ಭಾಷಣ ಮಾಡಿ ಹೋದರೆ ಉಪಯೋಗವಿಲ್ಲ ಎಂದು ಅಬ್ಬರಿಸಿದರು.
ಬೃಹತ್ ಕೈಗಾರಿಕೆಗಳನ್ನು ಸರಕಾರ ಮಾಡುವುದಿಲ್ಲ ನಿಜ, ಆದರೆ ದೊಡ್ಡ ಕೈಗಾರಿಕೆಗಳು ಬರಲು ಪೂರಕ ವಾತಾವರಣ ನಿರ್ಮಾಣ ಮಾಡುವುದು ಸರಕಾರದ ಜವಾಬ್ದಾರಿಯಲ್ಲವೇ ?ಎಂದು ಪ್ರಶ್ನಿಸಿದರು.
ಅಭಯ ಪಾಟೀಲ್ ಪ್ರಶ್ನೆಗೆ ಉತ್ತರಿಸಿದ ಸಚಿವ ನಿರಾಣಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ 9.81 ಲಕ್ಷ ಕೋಟಿ ಹೂಡಿಕೆಗಳಿಗೆ ಒಡಂಬಡಿಕೆ ಆಗಿದೆ.ಇದರಿಂದ 6 ಲಕ್ಷ ಜನರಿಗೆ ಉದ್ಯೋಗ ಸಿಗಲಿದೆ.
ಬೆಂಗಳೂರಿಗೆ ಬರುವ ಕೈಗಾರಿಕೆಗಳಿಗೆ ಯಾವುದೇ ಸಬ್ಸಿಡಿ, ಇನ್ಸೆಂಟಿವ್ ಕೊಡುತ್ತಿಲ್ಲ. ಇದರಿಂದ ಶೇ. 80-90 ರಷ್ಟು ಕೈಗಾರಿಕೆಗಳು ಎರಡನೇ ದರ್ಜೆಯ ನಗರಗಳಲ್ಲಿ ಸ್ಥಾಪನೆಯಾಗಲಿದೆ.
ಬೆಳಗಾವಿಗೆ ಹೆಚ್ಚಿನ ಕೈಗಾರಿಕೆಗಳು ಬರಲು ಅಗತ್ಯ ಕ್ರಮ ವಹಿಸುತ್ತೇವೆ. ಗ್ಲೋಬಲ್ ಗ್ಲಾಸ್ ಇಂಡಸ್ಟ್ರಿ ಈಗಾಗಲೇ ಹೊನಗಾದಲ್ಲಿ ನಿರ್ಮಾಣವಾಗಿದೆ. ರಷ್ಯಾದ ಕಂಪನಿಯೊಂದು ಎಲೆಕ್ಟ್ರಿಕಲ್ ವಾಹನ ಉತ್ಪಾದನೆಗೆ ಆಸಕ್ತಿ ತಳೆದಿದ್ದು ಅದನ್ನು ಎರಡನೇ ದರ್ಜೆಯ ನಗರಗಳಲ್ಲಿ ಸ್ಥಾಪಿಸಲು ಮನವೊಲಿಸಲಾಗಿದೆ.
ಅದನ್ನು ಬೆಳಗಾವಿಗೆ ತರುತ್ತೇವೆ. ಇನ್ನೂ ಹೆಚ್ಚು ಭೂ ಸ್ವಾಧೀನ ಮಾಡಿಕೊಂಡು ಸ್ಟಾರ್ ಕೆಟಗರಿ ಇಂಡಸ್ಟ್ರಿಯಲ್ ಏರಿಯಾ ಬೆಳಗಾವಿಯಲ್ಲಿ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಇದಕ್ಕೆ ಒಪ್ಪದ ಅಭಯ ಪಾಟೀಲ್, ಇಡೀ ರಾಜ್ಯದ ಗಡಿಯ ಪರಿಸ್ಥಿತಿ ಬೇರೆ, ಬೆಳಗಾವಿ ಪರಿಸ್ಥಿತಿ ಬೇರೆ. 60 ವರ್ಷದಿಂದ ಬೆಳಗಾವಿ ಗಡಿ ಭಾಗದಲ್ಲಿ ಏನು ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಬೆಳಗಾವಿ ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡಿದರೆ ಇಲ್ಲಿ ಮಹಾರಾಷ್ಟ್ರದಿಂದಲೂ ಬರುತ್ತಾರೆ. ಇಡೀ ದೇಶದಿಂದಲೂ ಬರುತ್ತಾರೆ ಎಂದರು.
*ಬೆಳಗಾವಿ ಬಳಿ ಗೋಲ್ಡ್ ಕ್ಲಾಸ್ ಕೆಟಗರಿಯ ವಿಶೇಷ ಕೈಗಾರಿಕಾಭಿವೃದ್ಧಿ ಪ್ರದೇಶ ಸ್ಥಾಪನೆ-ಸಚಿವ ಮುರುಗೇಶ್ ನಿರಾಣಿ*
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ