
ಪ್ರಗತಿವಾಹಿನಿ ಸುದ್ದಿ: “ಬೆಂಗಳೂರು ಎಲ್ಲರಿಗೂ ಸೇರಿದ್ದು, ಹೀಗಾಗಿ ಬೆಂಗಳೂರಿನ ಹಿತ ಕಾಪಾಡಲು ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕಕ್ಕೆ ಎಲ್ಲಾ ನಾಯಕರ ಅಭಿಪ್ರಾಯ, ಸಲಹೆ ಪಡೆಯಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸಭೆಯಲ್ಲಿ 2024ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಮಂಡನೆ ಮಾಡಿದಾಗ, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಬಿಜೆಪಿ ಶಾಸಕರಾದ ಅಶ್ವತ್ಥ್ ನಾರಾಯಣ ಹಾಗೂ ಸುರೇಶ್ ಕುಮಾರ್ ಅವರು ಈ ವಿಧೇಯಕ ಮಂಡನೆಗೆ ವಿರೋಧ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, “ನಾನು ಹಳ್ಳಿಯಲ್ಲಿ ಹುಟ್ಟಿರಬಹುದು. ಆದರೆ 5ನೇ ವಯಸ್ಸಿನಿಂದ ಬೆಂಗಳೂರಿನಲ್ಲೇ ವಾಸಿಸುತ್ತಿದ್ದೇನೆ. ಇಲ್ಲಿನ ಪರಿಸ್ಥಿತಿ ಆರೀತಿದ್ದೇನೆ. ನಾನು ರಾಜಕೀಯವಾಗಿ ಬೇರೆಡೆ ಪ್ರತಿನಿಧಿಸುತ್ತಿದ್ದೇನೆ. ನನಗೂ ಬೆಂಗಳೂರಿನ ಬಗ್ಗೆ ಕಾಳಜಿ ಇದೆ. ಅಧಿಕಾರಿಗಳ ಸಮಿತಿ ಮಾಡಿದ್ದಾಗ ಅವರು ಲಂಡನ್ ಮಾದರಿ ಪ್ರಸ್ತಾಪ ಮಾಡಿದ್ದರು. ಆದರೆ ನಾನು ಅದನ್ನು ಒಪ್ಪಲಿಲ್ಲ. ಈಗಿರುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಿಸಲು ಆಗುತ್ತಿಲ್ಲ. ಇರುವ ವ್ಯವಸ್ಥೆಯನ್ನೇ ಸ್ವಲ್ಪ ಪ್ರಮಾಣದಲ್ಲಿ ಮಾರ್ಪಾಡು ಮಾಡಲು ಪ್ರಯತ್ನಿಸುತ್ತಿದ್ದೇವೆ” ಎಂದು ತಿಳಿಸಿದರು.
“ಈ ವಿಚಾರವಾಗಿ ವಿರೋಧ ಪಕ್ಷದ ನಾಯಕರುಗಳ ಅಭಿಪ್ರಾಯ ಪಡೆಯದೇ ತೀರ್ಮಾನ ಮಾಡುವಷ್ಟು ಮೂರ್ಖ ನಾನಲ್ಲ. ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಲ್ಲಾ ಶಾಸಕರ ಜತೆ ಮಾತನಾಡಿ, ಈ ವಿಚಾರ ಹೆಚ್ಚು ಚರ್ಚೆಯಾಗಲಿ, ಬೆಂಗಳೂರಿನ ಹಿತಕ್ಕೆ ಅಗತ್ಯವಾದ ಕ್ರಮ ಕೈಗೊಳ್ಳೋಣ. ಪ್ರತಿಪಕ್ಷದವರು ಬೇಡ ಎಂದರೆ ನಾವು ಮಾಡಲು ಆಗುವುದಿಲ್ಲ. ಬಿಜೆಪಿಯವರೂ ಹಿಂದೆ ಬೆಂಗಳೂರು ಜಿಲ್ಲಾ ಮಂತ್ರಿಯಾಗಿದ್ದರು. ನಾನು ಈ ವಿಧೇಯಕವನ್ನು ಸಾರಸಗಟಾಗಿ ಅಂಗೀಕಾರ ಮಾಡಿ ಎಂದು ಹೇಳುತ್ತಿಲ್ಲ. ಚರ್ಚೆಗಾಗಿಯೇ ಮಂಡನೆ ಮಾಡುತ್ತಿದ್ದೇನೆ. ಈ ವಿಧೇಯಕದ ಪ್ರತಿ ಸಾಲನ್ನೂ ಪರಾಮರ್ಶೆ ಮಾಡಿ, ಅಭಿಪ್ರಾಯ ಹೇಳಿ” ಎಂದು ಹೇಳಿದರು.
“ಬೆಂಗಳೂರು ಅನಿಯಂತ್ರಿತವಾಗಿ ಬೆಳೆಯುತ್ತಿದ್ದು, ಹೊರಗಿನಿಂದ ಹೆಚ್ಚಿನ ಜನ ಆಗಮಿಸುತ್ತಿದ್ದಾರೆ. ನಾನು ಈ ಹಿಂದೆ ನಗರಾಭಿವೃದ್ಧಿ ಸಚಿವನಾಗಿದ್ದಾಗ 70 ಲಕ್ಷ ಇದ್ದ ಬೆಂಗಳೂರಿನ ಜನಸಂಖ್ಯೆ ಇಂದು ಒಂದೂವರೆ ಕೋಟಿಯಷ್ಟಾಗಿದೆ. ಹೊರ ವರ್ತುಲ ರಸ್ತೆಗಳು ಈಗ ನಗರದ ಮಧ್ಯ ಭಾಗವಾಗಿವೆ. ವಾಹನಗಳ ಸಂಖ್ಯೆಯೇ ಒಂದು ಕೋಟಿ ಮೀರಿದೆ. ನೀರಿನ ವ್ಯವಸ್ಥೆ ಮಾಡಬೇಕು, ಕಸದ ಸಮಸ್ಯೆ ಸೇರಿದಂತೆ ಬೆಂಗಳೂರಿನಲ್ಲಿ ಬೇರೆ ಬೇರೆ ಸಮಸ್ಯೆಗಳಿವೆ. ಅಭಿವೃದ್ಧಿ ಹಾಗೂ ಆರ್ಥಿಕತೆ ಹಿತ ದೃಷ್ಟಿಯಿಂದ ಈ ವಿಧೇಯಕವನ್ನು ಮಂಡನೆ ಮಾಡುತ್ತಿದ್ದೇನೆ. ಇದು ಉತ್ತಮವಾಗಿದೆಯೋ, ಉತ್ತಮವಾಗಿಲ್ಲವೋ ಎಂಬುದನ್ನು ಚರ್ಚೆ ಮಾಡೋಣ. ಚರ್ಚೆ ಮಾಡದೇ ಏನೂ ಮಾಡುವುದಿಲ್ಲ” ಎಂದರು.
“ರಾಜ್ಯ ರಾಜಧಾನಿಯು ಕೇವಲ ಬೆಂಗಳೂರಿಗರಿಗೆ ಮಾತ್ರ ಸೀಮಿತವಲ್ಲ. ರಾಜ್ಯದ ಎಲ್ಲಾ ಭಾಗದವರಿಗೂ ಸೇರಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಬೆಂಗಳೂರಿಗೆ ಬಂದಾಗ ಒಂದು ಮಾತು ಹೇಳಿದ್ದರು. ಇಷ್ಟು ದಿನ ವಿಶ್ವದ ನಾಯಕರು ಮೊದಲು ದೆಹಲಿಗೆ ಬಂದು ನಂತರ ದೇಶದ ಬೇರೆ ನಗರಗಳಿಗೆ ಹೋಗುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ವಿಶ್ವ ನಾಯಕರು ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದಾರೆ ಎಂದಿದ್ದರು. ಬೆಂಗಳೂರಿನ ಮಹತ್ವದ ಬಗ್ಗೆ ನನಗೂ ಅರಿವಿದೆ. ಯಾರೂ ಗಾಬರಿಯಾಗುವ ಅಗತ್ಯವಿಲ್ಲ. ನೀವು ಇದನ್ನು ಯಾವ ರೀತಿ ಮಾಡಬೇಕು ಎಂದು ಹೇಳುತ್ತೀರೋ ಆ ರೀತಿ ಮಾಡೋಣ” ಎಂದರು.
ಆಗ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು, “ಇದೇ ತಿಂಗಳು 27ರಂದು ಸಭೆ ಕರೆದಿದ್ದೀರಲ್ಲಾ, ಅಂದು ಚರ್ಚೆ ಮಾಡೋಣ” ಎಂದು ಹೇಳಿದಾಗ, ಶಿವಕುಮಾರ್ ಅವರು “ಅಂದು ಈ ವಿಚಾರವನ್ನೂ ಚರ್ಚಿಸೋಣ” ಎಂದು ತಿಳಿಸಿದರು.
ಮತ್ತೆ ಮಾತನಾಡಿದ ಅಶೋಕ್ ಅವರು, “ಕೇವಲ ಬೆಂಗಳೂರು ಮಾತ್ರವಲ್ಲ, ಕನಕಪುರವೂ ಎಲ್ಲರಿಗೂ ಸೇರಬೇಕು” ಎಂದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಕನಕಪುರ ನಿಮಗೂ ಸೇರಬೇಕು. ಅಲ್ಲಿನ ಜನ ನಿಮಗೂ ಮತ ಹಾಕಿದ್ದಾರಲ್ಲ” ಎಂದು ಹಾಸ್ಯದಿಂದಲೇ ತಿರುಗೇಟು ಕೊಟ್ಟರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ