Kannada NewsKarnataka NewsLatestPolitics

*ಮೇಲ್ಮನೆಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ 2ನೇ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ವಿಧಾನಸಭೆಯಿಂದ ತಿದ್ದುಪಡಿಯೊಂದಿಗೆ ಅಂಗೀಕಾರ ರೂಪದಲ್ಲಿರುವ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2025ಕ್ಕೆ (2ನೇ ತಿದ್ದುಪಡಿ) ವಿಧಾನ ಪರಿಷತ್ತಿನಲ್ಲಿ ಗುರುವಾರ ಅಂಗೀಕಾರ ದೊರೆಯಿತು.

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್ ಅವರು ವಿಧಾನ ಪರಿಷತ್ತಿನಲ್ಲಿ 2024ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ (2ನೇ ತಿದ್ದುಪಡಿ) ಮಂಡಿಸಿ ಮಾತನಾಡಿದರು.

“ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ. ಆದರೆ ಮುಖ್ಯ ಕಾರ್ಯದರ್ಶಿಗಳನ್ನು ಈ ಸಮಿತಿಯಲ್ಲಿ ಸೇರಿಸಿರಲಿಲ್ಲ. ನಗರಾಭಿವೃದ್ಧಿ ಸಚಿವರ ಜೊತೆಗೆ ನಗರಾಭಿವೃದ್ಧಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳನ್ನು ಸೇರಿಸಲಾಗಿದೆ. ಕೆಲವು ರಾಜ್ಯ ಸಭಾ ಸದಸ್ಯರು ಹಾಗೂ ಸಂಸದರ ಪ್ರದೇಶವು ಪಾಲಿಕೆ ವ್ಯಾಪ್ತಿಯಲ್ಲಿ ಒಳಪಡುವ ಹಿನ್ನೆಲೆಯಲ್ಲಿ ಅವರುಗಳನ್ನು ಈ ಸಮಿತಿಯಲ್ಲಿ ಸೇರಿಸಲು ನಿರ್ಧರಿಸಿದ್ದೇವೆ. ಉದಾಹರಣೆಗೆ ಡಾ.ಸುಧಾಕರ್ ಅವರು ಚಿಕ್ಕಬಳ್ಳಾಪುರ ಸಂಸದರಾದರೂ ಯಲಹಂಕದ ಕೆಲವು ಭಾಗ ಅವರ ಕ್ಷೇತ್ರಕ್ಕೆ ಸೇರ್ಪಡೆಯಾಗುತ್ತದೆ. ಅದೇ ರೀತಿ ಬೆಂಗಳೂರಿನ ನಿವಾಸಿಯಾಗಿರುವ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ, ಶಾಸಕ ಶಿವಣ್ಣ ಅವರವನ್ನು ಈ ಸಮಿತಿಯಲ್ಲಿ ಸೇರಿಸಲು ಈ ತಿದ್ದುಪಡಿ ತರಲಾಗಿದೆ” ಎಂದು ತಿಳಿಸಿದರು.

Home add -Advt

ನಂತರ ಬಿಜೆಪಿ ಸದಸ್ಯರಾದ ಸಿ.ಟಿ. ರವಿ ಅವರು ಮಾತನಾಡಿ, “ನಾನು ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದರೂ, ಮತದಾನ ಮಾಡುವುದು ಚಿಕ್ಕಮಗಳೂರಿನಲ್ಲಿ. ನಾನು ಅಲ್ಲಿಯ ಜೊತೆ ಇಲ್ಲೂ ಮತದಾನ ಮಾಡುವ ಅಧಿಕಾರ ಇದೆಯೇ?” ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ಶಿವಕುಮಾರ್ ಅವರು, “ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪ್ರತಿನಿಧಿಗಳ ಮಂಡಳಿಯಾಗಿದ್ದು, ಇಲ್ಲಿ ಯಾವುದೇ ಚುನಾವಣೆ ನಡೆಯುವುದಿಲ್ಲ. ಸುಧಾಕರ್ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯ ಯಲಹಂಕ ಭಾಗದ ವಾರ್ಡ್ ನಲ್ಲಿ ಪಾಲಿಕೆ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿರುತ್ತಾರೆ. ಜೊತೆಗೆ ಯಲಹಂಕ ವಾರ್ಡಿನ ಜನಪ್ರತಿನಿಧಿಯಾಗಿ ಜಿಬಿಎ ಪ್ರಾಧಿಕಾರದ ಸದಸ್ಯರಾಗಿರುತ್ತಾರೆ. ಯಾವುದೇ ರಾಜ್ಯಸಭೆ, ವಿಧಾನ ಪರಿಷತ್ ಸದಸ್ಯರು ಬೆಂಗಳೂರಿನ ನಿವಾಸಿಯಾಗಿದ್ದು, ಇಲ್ಲಿ ಮತದಾನದ ಹಕ್ಕು ಹೊಂದಿದ್ದರೆ ಅವರಿಗೆ ಸದಸ್ಯತ್ವ ನೀಡಲಾಗುವುದು” ಎಂದು ವಿವರಿಸಿದರು.

Related Articles

Back to top button