Kannada NewsLatest

ಅಂಗಾಂಗ ದಾನ ಮಾಡಿ ನಾಲ್ಕು ಜೀವಗಳಿಗೆ ಬದುಕು ಕೊಟ್ಟ ಯುವಕ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಜಿಲ್ಲೆ ಖಾನಾಪುರದಲ್ಲಿ ನಡೆದಿದ್ದ ಅಪಘಾತದಲ್ಲಿ 26 ವರ್ಷದ ಯುವಕನ ಬ್ರೇನ್ ಡೆಡ್ ಆಗಿದ್ದು, ಆತನ ಅಂಗಾಂಗಗಳನ್ನು ಅಗತ್ಯವಿರುವ ನಾಲ್ವರಿಗೆ ಅಳವಡಿಸಲಾಗುತ್ತಿದೆ.

ಬ್ರೇನ್ ಡೆಡ್ ಆಗಿ ಬೆಳಗಾವಿಯ ಕೆ ಎಲ್ ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕ ಸಾವಿನಂಚಿನಲ್ಲಿದ್ದು, ಆತನ ಅಂಗಾಂಗ ದಾನಕ್ಕೆ ಕುಟುಂಬ ಸದಸ್ಯರು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಯುವಕನ ಹೃದಯವನ್ನು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ರೋಗಿಗೆ ಅಳವಡಿಸಲಾಗುತ್ತಿದೆ.

ಎರಡು ಕಿಡ್ನಿಗಳನ್ನು ಬೆಳಗಾವಿಯಿಂದ ಧಾರವಾಡದ ಎಸ್ ಡಿಎಂ ಆಸ್ಪತ್ರೆಗೆ ಕೊಂಡೊಯ್ಯಲಾಗುತ್ತಿದ್ದು, ಅಲ್ಲಿರುವ ಇಬ್ಬರು ರೋಗಿಗಳಿಗೆ ಅಳವಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಬೆಳಗಾವಿಯಿಂದ ಧಾರವಾಡದ ಎಸ್ ಡಿಎಂ ಆಸ್ಪತ್ರೆವರೆಗೆ ಝೀರೋ ಟ್ರಾಫಿಕ್ ಗಾಗಿ ಗ್ರೀನ್ ಕಾರಿಡಾರ್ ನಿರ್ಮಿಸಲಾಗಿದೆ.

ಇನ್ನು ಯುವಕನ ಲಿವರ್ ನ್ನು ಬೆಳಗಾವಿ ವಿಮಾನನಿಲ್ದಾಣದ ಮೂಲಕ ಹುಬ್ಬಳ್ಳಿಗೆ ಸುರಕ್ಷಿತ ವಿಧಾನದಲ್ಲಿ ಕೊಂಡೊಯ್ದು ಬಳಿಕ ಅಲ್ಲಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ತೆದುಕೊಂಡು ಹೋಗಿ, ಅಲ್ಲಿ ದಾಖಲಾಗಿರುವ ರೋಗಿಗೆ ಅಳವಡಿಸಲಾಗುತ್ತಿದೆ.

ಅಪಘಾತಕ್ಕೀಡಾಗಿದ್ದ:

ಜು.18ರಂದು ಈ ಯುವಕ ಇನ್ನೊಬ್ಬ ಯುವಕನ ಬೈಕ್ ನಲ್ಲಿ ಕುಳಿತು ಖಾನಾಪುರ ತಾಲೂಕಿನ ಅಮಟೆ ಕ್ರಾಸ್ ಬಳಿಯ ಧಾಬಾ ಒಂದರಿಂದ ಗೋವಾ ರಸ್ತೆ ಮೂಲಕ ಜಾಂಬೋಟಿಗೆ ಸಾಗುತ್ತಿದ್ದ ವೇಳೆ ಅಮಟೆ ಗ್ರಾಮದ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಹಾಸ್ಟೆಲ್ ಒಂದರ ಬಳಿ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡಿದ್ದ.

ತಲೆ, ಹೊಟ್ಟೆ, ಕೈಗಾಲುಗಳಿಗೆ ತೀವ್ರ ಏಟು ತಗುಲಿದ್ದು ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಆತನ ಅಂಗಾಂಗ ದಾನಕ್ಕೆ ಕುಟುಂಬದವರು ನಿರ್ಧಾರ ಮಾಡಿದ್ದರು.

ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ; ಪ್ರಯಾಣಿಕ ಅರೆಸ್ಟ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button