Kannada NewsKarnataka News

ಬೆಳಗಾವಿಗೆ ಬರುವ ಅಮಿತ್ ಶಾ ಗೆ ಹಸಿರು ಶಾಲು ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ:- ಕೇಂದ್ರ ಸರಕಾರ ಈ ಜಾರಿಗೆ ತಂದಿರುವ ಭೂ ಸುಧಾರಣೆ ಕಾಯ್ದೆ, ಎ.ಪಿ.ಎಂ.ಸಿ ಕಾಯ್ದೆ, ವಿದ್ಯುತ್ ಕಾಯ್ದೆ ಮತ್ತು ಅಗತ್ಯ ವಸ್ತುಗಳ ಕಾಯ್ದೆ ರದ್ದುಗೊಳಿಸಲು ಆಗ್ರಹಿಸಿ ಹಾಗೂ ನ್ಯಾಯಮೂರ್ತಿ ಡಾ|| ಸ್ವಾಮಿನಾಥನ ವರದಿ ಜಾರಿಗೆ ತರುವಂತೆ ಆಗ್ರಹಿಸಿ ಮತ್ತು ದೆಹಲಿಯಲ್ಲಿ ರೈತರು ನಡೆಸುತ್ತಿದ್ದ ಆಹೋರಾತ್ರಿ ಧರಣಿ ಬೆಂಬಲಿಸಿ ಇಂದು ಸಂಜೆ ಘಟಪ್ರಭಾ ಮೃತ್ಯುಂಜಯ ಸರ್ಕಲ್‌ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆ ನಿರತರನ್ನು ಉದ್ದೇಶಿಸಿ ರೈತ ಸಂಘದ ರಾಜ್ಯ ಮುಖಂಡ ಚೂನಪ್ಪಾ ಪೂಜೇರಿ ಮಾತನಾಡಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಈ ಕಾಯ್ದೆಗಳು ರೈತರಿಗೆ ಮರಣ ಶಾಸನವಾಗಿದೆ. ದಿ.೧೭ರಂದು ಬೆಳಗಾವಿಗೆ ಕೇಂದ್ರ ಗೃಹಮಂತ್ರಿ ಅಮಿತ ಶಾ ಬರುತ್ತಿದ್ದು ಆ ದಿನ ಬಾಗಲಕೋಟೆ, ವಿಜಯಪೂರ, ಧಾರವಾಡ, ಬೆಳಗಾವಿ ಜಿಲ್ಲೆಯ ಸಾವಿರಾರು ರೈತರು ಸೇರಿ ಪ್ರತಿಭಟನೆ ಮಾಡಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಕಾಯ್ದೆಯನ್ನು ರದ್ದುಗೊಳಿಸಲು ಆಗ್ರಹಿಸುತ್ತೇವೆ ಎಂದು ಹೇಳಿದರು.

ರೈತರ ಪ್ರತಿಭಟನೆಯಲ್ಲಿ ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠದ ಮಲ್ಲಿಕಾರ್ಜುನ ಶ್ರೀಗಳು ಭಾಗವಹಿಸಿ ಸರಕಾರದ ಕಾಯ್ದೆಗಳು ರೈತರಿಗೆ ಉಪಯೋಗವಾಗಬೇಕೆ ವಿನಃ ಅಪಾಯವನ್ನು ತರಬಾರದು. ಇಂದು ರೈತ ವಕ್ಕಿದರೆ ಜಾಗವೆಲ್ಲ ನಗುತ್ತದೆ ಎಂದು ಹೇಳುತ್ತಾರೆ ಆದ್ದರಿಂದ ಎಲ್ಲಾ ಸರಕಾರವು ರೈತ ಏಳ್ಗಿಯನ್ನು ಬಯಸುತ್ತಾ ಅವರಿಗೆ ಸಹಕಾರಿಯಾಗಿ ನಿಲ್ಲಬೇಕು ಎಂದು ಹೇಳಿದರು.

ರೈತರು ನೀಡಿದ ಮನವಿಯನ್ನು ದುಪದಾಳ ಗ್ರಾಮದ ಲೆಕ್ಕಾಧಿಕಾರಿ ಎಮ್.ಎಸ್.ಗಡಕರಿ ಹಾಗೂ ಘಟಪ್ರಭಾ ಪಿಎಸ್‌ಐ ಹಾಲಪ್ಪಾ ಬಾಲದಂಡಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ರೈತ ನಾಯಕರಾದ ರಾಘವೇಂದ್ರ ನಾಯಿಕ್, ಗಂಗಾಧರ ಮೇಟಿ, ಆಶೋಕ ಯಮಕನಮರಡಿ, ಗೂಳಪ್ಪಾ ಬಾವಿಕಟ್ಟಿ, ಜಗದೀಶ ದೇವರಡ್ಡಿ, ಕಿಶೋರ ಮಿಠಾರಿ, ಮಂಜುನಾಥ ಪೂಜಾರಿ , ಬಸವರಾಜ ಪಾಶ್ಚಾಪೂರೆ, ಗೋಪಾಲ ಕೊಕ್ಕನೂರ, ಭರಮಪ್ಪಾ ಖೇಮಲಾಪೂರೆ ಹಾಗೂ ರೈತ ಮಹಿಳೆಯರು ಸೇರಿ ನೂರಾರು ರೈತ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಯಿಂದ ೧ ಗಂಟೆ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button