Politics

*ಗೃಹಲಕ್ಷ್ಮಿ ಹಣದಲ್ಲಿ ಬೋರ್‌ವೆಲ್ ಕೊರೆಸಿ ಬದುಕು ಕಟ್ಟಿಕೊಂಡ ಅತ್ತೆ-ಸೊಸೆ: ಯೋಜನೆಯ ಉದ್ದೇಶ ಯಶಸ್ವಿಯಾದ ಸಂತೃಪ್ತಿ: ಸಂತಸ ಹಂಚಿಕೊಂಡ ಸಿಎಂ ಹಾಗೂ ಸಚಿವೆ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ನಮ್ಮ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಮೂಲಕ ಪಡೆದ ಹಣದಲ್ಲಿ ಬೋರ್‌ವೆಲ್ ಕೊರೆಸಿ ಬದುಕು ಕಟ್ಟಿಕೊಂಡ ಅತ್ತೆ – ಸೊಸೆಯ ಮಾತುಗಳು ಕೇಳಿ ಖುಷಿಯಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಸ ಹಂಚಿಕೊಂಡಿದ್ದಾರೆ.


ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಮಾಲದಾರ ಓಣಿಯ ಅತ್ತೆ ಮಾಬುಬೀ ಹಾಗೂ ಸೊಸೆ ರೋಷನ್ ಬೇಗಂ ಪ್ರತಿ ತಿಂಗಳು ತಮಗೆ ಬಂದ ಗೃಹಲಕ್ಷ್ಮಿ ಹಣ ಕೂಡಿಟ್ಟು ಕೃಷಿ ಭೂಮಿಗೆ ಬೋರ್‌ವೆಲ್ ಕೊರೆಸಿ, ಸಮೃದ್ಧ ನೀರು ಪಡೆದಿದ್ದಾರೆ. ನಾಡಿನ ಬಡಕುಟುಂಬಗಳಿಗೆ ಆರ್ಥಿಕ ಶಕ್ತಿ ತುಂಬಿ, ಅವರನ್ನು ಸ್ವಾವಲಂಬಿಗಳನ್ನಾಗಿಸುವ ಈ ಯೋಜನೆಯ ಉದ್ದೇಶ ಯಶಸ್ವಿಯಾಗಿ ಈಡೇರುತ್ತಿರುವುದು ಯೋಜನೆಯನ್ನು ಜಾರಿಗೆ ಕೊಟ್ಟ ನನ್ನಲ್ಲಿ ಸಂತೃಪ್ತಭಾವ ಮೂಡಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.


ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಅತ್ತೆ – ಸೊಸೆಯ ನಡುವೆ ಜಗಳ ಆರಂಭವಾಗುತ್ತದೆ, ಸಂಸಾರಗಳು ಒಡೆಯುತ್ತವೆ ಎಂದು ಟೀಕಿಸಿದ ಜನರಿಗೆ ಬಾರಿಸಿದ ತಪರಾಕಿ ಇದು. ಬೆಳಕಿಗೆ ಬಾರದ ಇಂತಹ ಇನ್ನೂ ಸಾವಿರಾರು ಯಶೋಗಾಥೆಗಳಿವೆ, ಗೃಹಲಕ್ಷ್ಮಿ ನಾಡಿನ ತಾಯಂದಿರ ಬಾಳಿಗೆ ಅಕ್ಷರಶಃ ಭಾಗ್ಯಲಕ್ಷ್ಮಿಯಾಗಿದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದಿದ್ದಾರೆ.

ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕೂಡ ಸಂತಸ ಹಂಚಿಕೊಂಡಿದ್ದಾರೆ.

“ಗೃಹಲಕ್ಷ್ಮಿ ಹಣದಿಂದ ಬೊರವೆಲ್” ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ ಅನುಷ್ಠಾನಗೊಂಡಾಗಿನಿಂದ ರಾಜ್ಯದಲ್ಲಿ ತನ್ನದೇ ಆದ ಸದ್ದನ್ನು ಮಾಡುತ್ತಿದ್ದು, ಲಕ್ಷಾಂತರ ಕೆಲಸ ಕಾರ್ಯಗಳಿಗೆ ಗೃಹಲಕ್ಷ್ಮಿಯ ಹಣ ವರದಾನವಾಗಿದೆ ಎಂದಿದ್ದಾರೆ.

ಯೋಜನೆಯಡಿ ಪ್ರತಿ ತಿಂಗಳು ನೀಡುತ್ತಿರುವ 2,000/- ರೂ, ಹಣ ಕೂಡಿಟ್ಟು ಗದಗ ಜಿಲ್ಲೆಯ ಗಜೇಂದ್ರಗಡ್ ಪಟ್ಟಣದ ಮಾಲದಾರ ಓಣಿಯ ಅತ್ತೆ ಹಾಗೂ ಸೊಸೆ ಬೊರವೆಲ್ ಹಾಕಿಸಿದ್ದು, ಬೊರವೆಲ್ ನಿಂದ ಒಳ್ಳೆಯ ನೀರನ್ನು ಪಡೆದಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಅತ್ತೆ ಮಾಬುಬೀ ಹಾಗೂ ಸೊಸೆ ರೋಷನ್ ಬೇಗಂ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಬೊರವೆಲ್ ಹಾಕಿಸಲು ಒಟ್ಟು 60 ಸಾವಿರ ರೂ,ಗಳು ಖರ್ಚಾಗಿದ್ದು, ಗೃಹಲಕ್ಷ್ಮಿ ಯೋಜನೆಯ 44 ಸಾವಿರ ಬಳಕೆ ಮಾಡಲಾಗಿದೆ, ಇನ್ನುಳಿದ ಹಣ ಮಗ ನೀಡಿರುವುದಾಗಿ ತಿಳಿದು ಬಂದಿದೆ ಎಂದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button