
ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಯ ದುರ್ಬಳಕೆ ತಡೆಯಲು ಸರ್ಕಾರ ‘ಒನ್-ಟೈಮ್ ಬಯೋಮೆಟ್ರಿಕ್’ ಕಡ್ಡಾಯಗೊಳಿಸಿದೆ.
ಫಲಾನುಭವಿಗಳು ಬೆಂಗಳೂರು/ಕರ್ನಾಟಕ ಒನ್ ಕೇಂದ್ರಗಳಲ್ಲಿ ಮೊಬೈಲ್ ಸಂಖ್ಯೆ ಹಾಗೂ ಬಯೋಮೆಟ್ರಿಕ್ ನೀಡಿ ಖಾತೆ ನವೀಕರಿಸಬೇಕು. ಆದಾಯ ತೆರಿಗೆ ಪಾವತಿದಾರರು ಮತ್ತು ಮೃತಪಟ್ಟವರ ಹೆಸರಿನಲ್ಲಿ ಹಣ ಪಡೆಯುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ನವೀಕರಿಸದಿದ್ದರೆ ಹಣ ಜಮೆಯಾಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಪ್ರಸ್ತುತ ಯೋಜನೆಯ ಲಾಭ ಪಡೆಯುತ್ತಿರುವ ಎಲ್ಲ ಫಲಾನುಭವಿಗಳು ತಮ್ಮ ಖಾತೆಯನ್ನು ಬಯೋಮೆಟ್ರಿಕ್ ಹಾಗೂ ಮೊಬೈಲ್ ಸಂಖ್ಯೆಯೊಂದಿಗೆ ಮರು ನೋಂದಣಿ (ನವೀಕರಣ) ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಒಂದು ವೇಳೆ ನವೀಕರಿಸದಿದ್ದರೆ ಬ್ಯಾಂಕ್ ಖಾತೆಗೆ ಹಣ ಜಮೆಯಾಗುವುದಿಲ್ಲ. ಈ ಕುರಿತು ರಾಜ್ಯ ಸರ್ಕಾರ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಿದೆ.
ಗೃಹಲಕ್ಷ್ಮಿ ಯೋಜನೆಯ ಲಕ್ಷಾಂತರ ಮಂದಿ ಫಲಾನುಭವಿಗಳು ನಿಧನರಾಗಿದ್ದಾರೆ. ಎರಡು ಲಕ್ಷ ಮಂದಿ ಮೃತಪಟ್ಟಿದ್ದರೂ ಫಲಾನುಭವಿಗಳಾಗಿದ್ದಾರೆ. 50 ಸಾವಿರಕ್ಕೂ ಹೆಚ್ಚು ಆದಾಯ ತೆರಿಗೆ ಪಾವತಿದಾರರು ಯೋಜನೆಯ ಲಾಭ ಪಡೆಯುತ್ತಿದ್ದರು. ಕೆಲ ಫಲಾನುಭವಿಗಳ ಖಾತೆಗೆ ಸಂದಾಯವಾದ ಗೃಹಲಕ್ಷ್ಮಿ ಹಣ ಈ ಮೊದಲು ಮಾಡಿರುವ ಸಾಲಕ್ಕೆ ಜಮೆಯಾಗುತ್ತಿದೆ. ಕೆಲವರ ಮೊಬೈಲ್ ಸಂಖ್ಯೆ ಕೂಡ ಬದಲಾಗಿದೆ. ಹೀಗಾಗಿ, ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಯ ಲಾಭ ಸಿಗಲಿ ಎಂಬ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆಯ ಖಾತೆಗಳನ್ನು ಮತ್ತೊಮ್ಮೆ ನವೀಕರಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನಿಧನರಾದವರೂ ಸದ್ದಿಲ್ಲದೆ ಹಣ ಪಡೆಯುತ್ತಿದ್ದರು. ಹೀಗಾಗಿ, ಗೃಹಲಕ್ಷಿ ಫಲಾನುಭವಿಗಳು ಬದುಕಿರುವ ಬಗ್ಗೆ ಜೀವಿತ ಪ್ರಮಾಣ ಪತ್ರ ಸಲ್ಲಿಸಲು ನಿರ್ಧರಿಸಲಾಗಿತ್ತು. ಆದರೆ, ಇದಕ್ಕೆ ತೀವ್ರವಾದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿಅದಕ್ಕೆ ಪರ್ಯಾಯವಾಗಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿ ಮಾಡಲಾಗಿದೆ.
ಫಲಾನುಭವಿಗಳು ತಮ್ಮ ಹತ್ತಿರದ ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ, ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಹಾಗೂ ಬಯೋಮೆಟ್ರಿಕ್ ನೀಡುವ ಮೂಲಕ ತಮ್ಮ ಖಾತೆಯನ್ನು ಮರು-ನೋಂದಣಿ ಮಾಡಿಸಿಕೊಳ್ಳಬಹುದು ಎಂದರು.
ಫಲಾನುಭವಿಗಳು ಎಪಿಎಲ್ ಕಾರ್ಡ್ ಅಥವಾ ಬಿಪಿಎಲ್ ಕಾರ್ಡ್ ಹೊಂದಿರಬಹುದು. ಆದರೆ, ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಇಲಾಖೆ ಈಗಾಗಲೇ ಸುಮಾರು 2 ಲಕ್ಷಕ್ಕೂ ಅಧಿಕ ಕಾರ್ಡ್‌ಗಳನ್ನು ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾವಣೆ ಮಾಡಿದೆ. ಇವರಲ್ಲಿಬಹುತೇಕರು ಆದಾಯ ತೆರಿಗೆ ಪಾವತಿಸುತ್ತಿದ್ದುದರಿಂದ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಇವರಿಗೆ ಗೃಹಲಕ್ಷ್ಮಿ ಯೋಜನೆ ರದ್ದಾಗಲಿದೆ.
ಸದ್ಯಕ್ಕೆ ನಾವು ಯಾವುದೇ ಫಲಾನುಭವಿಯ ಹೆಸರನ್ನು ನೇರವಾಗಿ ಡಿಲೀಟ್ ಮಾಡುತ್ತಿಲ್ಲ. ಇದು ಕೇವಲ ‘ಒನ್ ಟೈಮ್ ಬಯೋಮೆಟ್ರಿಕ್’ ಪದ್ಧತಿ. ಮಹಿಳೆಯರು ಕೇವಲ ಒಂದು ಬಾರಿ ಬಯೋಮೆಟ್ರಿಕ್ ನೀಡಿದರೆ ಸಾಕು, ಹಣ ಎಂದಿನಂತೆ ಖಾತೆಗೆ ಜಮೆಯಾಗುತ್ತದೆ. ನವೀಕರಣ ಮಾಡದ ಖಾತೆಗಳು ಮಾತ್ರ ಸ್ವಯಂಚಾಲಿತವಾಗಿ ರದ್ದಾಗುತ್ತವೆ ಎಂದು ತಿಳಿಸಿದ್ದಾರೆ.



