Karnataka NewsLatestPolitics

*ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದ ಮಹಿಳೆ: ಸ್ಥಳದಲ್ಲೇ ಸುಳ್ಳು ಬಹಿರಂಗಪಡಿಸಿದ ಡಿಸಿಎಂ*

ಪ್ರಗತಿವಾಹಿನಿ ಸುದ್ದಿ: ಡಿಸಿಎಂ ಡಿ.ಕೆ.ಶಿವಕುಮಾರ್ ಇಂದು ಬೆಂಗಳೂರು ನಡಿಗೆ ಹಾಗೂ ಸಾರ್ವಜನಿಕರ ಸಂವಾದ ಕಾರ್ಯಕ್ರಮದಲ್ಲಿ ಜನರ ಸಮಸ್ಯೆ, ಸಂಕಷ್ಟ ಆಲಿಸಿದರು. ಈ ವೇಳೆ ಮಹಿಳೆಯೊಬ್ಬರು ತಮಗೆ ಆರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಆರೋಪಿಸಿದ ಘಟನೆ ನಡೆಯಿತು.

ನನಗೆ ಆರು ತಿಂಗಳಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ. ಬೇಕಿದ್ದರೆ ನನ್ನ ಮೊಬೈಲ್ ಇಲ್ಲೇ ಇದೆ, ನೋಡಿ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ ಅವರು, ಆರು ತಿಂಗಳಿನಷ್ಟು ಬಾಕಿ ಇಟ್ಟಿಲ್ಲ. ಸಾರ್ವಜನಿಕರ ಮುಂದೆ ಸುಮ್ಮನೆ ಆರು ತಿಂಗಳಿಂದ ಬಂದಿಲ್ಲ ಎಂದರೆ ಹೇಗೆ? ಇಲ್ಲಿ ನಮ್ಮ ಅಧಿಕಾರಿಗಳ ತಪ್ಪಿರಬೇಕು ಅಥವಾ ಇವರ ಆರೋಪ ತಪ್ಪಾಗಿರಬೇಕು. ಹೀಗಾಗಿ ಇಲ್ಲೇ ಇದನ್ನು ಪರಿಶೀಲಿಸುತ್ತೇನೆ ಎಂದರು.

ತಕ್ಷಣ ತಮ್ಮ ಆಪ್ತ ಕಾರ್ಯದರ್ಶಿ ಡಾ. ರಾಜೇಂದ್ರ ಪ್ರಸಾದ್ ಅವರ ಮೂಲಕ ಮಹಿಳಾ ಮತ್ತು ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಇಲ್ಲಿ ಮಹಿಳೆಯೊಬ್ಬರು ಆರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಈ ಪ್ರಕರಣದಲ್ಲಿ ಏನಾಗಿದೆ ಎಂದು ವಿಚಾರಿಸಿದರು. ದೂರವಾಣಿ ಕರೆಯಲ್ಲಿ ಅಧಿಕಾರಿಯು ಜುಲೈ ತಿಂಗಳ ಗೃಹಲಕ್ಷ್ಮಿ ಹಣ ಈ ತಿಂಗಳು ಸಂದಾಯವಾಗಿದೆ. ಈ ಮಹಿಳೆಯ ವಿಚಾರದಲ್ಲಿ ಏನಾದರೂ ಸಮಸ್ಯೆಯಾಗಿದ್ದರೆ ಪರಿಶೀಲಿಸಿ, ಅದನ್ನು ಬಗೆಹರಿಸುವೆ ಎಂದು ತಿಳಿಸಿದರು. ದೂರು ನೀಡಿದ ಮಹಿಳೆಯ ಮೊಬೈಲ್ ಫೋನ್ ಪರಿಶೀಲಿಸಿದ ರಾಜೇಂದ್ರ ಪ್ರಸಾದ್ ಅವರು, ಅಕ್ಟೋಬರ್ 3 ರಂದು ಜುಲೈ ತಿಂಗಳ ಗೃಹ ಲಕ್ಷ್ಮಿ ಹಣ ಪಾವತಿಯಾಗಿರುವ ಸಂದೇಶವನ್ನು ಡಿಸಿಎಂ ಅವರಿಗೆ ತೋರಿಸಿದರು. ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಗೃಹ ಲಕ್ಷ್ಮಿ ಹಣ ಪಾವತಿಯಾಗಿರುವ ಮೆಸೇಜ್ ಅನ್ನು ಸಾರ್ವಜನಿಕರ ಸಮ್ಮುಖದಲ್ಲಿ ಓದಿದರು.

Home add -Advt

ಗೃಹಲಕ್ಷ್ಮಿ ಹಣದ ಪಾವತಿಯಾಗಿಲ್ಲ ಎಂದು ಈ ಮಹಿಳೆ ಮಾಡಿರುವ ಆರೋಪ ಸುಳ್ಳು. ಜುಲೈವವರೆಗಿನ ಹಣ ಸಂದಾಯವಾಗಿದ್ದು, ಆಗಸ್ಟ್ ತಿಂಗಳ ಹಣ ಸಂದಾಯ ಪ್ರಕ್ರಿಯೆಯಲ್ಲಿದೆ. ಈ ಮಹಿಳೆ ಆರೋಪ ಮಾಡಿದನ್ನು ನೋಡಿ ಆ ಅಧಿಕಾರಿಯನ್ನು ಸಸ್ಪೆಂಡ್ ಮಾಡಬೇಕು ಎಂದು ತೀರ್ಮಾನಿಸಿದ್ದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೂ ತರಾಟೆಗೆ ತೆಗೆದುಕೊಳ್ಳಬೇಕು ಎಂದುಕೊಂಡಿದ್ದೆ, ಸದ್ಯ ಅವರು ಫೋನ್ ಕಾಲ್ ತೆಗೆದುಕೊಳ್ಳಲಿಲ್ಲ. ಮಹಿಳೆ ತಪ್ಪು ಆರೋಪ ಮಾಡುತ್ತಿದ್ದಾರೆ ಎಂದರು.


Related Articles

Back to top button