Kannada NewsKarnataka NewsLatestPolitics

*ಚಾರಿತ್ರಿಕವಾದ ಗೃಹಲಕ್ಷ್ಮಿ ಯೋಜನೆ ಉದ್ಘಾಟನಾ ಸಮಾವೇಶ; ಸಾಗರೋಪಾದಿಯಲ್ಲಿ ಹರಿದು ಬಂದ ನಾರಿಯರು; ಐತಿಹಾಸಿಕ ಸಂದರ್ಭದ ಹೈಲೈಟ್ಸ್…*

ಪ್ರಗತಿವಾಹಿನಿ ಸುದ್ದಿ; ಮೈಸೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ನಾಲ್ಕನೇ ಗ್ಯಾರಂಟಿ ಯೋಜನೆ ಗೃಹಲಕ್ಷ್ಮೀ ಯೋಜನೆಗೆ ಸಂಸ್ಕೃತಿಕ ನಗರಿ ಮೈಸೂರಿನಲ್ಲಿ ಅದ್ದೂರಿ ಚಾಲನೆ ದೊರೆತಿದೆ. ನಿರೀಕ್ಷೆಗಿಂತಲೂ ಹೆಚ್ಚು ಜನರು ಕಾರ್ಯಕ್ರಮಕ್ಕೆ ಹರಿದು ಬಂದಿದ್ದು, ಅರಮನೆ ನಗರಿ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಯಿತು.

ಕೇವಲ ಕರ್ನಾಟಕದಿಂದ ಮಾತ್ರವಲ್ಲದೆ ದಕ್ಷಿಣ ಭಾರತದ ತಮಿಳುನಾಡು, ತೆಲಂಗಾಣ, ಆಂಧ್ರ ಮತ್ತು ಕೇರಳದಿಂದಲೂ ಸಾವಿರಾರು ನಾರಿಯರು, ಗೃಹಿಣಿಯರು “ಗೃಹಲಕ್ಷ್ಮಿ” ಉದ್ಘಾಟನೆಗೆ ಸಾಕ್ಷಿಯಾದರು.

ಶ್ರಮಿಕ ವರ್ಗದ, ದುಡಿಯುವ ವರ್ಗಗಳ ಮಹಿಳೆಯರು, ಮಹಿಳಾ ಕಾರ್ಮಿಕರು ಮಹಿಳಾ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಸ್ವಯಂಸ್ಫೂರ್ತಿಯಿಂದ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದು ವಿಶೇಷ.

ಕಾಲೇಜು ವಿದ್ಯಾರ್ಥಿನಿಯರು ಕೂಡ ಅಪಾರ ಸಂಖ್ಯೆಯಲ್ಲಿ ಬಂದು ತಮ್ಮ ವಿದ್ಯಾಭ್ಯಾಸಕ್ಕೆ ಬಹಳ ದೊಡ್ಡ ನೆರವಾದ ಶಕ್ತಿ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆ ಕೊಟ್ಟಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾರ್ಗದುದ್ದಕ್ಕೂ ಅಭಿನಂದನೆ, ಧನ್ಯವಾದ ಹೇಳುವ ಬ್ಯಾನರ್ ಗಳನ್ನು ಹಿಡಿದು ಸಮಾವೇಶಕ್ಕೆ ಸಾಕ್ಷಿಯಾದರು.

ಬೆಳಗ್ಗೆ 10 ಗಂಟೆ ವೇಳೆಗೇ ಮಹಾರಾಜ ಗ್ರೌಂಡ್ ನಲ್ಲಿ ಮಹಿಳಾ ಜನಸ್ತೋಮ ತುಂಬಿ ತುಳುಕುತ್ತಿತ್ತು. ಪಿಂಕ್ ಬಣ್ಣದ ಧಿರಿಸಿನಲ್ಲಿ ಸಮಾವೇಶದ ಮೈದಾನದಲ್ಲಿ ಸಾವಿರಾರು ಸಂಖ್ಯೆಯ ವಿದ್ಯಾರ್ಥಿನಿಯರು ಮತ್ತು ಗೃಹಿಣಿಯರು ಕಂಗೊಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮತ್ತು ಮಹಿಳಾ ಕಾರ್ಯಕರ್ತರ ಪಡೆ ಪಿಂಕ್ ಧಿರಿಸಿನಲ್ಲಿತ್ತು. ವೇದಿಕೆಯಲ್ಲಿದ್ದ ಕುರ್ಚಿಗಳಿಗೆ ಪಿಂಕ್ ಹೊದಿಕೆ, ಐಡಿ ಕಾರ್ಡ್, ಟ್ಯಾಗ್ ಗಳು, ನೀರಿನ ಬಾಟಲ್ ಕೂಡ ಪಿಂಕ್ ಬಣ್ಣದ್ದಾಗಿತ್ತು. ಇಡೀ ವೇದಿಕೆ ಪಿಂಕ್ ಬಣ್ಣದಲ್ಲಿ ಕಂಗೊಳಿಸಿದ್ದು ವಿಶೇಷವಾಗಿತ್ತು.

ಸರ್ಕಾರದ ಕಾರ್ಯಕ್ರಮ ಮತ್ತು ಯೋಜನೆಗಳ ಚರಿತ್ರೆಯಲ್ಲಿ ಗೃಹಲಕ್ಷ್ಮೀ ಯೋಜನೆ ಏಕ ಕಾಲಕ್ಕೆ, ಪ್ರತೀ ತಿಂಗಳು ಒಂದೂವರೆ ಕೋಟಿಗೂ ಹೆಚ್ಚು ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತರನ್ನಾಗಿಸುವ ಸರ್ಕಾರಿ ಚಳವಳಿಯ ಚೈತನ್ಯ ಪಡೆದುಕೊಂಡ ಕಾರ್ಯಕ್ರಮವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button