*ಯಾರೊಬ್ಬರೂ ಗೃಹಲಕ್ಷ್ಮೀಯಿಂದ ವಂಚಿತರಾಗಬಾರದೆಂದು ಅದಾಲತ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*


ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಗೃಹಲಕ್ಷ್ಮೀ ಯೋಜನೆಯಲ್ಲಿನ ತಾಂತ್ರಿಕ ದೋಷದಿಂದಾಗಿ ಉಂಟಾಗಿರುವ ಸಮಸ್ಯೆಗಳನ್ನು ನಿವಾರಿಸಿ ಸ್ಥಳದಲ್ಲಿಯೇ ಪರಿಹಾರ ನೀಡುವ ನಿಟ್ಟಿನಲ್ಲಿ ಇಂದಿನಿಂದ ವಿಶೇಷ ಶಿಬಿರ ಆಯೋಜಿಸಲಾಗಿದೆ.
ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಈ ವಿಶೇಷ ಶಿಬಿರ ಆಯೋಜಿಸಲಾಗಿದೆ. ಗೃಹಲಕ್ಷ್ಮೀ ವಿಶೇಷ ಶಿಬಿರಕ್ಕೆ ಬೆಳಗಾವಿ ಜಿಲ್ಲೆಯ ಹಲಗಾ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಗೃಹಲಕ್ಷ್ಮೀ ಯೋಜನೆಯಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಫಲಾನುಭವಿಗಳು ನಿಮ್ಮ ನಿಮ್ಮ ಗ್ರಾಮ ಪಂಚಾಯಿತಿ ಕಚೆರಿಗೆ ತೆರಳಿ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು. ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ಯಾಂಪ್ ಗಳನ್ನು ಆಯೋಜಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಇಂದಿನಿಂದ ಡಿ.29ರವರೆಗೆ ಈ ಕ್ಯಾಂಪ್ ಗಳು ರಾಜ್ಯಾದ್ಯಂತ ನಡೆಯಲಿವೆ ಎಂದು ತಿಳಿಸಿದರು.

ಬೆಳಗಾವಿ ಜಿಲ್ಲೆಯಲ್ಲಿಯೇ ಸುಮಾರು 11 ಲಕ್ಷ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿದ್ದಾರೆ. ತಿಂಗಳಿಗೆ 202 ಕೋಟಿ ಹಣವನ್ನು ನೀಡಲಾಗುತ್ತಿದೆ. ಹಲಗಾದಲ್ಲಿಯೇ 1600 ಕುಟುಂಬಗಳು ಫಲಾನುಭವಿಗಳಿದ್ದಾರೆ. ಹಲಗಾ ಗ್ರಾಮದ ಕೆಲ ಫಲಾನುಭವಿಗಳು ಕಳೆದ ಮೂರು ತಿಂಗಳಿಂದ ಗೃಹಲಕ್ಷ್ಮೀ ಹಣ ಬಂದಿಲ್ಲ ಎಂದು ಸಮಸ್ಯೆ ತೋಡಿಕೊಂಡಿದ್ದಾರೆ. ಕೆಲವರ ಅಕೌಂಟ್ ಸಮಸ್ಯೆ ಇದೆ. ಅಕೌಂಟ್ ಗೆ ಆಧಾರ್ ಲಿಂಕ್ ಆಗಿಲ್ಲ, ಕೆ ವೈಸಿ ಆಗಿಲ್ಲ ಹೀಗೆ ಕೆಲವೊಂದು ಸಮಸ್ಯೆಯಿಂದಾಗಿ ಅವರಿಗೆ ಹಣ ಹೋಗಿಲ್ಲ ಇಂದು ಆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಡಲಾಗುವುದು ಎಂದು ಹೇಳಿದರು.
ಇದೇ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಗ್ರಾಮ ಪಂಚಾಯಿತಿ ಕಚೇರಿಗೆ ಆಗಮಿಸಿದ್ದ ಹಲವು ಫಲಾನುಭವಿಗಳನ್ನು ಖುದ್ದು ಭೇಟಿಯಾಗಿ ಗೃಹಲಕ್ಷ್ಮೀ ಯೋಜನೆ ವಿಚಾರವಾಗಿ ಆಗಿರುವ ಸಮಸ್ಯೆಗಳ ಕೇಳಿ ಪರಿಶೀಲಿಸಿದರು. ಸ್ಥಳದಲ್ಲಿಯೇ ಪರಿಹಾರವನ್ನು ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ