Karnataka NewsPolitics

*ಸಣ್ಣ ವ್ಯಾಪಾರಸ್ಥರಿಗೆ ಜಿಎಸ್ ಟಿ ನೋಟಿಸ್ ಕೇಂದ್ರದ್ದಲ್ಲ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟನೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಸಣ್ಣಪುಟ್ಟ ವ್ಯಾಪಾರಿಗಳಿಗೆ ತೆರಿಗೆ ಬಾಕಿ ನೋಟಿಸ್‌ ನೀಡುತ್ತಿರುವುದು ರಾಜ್ಯ ಸರ್ಕಾರವೇ ಹೊರತು ಕೇಂದ್ರ ಸರ್ಕಾರವಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದ್ದಾರೆ.

ತೆರಿಗೆ ನೋಟಿಸ್‌ ನೀಡುವಲ್ಲಿ ರಾಜ್ಯ ಸಾರ್ಕಾರದ ಪಾತ್ರವೇನಿಲ್ಲ ಎಂದಿರುವ ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಜೋಶಿ, ರಾಜ್ಯ ಸರ್ಕಾರ ಮಾಡುವುದೆಲ್ಲ ಮಾಡಿಬಿಟ್ಟು ಈಗ ತನಗೇನೂ ಸಂಬಂಧವಿಲ್ಲ ಎನ್ನುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಸಣ್ಣಪುಟ್ಟ ವ್ಯಾಪಾರಿಗಳಿಗೆ ತೆರಿಗೆ ಬಾಕಿ ನೋಟಿಸ್ ಕೊಟ್ಟಿರುವುದು ರಾಜ್ಯ ಸರ್ಕಾರದ ತೆರಿಗೆ ಇಲಾಖೆ ಅಧಿಕಾರಿಗಳು. ಹಾಗಿದ್ದರೂ ಇದೀಗ ರಾಜ್ಯ ಸರ್ಕಾರಕ್ಕೂ, ಜಿಎಸ್‌ಟಿ ನೋಟಿಸ್‌ಗೂ ಸಂಬಂಧವಿಲ್ಲ ಎನ್ನುತ್ತ ಜನರ ಕಣ್ಣಿಗೆ ಮಣ್ಣೆರೆಚೋ ಕೆಲಸ ಮಾಡುತ್ತಿದ್ದಾರೆ, ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಜೋಶಿ ಟೀಕಿಸಿದ್ದಾರೆ.

ಬೇರೆಲ್ಲೂ ಇಲ್ಲದ ನೋಟಿಸ್‌ ಇಲ್ಲೇಕೆ?

Home add -Advt

ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದರೆ ಬಹುತೇಕ ಎಲ್ಲ ರಾಜ್ಯಗಳಿಗೂ ಅನ್ವಯಿಸುತ್ತಿತ್ತು. ಆದರೆ, ಬೇರೆ ಯಾವುದೇ ರಾಜ್ಯಗಳಲ್ಲೂ ತೆರಿಗೆ ಇಲಾಖೆ ಅಧಿಕಾರಿಗಳಿಂದ ಸಣ್ಣಪುಟ್ಟ ವ್ಯಾಪಾರಾಸ್ಥರಿಗೆ ಜಿಎಸ್‌ಟಿ ನೋಟಿಸ್ ನೀಡಲಾಗಿಲ್ಲ. ಕರ್ನಾಟಕದಲ್ಲಿ ಮಾತ್ರ ಇದಾಗಿದೆ ಎಂದಿದ್ದಾರೆ.

ಜನರ ಜತೆಗೆ ಸಣ್ಣ ವ್ಯಾಪಾರಸ್ಥರಿಗೂ ಕಿರುಕುಳ

ರಾಜ್ಯ ಕಾಂಗ್ರೆಸ್‌ ಸರ್ಕಾರ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಗೋಳು ಹೋಯ್ದುಕೊಳ್ಳುವ ಜತೆಗೆ ಇದೀಗ ಹಣ್ಣು, ಹಾಲು, ತರಕಾರಿ ಸೇರಿದಂತೆ ದಿನನಿತ್ಯದ ಅಗತ್ಯ ಸರಕು ಸೇವಾ ವ್ಯಾಪಾರಿಗಳಿಗೆ ನೋಟಿಸ್ ನೀಡಿ‌ ಕಿರುಕುಳ ಕೊಡುತ್ತಿದೆ ಎಂದು ಸಚಿವ ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರಲ್ಲಿ ಕೇಂದ್ರದ ಪಾತ್ರವಿಲ್ಲ

GSTಯಲ್ಲಿ ಕೇಂದ್ರ ಸರ್ಕಾರದ ಅಡಿಯಲ್ಲಿ ʼCGSTʼ ಮತ್ತು ರಾಜ್ಯ ಸರ್ಕಾರಗಳ‌ ಅಡಿಯಲ್ಲಿ ʼSGSTʼ ಎಂದು ಎರಡು ಭಾಗವಿದೆ. ಆದರಂತೆ ಕರ್ನಾಟಕದಲ್ಲಿ ಸಣ್ಣಪುಟ್ಟ ವ್ಯಾಪಾರಿಗಳಿಗೆ ನೋಟಿಸ್ ನೀಡಿರುವುದು ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆ. ಇದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದ್ದಾರೆ.

ಜಿಎಸ್‌ಟಿ‌ ಕೌನ್ಸಿಲ್‌ನಲ್ಲಿ ಯಾವುದೇ ತೀರ್ಮಾನ‌ ತಗೆದುಕೊಳ್ಳಲು ಮಹತ್ವದ ಪಾತ್ರ ವಹಿಸಿರುವುದು ರಾಜ್ಯ ಸರ್ಕಾರಗಳು. ಕೇಂದ್ರ ಸರ್ಕಾರಕ್ಕೆ ಕೇವಲ 3ನೇ ಒಂದು ಭಾಗ ಮಾತ್ರ ಅಧಿಕಾರವಿದೆ. ಉಳಿದ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲಿದೆ. 3ನೇ ಎರಡು ಭಾಗದಷ್ಟು ಅಧಿಕಾರ ಹೊಂದಿರುವ ರಾಜ್ಯ ‌ಸರ್ಕಾರಗಳ ನಿರ್ಣಯವೇ ಇದರಲ್ಲಿ ಅಂತಿಮವಾಗಿರಲಿದೆ ಎಂಬ ಮಾಹಿತಿ ಸಹ ಹಂಚಿಕೊಂಡಿದ್ದಾರೆ ಕೇಂದ್ರ ಸಚಿವರು.

ಯುಪಿಐ ಹದಗೆಡಿಸೋ ದುಸ್ಸಾಹಸ ರಾಜ್ಯದಲ್ಲಿ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್‌ ನೀಡುವ ಮೂಲಕ ಡಿಜಿಟಲ್‌, ಯುಪಿಐ ವಹಿವಾಟು ಹದಗೆಡಿಸುವ ದುಸ್ಸಾಹಸಕ್ಕೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಕೈ ಹಾಕಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಗಂಭೀರ ಆರೋಪ ಮಾಡಿದ್ದಾರೆ.

ಯುಪಿಐ ವಹಿವಾಟು ವಿಶ್ವಕ್ಕೇ ಮಾದರಿಯಾಗಿದೆ. ಆದರೆ, ರಾಜ್ಯದಲ್ಲಿ ಈ ಪಾರದರ್ಶಕ ವ್ಯವಸ್ಥೆಗೆ ಸಂಚಕಾರ ತರಲೆತ್ನಿಸುತ್ತಿದ್ದು, ರಾಜ್ಯ ಸರ್ಕಾರದ ಈ ಕ್ಷುಲ್ಲಕ ರಾಜಕಾರಣ ನಿಜಕ್ಕೂ ದುರಂತವೇ ಸರಿ ಎಂದು ಸಚಿವ ಜೋಶಿ ತೀವ್ರವಾಗಿ ಖಂಡಿಸಿದ್ದಾರೆ.

Related Articles

Back to top button