ಪ್ರಗತಿವಾಹಿನಿ ಸುದ್ದಿ, ಅರಬಾವಿ – ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ)ಗಳು ಉದ್ಯೋಗ ತರಬೇತಿ ನೀಡುವ ಮೂಲಕ ಯುವಜನಾಂಗಕ್ಕೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಿವೆ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಉನ್ನತ ಶಿಕ್ಷಣ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವರಾದ ಡಾ.ಅಶ್ವಥ್ ನಾರಾಯಣ ಸಿ.ಎನ್. ಅವರು ಹೇಳಿದರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ವತಿಯಿಂದ ಅರಭಾವಿಯಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿ.ಟಿ.ಟಿ.ಸಿ) ಹಾಗೂ ತರಬೇತಿ ಕೇಂದ್ರದ ನೂತನ ಕಟ್ಟಡಗಳ ಸಂಕೀರ್ಣವನ್ನು ಮಂಗಳವಾರ (ನ.24) ಉದ್ಘಾಟಿಸಿ ಅವರು ಮಾತನಾಡಿದರು.
ಅರಭಾವಿ ಕ್ಷೇತ್ರದ ಯುವ ಜನಾಂಗಕ್ಕೆ ಹೊಸ ಚೈತನ್ಯ ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಜಿ.ಟಿ.ಟಿ. ಸಂಸ್ಥೆ ಸಹಕಾರಿಯಾಗಲಿದೆ.
ಅರಭಾವಿ ಕ್ಷೇತ್ರದಲ್ಲಿ ಕೃಷಿಯ ಜೊತೆಗೆ ಕೈಗಾರೀಕರಣದ ಯುಗ ಪ್ರಾರಂಭವಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅರಭಾವಿಯ ಜಿ.ಟಿ.ಟಿ.ಸಿ ಕೇಂದ್ರವು ರಾಜ್ಯದ 23 ನೇ ಸಂಸ್ಥೆಯಾಗಿದ್ದು, ಈ ಸಂಸ್ಥೆಯಲ್ಲಿ ಮುಂಬರುವ ದಿನಗಳಲ್ಲಿ 2 ಹೊಸ ಕೋರ್ಸಗಳನ್ನು ಕೂಡ ಸೇರ್ಪಡೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ವಿದ್ಯಾರ್ಥಿಗಳಿಗೆ ಉದ್ಯೋಗದ ಭರವಸೆ:
ಜಿ.ಟಿ.ಟಿ.ಸಿ ಸಂಸ್ಥೆಯು ಪ್ರತಿಷ್ಠಿತ ಕಂಪನಿಯಾದ ಟೋಯೊಟಾ ಕಿರ್ಲೋಸ್ಕರ್ ಸಂಸ್ಥೆಯ ಜೊತೆಗೆ ಒಡಂಬಡಿಕೆ ಮಾಡಿಕೊಂಡಿರುವುದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಉದ್ಯೋಗ ಒದಗಿಸುವ ಭರವಸೆ ಕೂಡ ನೀಡಲಾಗುತ್ತಿದೆ. ಸ್ಥಳೀಯ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಡಾ.ಅಶ್ವಥ್ ನಾರಾಯಣ ತಿಳಿಸಿದರು.
ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ 100% ಉದ್ಯೋಗ ಲಭಿಸುವದರ ಜೊತೆಗೆ ವಿದ್ಯಾರ್ಥಿ ವೇತನವನ್ನು ಸಹ ನೀಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅರಭಾವಿ ಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು, 2017 ರಲ್ಲಿ ಶಾಸಕ ಸತೀಶ ಜಾರಕಿಹೊಳಿ ಹಾಗೂ ಗೋಕಾಕ ಶಾಸಕರಾದ ರಮೇಶ ಜಾರಕಿಹೊಳಿ ಅವರ ಪರಿಶ್ರಮದಿಂದ ಈ ಸಂಸ್ಥೆಯ ಕಟ್ಟಡ ನಿರ್ಮಾಣಗೊಂಡಿದೆ. ಆದ್ದರಿಂದ ಅರಭಾವಿ ಕ್ಷೇತ್ರದ ಜನತೆ ಹಾಗೂ ವಿದ್ಯಾರ್ಥಿಗಳ ಪರವಾಗಿ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಜಿ.ಟಿ.ಟಿ.ಸಿ ಸಂಸ್ಥೆಯಿಂದ ನೀಡಲಾಗುವ ತರಬೇತಿಯ ಲಾಭವನ್ನು ಈ ಭಾಗದ ರೈತರ ಮಕ್ಕಳು ಸದುಪಯೋಗ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆದುಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜಿ.ಟಿ.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕರಾದ ಎಚ್. ರಾಘವೇಂದ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 1972 ರಲ್ಲಿ ಪ್ರಥಮವಾಗಿ ಜಿ.ಟಿ.ಟಿ.ಸಿ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡಲಾಯಿತು. ಈ ಸಂಸ್ಥೆಯ ಮುಖ್ಯ ಉದ್ದೇಶ ಉಪಕರಣ ಮತ್ತು ಅಚ್ಚು ಶಾಸ್ತ್ರದಲ್ಲಿ ಉತ್ತಮ ಗುಣಮಟ್ಟ ತರಬೇತಿ ನೀಡಲಾಗುತ್ತಿದೆ. ವಿಶೇಷವಾಗಿ ಕ್ಲಿಷ್ಟಕರವಾದ ಬಿಡಿಭಾಗಗಳ ತಯಾರಿಕಾ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೂಡಲಗಿ ತಹಶಿಲ್ದಾರ ಬಿ.ಜಿ. ಮಹಾಂತ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾದ ಬಸವರಾಜ ಪದ್ಮಶಾಲಿ, ಬೆಳಗಾವಿ ಜಿ.ಟಿ.ಟಿ.ಸಿ ಪ್ರಾಂಶುಪಾಲರಾದ ಬಿ.ಜಿ.ಮೊಗೇರ, ಧಾರವಾಡ ಜಿ.ಟಿ.ಟಿ.ಸಿ ನೋಡಲ್ ಅಧಿಕಾರಿ ಅಶೋಕ ವಾಲೀಕರ, ಚಿಕ್ಕೋಡಿ ಜಿ.ಟಿ.ಟಿ.ಸಿ ಪ್ರಾಂಶುಪಾಲರಾದ ಖಾನ್ ಮೆಹಬೂಬ್ ಅಲಿ, ಗೋಕಾಕ ಜಿ.ಟಿ.ಟಿ.ಸಿ ಪ್ರಾಂಶುಪಾಲರಾದ ಉಮೇಶ ಬಡಕುಂದ್ರಿ ಹಾಗೂ ಕಾಲೇಜಿನ ಪ್ರಾಧ್ಯಾಪಕ ವರ್ಗದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ