*ಕರ್ನಾಟಕ ಸರಕಾರ ಗ್ಯಾರಂಟಿ ಸರಕಾರ: ಸತೀಶ್ ಜಾರಕಿಹೊಳಿ*
ಪಂಚ ಗ್ಯಾರಂಟಿಗಳ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು: ಸಚಿವ ಸತೀಶ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ: ಸರ್ಕಾರದ ಐದು ಗ್ಯಾರಂಟಿಗಳ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಜನರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಸರಕಾರ ಕ್ರಮ ಕೈಗೊಂಡಿದೆ. ಗೃಹಲಕ್ಷ್ಮೀ ಸೇರಿದಂತೆ ಪಂಚ ಗ್ಯಾರಂಟಿ ಮೂಲಕ ನೀಡಲಾಗಿರುವ ಆರ್ಥಿಕ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಆಶ್ರಯದಲ್ಲಿ ನಗರದ ಸರದಾರ ಹೈಸ್ಕೂಲ್ ಮೈದಾನದಲ್ಲಿ ಸೋಮವಾರ(ಫೆ.5) ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅನೇಕ ಕಷ್ಟಗಳ ನಡುವೆಯೂ ಪ್ರತಿವರ್ಷ 60 ಸಾವಿರ ಕೋಟಿ ರೂಪಾಯಿಗಳನ್ನು ಬಡವರ ಕಲ್ಯಾಣಕ್ಕೆ ಸರಕಾರ ಖರ್ಚು ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಹೊಸ ಆಸ್ಪತ್ರೆ, ಶಾಲೆಗಳು ಮತ್ತು ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಿದೆ. ಜಿಲ್ಲೆಯಲ್ಲಿ ಅತ್ಯುತ್ತಮ ರಸ್ತೆಗಳ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಭರವಸೆ:
ಇದಲ್ಲದೇ ಕೆರೆ ತುಂಬುವ ಯೋಜನೆ ಅನುಷ್ಠಾನ, ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ. ಗ್ಯಾರಂಟಿ ಯೋಜನೆ ಮೂಲಕ ಉಳಿತಾಯವಾಗುವ ಹಣವನ್ನು ಫಲಾನುಭವಿಗಳು ತಮ್ಮ ಮಕ್ಕಳ ಶಿಕ್ಷಣ ಸೇರಿದಂತೆ ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳಬೇಕು. ತಮ್ಮ ಬಗ್ಗೆ ಸರಕಾರ ಹೊಂದಿರುವ ಕಾಳಜಿಯನ್ನು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಮನೆ ಮನೆಗೆ ತಲುಪಿಸಬೇಕು.
ಬಡವರ ಮಕ್ಕಳಿಗೆ ಧ್ವಜ ನೀಡುವವರ ಮಕ್ಕಳು ವಿದೇಶಗಳಲ್ಲಿ ಉನ್ನತ ವ್ಯಾಸಾಂಗ ಮಾಡುತ್ತಾರೆ. ಆದ್ದರಿಂದ ಇಂತಹ ಹುನ್ನಾರಗಳ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಕರೆ ನೀಡಿದರು.
ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಗೃಹಲಕ್ಷ್ಮೀ ಯೋಜನೆ ಜಾರಿ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಮಾತನಾಡಿ, ಗ್ಯಾರಂಟಿ ಯೋಜನೆ ಅನುಷ್ಠಾನದಿಂದ ರಾಜ್ಯ ದಿವಾಳಿ ಆಗಲಿದೆ ಎಂದು ಟೀಕಿಸಿದವರೇ ಇಂದು ಪಂಚ ಗ್ಯಾರಂಟಿ ಯೋಜನೆಯ ಫಲವನ್ನು ಅನುಭವಿಸುತ್ತಿರುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಗೃಹಲಕ್ಷ್ಮೀ ಯೋಜನೆಯಡಿ ಪ್ರತಿವರ್ಷಕ್ಕೆ ಕುಟುಂಬದ ಯಜಮಾನಿಯರಿಗೆ 24 ಸಾವಿರ ರೂಪಾಯಿ ನೀಡುವ ಮೂಲಕ ಬಡವರಿಗೆ ನೇರವಾಗಿ ಸಹಾಯಹಸ್ತವನ್ನು ನೀಡಿದೆ. ಮನೆಯ ಯಜಮಾನಿಯರ ಆರ್ಥಿಕ ಸಬಲೀಕರಣಕ್ಕೆ ಸರಕಾರ ಮುಂದಾಗಿದೆ. ಬೆಳಗಾವಿ ಜಿಲ್ಲೆಯೊಂದರಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು 212 ಕೋಟಿ ರೂಪಾಯಿ ನೀಡುತ್ತಿರುವುದು ಕಡಿಮೆಯಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗ್ಯ ಯೋಜನೆಗಳ ಸರದಾರ:
ರಾಜ್ಯದಲ್ಲಿ ಸರ್ಕಾರ ಬಂದ ನಂತರ ಜನರ ಕಷ್ಟಗಳಿಗೆ ನಿರಂತರ ಸ್ಪಂದಿಸಿದೆ. ಮುಖ್ಯಮಂತ್ರಿಗಳು ಪಂಚ ಗ್ಯಾರಂಟಿಗಳನ್ನು ಯೋಜನೆಗಳನ್ನು ಅನುಷ್ಠಾನಗೊಳಿಸಿದ ಭಾಗ್ಯ ಯೋಜನೆಗಳ ಸರದಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಮಾಧ್ಯಮ ವರ್ಗದ ಕುಟುಂಬಗಳಿಗೆ, ರೈತಾಪಿ ವರ್ಗದ ಜನರಿಗೆ ಈ ಯೋಜನೆಗಳು ಸಹಾಯವಾಗಿವೆ. ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಗೃಹ ಲಕ್ಷ್ಮೀ ಯೋಜನೆ ಜಾರಿಗೆ ತರಲಾಗಿದೆ.
ಚುನಾವಣೆ ವೇಳೆ ನೀಡಿದ ವಚನವನ್ನು ಪಾಲಿಸುವ ಮೂಲಕ ಬಡವರ ಪರ ಇರುವುದನ್ನು ಸಾಬೀತುಪಡಿಸಿದ್ದೇವೆ. ಮುಂಬರುವ ದಿನಗಳಲ್ಲೂ ಸರಕಾರದ ಕೈಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಂಬರುವ ದಿನಗಳಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಳ ಮಾಡಲು ಸರಕಾರ ಬದ್ಧವಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಅವರು ಹೇಳಿದರು.
ನುಡಿದಂತೆ ನಡೆದ ಸರ್ಕಾರ; ಜನಪರ ಯೋಜನೆಗಳ ಅನುಷ್ಠಾನ:
ಚುನಾವಣಾ ಪೂರ್ವದಲ್ಲಿ ಮನೆಮನೆಗೆ ತೆರಳಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಸಹಿ ಹೊಂದಿರುವ ಗ್ಯಾರಂಟಿ ಕಾರ್ಡುಗಳನ್ನು ನೀಡಲಾಗಿತ್ತು. ನಾವು ನೀಡಿದ ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ ಪಂಚ ಗ್ಯಾರಂಟಿ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಬೆಳಗಾವಿ ಉತ್ತರ ಶಾಸಕ ಆಸಿಫ್(ರಾಜು) ಸೇಠ್ ಹೇಳಿದರು.
ಗ್ಯಾರಂಟಿ ಅನುಷ್ಠಾನ ಮತ್ತು ಹಣ ಹೊಂದಾಣಿಕೆ ಬಗ್ಗೆಯೂ ಬಹಳಷ್ಟು ಜನರಿಗೆ ಸಂದೇಹವಿತ್ತು. ಆದರೆ ಜನರ ಹಣವನ್ನು ಜನರಿಗೆ ಗ್ಯಾರಂಟಿ ಯೋಜನೆಯ ಮೂಲಕ ಯಶಸ್ವಿಯಾಗಿ ತಲುಪಿಸಲಾಗಿದೆ.
ಸರಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳನ್ನು ಐದು ವರ್ಷಗಳ ಕಾಲ ನೀಡಲಾಗುವುದು. ನಾವು ನೀಡಿದ ವಚನ ಪಾಲಿಸುತ್ತೇವೆ; ಈ ಬಗ್ಗೆ ಯಾವುದೇ ಸಂದೇಹ ಬೇಡ ಎಂದು ಶಾಸಕ ಸೇಠ್ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಮಾತನಾಡಿ ಚುನಾವಣಾ ಸಂದರ್ಭದಲ್ಲಿ ನೀಡಲಾದ ಭರವಸೆಗಳನ್ನು ಚಾಚೂತಪ್ಪದೇ ಅನುಷ್ಠಾನಗೊಳಿಸಲಾಗಿದೆ. ಐದೂ ಗ್ಯಾರಂಟಿ ಯೋಜನೆಗಳನ್ನು ಹಂತ ಹಂತವಾಗಿ ಅತ್ಯಂತ ಕಡಿಮೆ ಕಾಲಾವಧಿಯಲ್ಲಿ ಜಾರಿಗೆ ತರಲಾಗಿದೆ.
ಗ್ಯಾರಂಟಿ ಯೋಜನೆ ವಿರೋಧಿಸಿದವರು ಈಗ ಲೋಕಸಭಾ ಚುನಾವಣೆ ಬಂದಿರುವುದರಿಂದ ತಾವೂ ಗ್ಯಾರಂಟಿ ಘೋಷಿಸುತ್ತಿರುವುದು ಕರ್ನಾಟಕ ಸರಕಾರಕ್ಕೆ ಸಂದ ಗೆಲುವು ಆಗಿದೆ ಎಂದರು.
ಪ್ರತಿವರ್ಷ 60 ಸಾವಿರ ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಯೋಜನೆಗೆ ಖರ್ಚು ಮಾಡುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಮಾತ್ರ ಇದು ಸಾಧ್ಯ ಎಂದು ಚನ್ನರಾಜ್ ಅಭಿಪ್ರಾಯಪಟ್ಟರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ; ಜಿಲ್ಲೆಗೆ ಪ್ರಥಮ ಸ್ಥಾನ:
ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ -2 ಪ್ರಕಾಶ ಹುಕ್ಕೇರಿ ಮಾತನಾಡಿ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸರ್ಕಾರ ಸಂಪೂರ್ಣ ಯಶಸ್ವಿಯಾಗಿದೆ. ಅದರ ಕುರಿತು ಜನ ಸಾಮಾನ್ಯರಿಂದ ಯಾವುದೇ ಒಂದು ದೂರು ಕೂಡ ಬಂದಿಲ್ಲ. ಯೋಜನಾ ಅನುಷ್ಠಾನದಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಗೃಹಲಕ್ಷ್ಮೀ, ಅನ್ನಭಾಗ್ಯ, ಗೃಹ ಜ್ಯೋತಿ, ಯುವನಿಧಿ, ಶಕ್ತಿ ಯೋಜನೆ ಹೀಗೆ ಐದು ಗ್ಯಾರಂಟಿ ಯೋಜನೆಗಳು ಸಮರ್ಪಕ ಅನುಷ್ಠಾನಗೊಂಡಿವೆ. ಜಿಲ್ಲೆಯಲ್ಲಿ ಸುಮಾರು 10.64 ಫಲಾನುಭವಿಗಳ ನೇರವಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವುದರ ಮೂಲಕ ಯೋಜನೆ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಫಲಾನುಭವಿಗಳ ಅನಿಸಿಕೆಗಳು:
1. ಗೃಹಲಕ್ಷ್ಮೀ ಯೋಜನೆಯಿಂದ ಮನೆಯಲ್ಲಿರುವ ಮಹಿಳೆಯರಿಗೆ ಆರೋಗ್ಯ ವೆಚ್ಚ ಸೇರಿದಂತೆ ಸಣ್ಣಪುಟ್ಟ ಖರ್ಚುವೆಚ್ಚಗಳನ್ನು ನಿಭಾಯಿಸಲು ಅನುಕೂಲವಾಗಿದೆ ಎಂದು ಗೃಹಲಕ್ಷ್ಮೀ ಫಲಾನುಭವಿ ವಿದ್ಯಾ ತಾನ್ಸೆ ಹೇಳಿದರು.
2. ಗೃಹಲಕ್ಷ್ಮೀ ಫಲಾನುಭವಿ ಗೀತಾ ಚಿಕ್ಕಲದಿನ್ನಿ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯಿಂದ ಮನೆ ಮನೆಗೆ ಲಕ್ಷ್ಮೀ ಬಂದಂತಾಗಿದೆ. ಇದರಿಂದ ಬಡ ಕುಟುಂಬದ ಮಹಿಳೆಯರಿಗೆ ಅತ್ಯಂತ ಉಪಯುಕ್ತವಾಗಿದೆ. ಮಹಿಳೆಯರ ಕೈಗೆ ನೀಡಿದ ಹಣವು ಸದುಪಯೋಗ ಆಗುತ್ತದೆ ಎಂಬ ನಂಬಿಕೆಯಿಂದ ಮಹಿಳೆಯರಿಗೆ ಹಣ ನೀಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಯಾವುದೇ ಜಾತಿ-ಧರ್ಮಗಳಿಗೆ ಸೀಮಿತವಾಗದೇ ಸರ್ವರಿಗೂ ಯೋಜನೆಯ ಲಾಭ ದೊರಕುವಂತೆ ಸರಕಾರ ಸೌಲಭ್ಯವನ್ನು ನೀಡಿದೆ. ಫಲಾನುಭವಿಗಳ ನೋಂದಣಿಗೆ ಕೂಡ ಯಾವುದೇ ರೀತಿಯ ಸಮಯ ಅಥವಾ ಕಡೆಯ ದಿನದ ನಿರ್ಬಂಧವಿಲ್ಲ. ಯಾವುದೇ ಸಂದರ್ಭದಲ್ಲಿಯಾದರೂ ಅರ್ಹ ಮಹಿಳೆಯರು ಇದರ ಪ್ರಯೋಜನ ಪಡೆಯಬಹುದು. ಗ್ಯಾರಂಟಿ ಯೋಜನೆಯಿಂದ ಪ್ರತಿ ಕುಟುಂಬಕ್ಕೆ ಐದಾರು ಸಾವಿರ ರೂಪಾಯಿ ಉಳಿತಾಯವಾಗುತ್ತಿದೆ ಎಂದು ಗೀತಾ ಚಿಕ್ಕಲದಿನ್ನಿ ಅಭಿಪ್ರಾಯಪಟ್ಟರು.
ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವ ಮೂಲಕ ಸರಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಅನ್ನಭಾಗ್ಯ ಯೋಜನೆ ಡಿಬಿಟಿ ಪೋಸ್ಟರ್ ಬಿಡುಗಡೆ:
ಅನ್ನಭಾಗ್ಯ ಯೋಜನೆಯ ಡಿಬಿಟಿ ಪೋಸ್ಟರ್ ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಗೃಹಲಕ್ಷ್ಮೀ ಯೋಜನೆಯ ಫಲಾನಿಭವಿಗಳಿಗೆ ಚೆಕ್ ವಿತರಿಸಲಾಯಿತು.
ಸವದತ್ತಿ ವಿಧಾನ ಸಭಾ ಮತ ಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ, ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ನಗರ ಪೊಲೀಸ್ ಆಯುಕ್ತ ಎಸ್.ಎನ್ ಸಿದ್ದರಾಮಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಪ್ರೊಬೇಷನರಿ ಐಎಎಸ್ ಅಧಿಕಾರಿ ಶುಭಂ ಶುಕ್ಲಾ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಜಿಲ್ಲಾ ನಗಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ್ ಕಲಾದಗಿ, ನಗರ ಸೇವಕರು, ಜನ ಪ್ರತಿನಿಧಿಗಳು, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದೇಶದಲ್ಲಿಯೇ ಅಪೂರ್ವವಾಗಿರುವ ಕರ್ನಾಟಕ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ “ಪಂಚ ಗ್ಯಾರಂಟಿ” ಯೋಜನೆಗಳ ಫಲಾನುಭವಿಗಳ ಸಮಾವೇಶವು ಸಾವಿರಾರು ಜನರ ಹರ್ಷೋದ್ಘಾರಗಳ ನಡುವೆ ಅತ್ಯಂತ ಯಶಸ್ವಿಯಾಗಿ ನಡೆಯಿತು.
ನಗರ ಸೇರಿದಂತೆ ವಿವಿಧ ತಾಲ್ಲೂಕುಗಳ ಸಾವಿರಾರು ಫಲಾನುಭವಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ