*ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡ ಜನರ ಹಸಿವನ್ನು ನೀಗಿಸುತ್ತಿದ್ದು, ಎಂದಿನಂತೆ ಯಥಾವತ್ತಾಗಿ ಮುಂದುವರಿಯಲಿದೆ. ಈ ಯೋಜನೆಗಳನ್ನು ಪರಿಷ್ಕರಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟಪಡಿಸಿದ್ದಾರೆ.
ಅಜ್ಜರನಾಡಿನಲ್ಲಿರುವ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಹಾಕುವುದಿಲ್ಲ ಎಂದು ಹೇಳಿದರು.
ಕಳೆದ ವಿಧಾನ ಸಭೆ ಚುನಾವಣೆ ವೇಳೆ ಕೊಟ್ಟ ಭರವಸೆಗಳನ್ನು ಜಾರಿಗೆ ತರಲಾಗಿದೆ. ಐದು ಗ್ಯಾರಂಟಿಗಳು ಮುಂದುವರಿಯಲಿವೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಯಾರೂ ಅನ್ಯತಾ ವ್ಯಾಖ್ಯಾನಿಸಬಾರದು. ಪರಿಷ್ಕರಣೆ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿಯವರು ಮಾತನಾಡಿರಲಿಕ್ಕಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಎಲ್ಲರ ಧ್ವನಿಯೂ ಒಂದೇ, ಗ್ಯಾರಂಟಿ ಯೋಜನೆ ಮುಂದುವರಿಯಬೇಕು ಅಂತ. ಚುನಾವಣೆಗಾಗಿ ಸ್ವಾರ್ಥದ ರಾಜಕಾರಣಕ್ಕೆ ಗ್ಯಾರಂಟಿ ಯೋಜನೆ ಜಾರಿಗೆ ತಂದಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಮಹಿಳೆಯರ ಸಬಲೀಕರಣ ಬಡವರ ಉದ್ದಾರ ನಮ್ಮ ಉದ್ದೇಶ. ಇವತ್ತಿನವರೆಗೆ ಇರುವ ಮಾನದಂಡದಲ್ಲೇ ಯೋಜನೆಗಳು ಮುಂದುವರಿಯುತ್ತವೆ. ಜನರಿಗೆ ಕೊಟ್ಟಂತಹ ಭಾಷೆಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದರು.
ಮಳೆಯಿಂದ ಉಡುಪಿ ಜಿಲ್ಲೆಯಲ್ಲಿ 200 ಕೋಟಿಯಷ್ಟು ಹಾನಿ
ಮಳೆಯಿಂದಾಗಿ ಉಡುಪಿ ಜಿಲ್ಲೆಯಲ್ಲಿ 200 ಕೋಟಿ ರೂಪಾಯಿಯಷ್ಟು ಹಾನಿಯಾಗಿದೆ. ಜಿಲ್ಲೆಯಲ್ಲಿ ವಾಡಿಕೆ ಗಿಂತ ಹೆಚ್ಚು ಮಳೆಯಾಗಿದೆ. ಜಿಲ್ಲಾಡಳಿತದ ಬಳಿ ಇರುವ ಅನುದಾನದಲ್ಲಿ ಹಣ ಬಿಡುಗಡೆ ಮಾಡಿದ್ದೇವೆ. ವಿಶೇಷ ಅನುದಾನಕ್ಕಾಗಿ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಭಾರಿ ಮಳೆಯಿಂದಾಗಿ ಮನೆ, ರಸ್ತೆ , ಕಾಲು ಸಂಕ, ಸೇತುವೆಗಳು ಹೀಗೆ ಬಹಳಷ್ಟು ಆಸ್ತಿಗಳು ಹಾನಿಯಾಗಿವೆ. ಅಭಿವೃದ್ಧಿಯೆಂದರೆ ಆಶ್ರಯ, ಅಭಿವೃದ್ಧಿ ಎಂದರೆ ಅಕ್ಷರ,ಅಭಿವೃದ್ಧಿ ಅಂದರೆ ಆರೋಗ್ಯ, ಅನ್ನಭಾಗ್ಯ, ಆರ್ಥಿಕ ಸಬಲೀಕರಣ ಎಂದ ಸಚಿವೆ, ಕಳೆದ ಒಂದು ವರ್ಷದಲ್ಲಿ ಉಡುಪಿ ಜಿಲ್ಲೆಗೆ 900 ಕೋಟಿ ಹಣ ಬಿಡುಗಡೆಯಾಗಿದೆ. ವಿವಿಧ ಯೋಜನೆ, ವಿವಿಧ ಗ್ಯಾರಂಟಿಯಿಂದ ಇಷ್ಟು ಹಣ ಬಂದಿದೆ. ಅಭಿವೃದ್ಧಿ ಅಂದರೆ ಬರಿ ರಸ್ತೆ ಮಾಡುವುದು ಅಲ್ಲ, ಮನುಷ್ಯನ ಜೀವನದಲ್ಲಿ ಮಂದಹಾಸ ತರುವುದೇ ಅಭಿವೃದ್ಧಿ ಎಂದರು.
ವಿರೋಧ ಪಕ್ಷದವರಿಗೆ ಕೆಲಸ ಇಲ್ಲ ಭ್ರಮನಿರಸನಗೊಂಡಿದ್ದಾರೆ. ಬಿಜೆಪಿಯವರು ನಿರಾಶರಾಗಿ ಮಾತನಾಡುತ್ತಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಉಡುಪಿ ಜಿಲ್ಲೆಯನ್ನು ನಿರ್ಲಕ್ಷಿಸಿಲ್ಲ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ