Latest

ಮಹಿಳೆಯ ಹೊಟ್ಟೆಯಲ್ಲಿತ್ತು 47 ಕೆಜಿ ಗಡ್ಡೆ

ಪ್ರಗತಿವಾಹಿನಿ ಸುದ್ದಿ; ಅಹಮದಾಬಾದ್: ಮಹಿಳೆಯರೊಬ್ಬರ ಹೊಟ್ಟೆಯಲ್ಲಿದ್ದ ಬರೋಬ್ಬರಿ 47 ಕೆಜಿ ಗಡ್ಡೆಯನ್ನು ಹೊರತೆಗೆಯುವ ಮೂಲಕ ಗುಜರಾತ್ ನ ಅಹಮದಾಬಾದ್ ಅಪೊಲೊ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಗುಜರಾತ್ ನ ದಾವೋಸ್ ಜಿಲ್ಲೆಯ ದಿಯೋಗರ್ ಬರಿಯಾದ 56 ವರ್ಷದ ಮಹಿಳೆ ಕಳೆದ 18 ವರ್ಷಗಳಿಂದ ಹೊಟ್ಟೆಯಲ್ಲಿನ ಬೃಹತ್ ಗಾತ್ರದ ಗಡ್ಡೆಯೊಂದಿಗೆ ಬಳಲುತ್ತಿದ್ದರು. ಅಪೊಲೊ ಆಸ್ಪತ್ರೆಯ ಸರ್ಜಿಕಲ್ ಗ್ಯಾಸ್ಟ್ರೋ ಎಂಟ್ರಾಲಾಜಿಸ್ಟ್ ಡಾ.ಚಿರಾಗ್ ದೇಸಾಯಿ ನೇತೃತ್ವದ ವೈದ್ಯರ ತಂಡ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದು, 47 ಕೆಜಿ ತೂಕದ ಬೃಹತ್ ಗಡ್ಡೆಯನ್ನು ಹೊರತೆಗೆದಿದೆ.

Home add -Advt

ಈ ಬಗ್ಗೆ ವಿವರಿಸಿರುವ ಡಾ.ಚಿರಾಗ್ ದೇಸಾಯಿ, ಇದೊಂದು ಅಪರೂಪದಲ್ಲಿ ಅಪರೂಪದ ಘಟನೆ. ಮಹಿಳೆಯೊಬ್ಬರ ಹೊಟ್ಟೆಯಲ್ಲಿ ಬೃಹತ್ ಗಾತ್ರದ ಗಡ್ಡೆಬೆಳೆಯುತ್ತಿತ್ತು. ರೋಗಿಗೆ ನೇರವಾಗಿ ನಿಲ್ಲಲೂ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಶಸ್ತ್ರಚಿಕಿತ್ಸೆಗೂ ಮುನ್ನ ನಾವು ರೋಗಿಯನ್ನು ತೂಕ ಮಾಡಲು ಸಾಧ್ಯವಾಗಿಲ್ಲ. ಆದರೆ ಶಸ್ತ್ರಚಿಕಿತ್ಸೆ ನಂತರ ಅವರ ತೂಕ 49 ಕೆ.ಜಿಗೆ ಇಳಿದಿದೆ. ವೈದ್ಯಕೀಯವಾಗಿ ರೆಟ್ರೊಪೆರಿಟೋನಿಯಲ್ ಲಿಯೊಮಿಯೊಮಾ ಎಂದು ಕರೆಯಲ್ಪಡುವ ಗಡ್ಡೆ ಸೇರಿದಂತೆ ತೆಗೆದುಹಾಕಲಾದ ತೂಕವು ಅವರ ನಿಜವಾದ ತೂಕಕ್ಕಿಂತ ಹೆಚ್ಚು ತೂಕ ಹೊಂದಿದೆ ಎಂದು ತಿಳಿಸಿದರು.

ಮಹಿಳೆಯ ಹಿರಿ ಮಗ ಹೇಳಿದ ಪ್ರಕಾರ, ತನ್ನ ತಾಯಿ ಕಳೆದ 18 ವರ್ಷಗಳಿಂದ ಹೊಟ್ಟೆಯಲ್ಲಿನ ಗಡ್ಡೆ ಸಮಸ್ಯೆಯಿಂದ ಬಳಲುತ್ತಿದ್ದರು. ಆರಂಭದಲ್ಲಿ ದೊಡ್ಡ ಗಡ್ಡೆಯಾಗಿರಲಿಲ್ಲ. ಹೊಟ್ಟೆ ಭಾಗದಲ್ಲಿ ದಪ್ಪವಾಗುತ್ತಾ ತೂಕಹೆಚ್ಚಳ ಸಮಸ್ಯೆಯಿರಬಹುದು. ಗ್ಯಾಸ್ಟ್ರಿಕ್ ಟ್ರಬಲ್ ಕಾರಣ ಎಂದು ಭಾವಿಸಿ ಆಯುರ್ವೇದ ಮತ್ತು ಅಲೋಪತಿ ಔಷಧಗಳನ್ನು ಸೇವಿಸಿದ್ದರು. 2004ರಲ್ಲಿ ಸೋನೋಗ್ರಫಿ ಮಾಡಿದಾಗ ಗಡ್ಡೆಯಿರುವುದು ಗೊತ್ತಾಯಿತು ಆದರೆ ಇದರಿಂದ ಅಪಾಯವಿಲ್ಲ ಎಂದು ಹೇಳಲಾಗಿತ್ತು. ಆದರೆ ಕೋವಿಡ್ ಸಂದರ್ಭದಲ್ಲಿ ಗಡ್ಡೆ ದೊಡ್ಡದಾಗುತ್ತಾ ಬಂದಿದೆ. ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಶ್ವಾಸಕೋಶ, ಮೂತ್ರಪಿಂಡ, ಕರುಳು ಸೇರಿದಂತೆ ದೇಹದ ಪ್ರಮುಖ ಅಂಗಗಳು ಗಡ್ಡೆಯೊಂದಿಗೆ ಸೇರಿರುವುದರಿಂದ ಶಸ್ತ್ರಚಿಕಿತ್ಸೆ ಅಪಾಯಕಾರಿ ಎಂದು ಬಿಟ್ಟರು. ಹಲವು ವೈದ್ಯರನ್ನು ಸಂಪರ್ಕಿಸಿದರೂ ಯಾರೂ ಆಪರೇಷನ್ ಗೆ ಸಿದ್ಧರಿರಲಿಲ್ಲ. ಗಡ್ಡೆಯ ಗಾತ್ರ ದ್ವಿಗುಣಗೊಳ್ಳುತ್ತಲೇ ಇತ್ತು. ನಿರಂತರವಾಗಿ ತಮ್ಮ ತಾಯಿ ನೋವಿನಿಂದ ಬಳಲುತ್ತಿದ್ದರಲ್ಲದೇ ಹಾಸಿಗೆಯಿಂದ ಏಳಲೂ ಸಾಧ್ಯವಾಗುತ್ತಿರಲಿಲ್ಲ. ಅಂತಿಮವಾಗಿ ಅಪೊಲೊ ಆಸ್ಪತ್ರೆ ವೈದ್ಯರನ್ನು ಸಂಪರ್ಕಿಸಿದೆವು. ಜನವರಿ 27ರಂದು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಇದೀಗ ಕಳೆದ ಸೋಮವಾರವಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ 8 ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆ ತೆಗೆದಿದ್ದಾರೆ ಎಂದು ವಿವರಿಸಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಶುರುವಾಗುತ್ತಾ ರಮ್ಯಾ ಮೋಡಿ? ಅವರು ಹೇಳಿದ್ದೇನು?

Related Articles

Back to top button