*ಬಸವಣ್ಣನವರನ್ನು ಅಪ್ರಸ್ತುತ ಮಾಡುವ ಹುನ್ನಾರ ನಿರಂತರವಾಗಿ ನಡೆಯುತ್ತಿದೆ: ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಬಸವಣ್ಣನವರನ್ನು ಅಪ್ರಸ್ತುತ ಮಾಡುವ ಹುನ್ನಾರ ನಿರಂತರವಾಗಿ ನಡೆಯುತ್ತಿದೆ. ಬಸವಣ್ಣನವರನ್ನು ಎಷ್ಟು ಕೆಳಗೆ ತಳ್ಳಲು ಪ್ರಯತ್ನಿಸುತ್ತಾರೆ. ಅವರು ಅಷ್ಟು ಪುಟಿದು ಮೇಲೇಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಬಸವ ವೇದಿಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರಿಗೆ ಬಸವಶ್ರೀ ಹಾಗೂ ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಅವರಿಗೆ ವಚನಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾಲ್ಕು ಯುಗಗಳಿಗೂ ಒಂದೊಂದು ಗುಣ ಧರ್ಮ ಇದೆ. ಕಲಿಯುಗದ ಗುಣ ಧರ್ಮ ಜ್ಣಾನ, ವಿಜ್ಞಾನ , ತಂತ್ರಜ್ಞಾನ, ತಂತ್ರಾಂಶ ಜ್ಞಾನ, ಕೃತಕ ಜ್ಞಾನ ಇವೆಲ್ಲಕ್ಕೂ ಪ್ರಮುಖವಾದದ್ದು ಜ್ಞಾನ ಮತ್ತು ಕಾಯಕ. ಹಿಂದಿನ ಯಾವ ಯುಗದಲ್ಲಿ ಇವೆಲ್ಲ ಬಳಕೆಯಾಗಿಲ್ಲ. ಕಾಯಕ ಮತ್ತು ಜ್ಞಾನದ ಸಮಾಗಮ ಮನುಷ್ಯನ ವಿಕಾಸ. ಜಗತ್ತಿನ ವಿಕಾಸ ಯಾವಾಗ ಅನ್ನುವುದು ಹುಟ್ಟು ಸಾವಿನ ನಡುವೆ ತಿಳುವಳಿಕೆ ಸಮಯ ಕಡಿಮೆ ಇದೆ. ಇಪ್ಪತೈದು ವರ್ಷ ಯೌನಕ್ಕೆ ಬರುವ ಸಮಯದಲ್ಲಿ ಕಲಿಯುತ್ತೇವೆ. ಅರವತ್ತು ವರ್ಷದ ನಂತರ ಚಿಂತನೆ ಮಾಡುತ್ತೇವೆ ಎಂದರು.
ಪಂಚಬೂತಗಳು ಯಾವಾಗಲೂ ಶಾಸ್ವತವಾಗಿರುತ್ತವೆ ಆದರೆ ಕಾಲ ಮಾತ್ರ ಯಾವಾಗಲೂ ಅನನ್ಯವಾಗಿರುತ್ತದೆ. ಆದ್ದರಿಂದ ಯಾವ ಕಾಲಘಟದಲ್ಲಿ ಏನು ನಡೆಯುತ್ತದೆ ಎನ್ನುವುದನ್ನು ತೆಗೆದು ಕೊಂಡಾಗ ಹನ್ನೆರಡನೆ ಶತಮಾನದಲ್ಲಿ ಬಸವಣ್ಣ ಹುಟ್ಟಿ ದೊಡ್ಡ ಬದಲಾವಣೆ ತರಲು ಪ್ರಯತ್ನಿಸುತ್ತಾರೆ. ಬಸವಣ್ಣ ಅಂದಿಗೂ ಇಂದಿಗೂ ಪ್ರಸ್ತುತ ಅಂದರೆ ಅವತ್ತೂ ಮೂಡನಂಬಿಕೆ, ಅಸಮಾನತೆ ಇತ್ತು ಈಗಲೂ ಇದೆ. ಅದಕ್ಕೆ ಬಸವಣ್ಣನ ವಚನಗಳು ಪರಿಹಾರ ಕೊಡುತ್ತವೆ. ಹೀಗಾಗಿ ಬಸವಣ್ಣ ಈಗಲೂ ಪ್ರಸ್ತುತರಾಗಿದ್ದಾರೆ.
ಸಮಾಜದಲ್ಲಿ ಮೂಲಭೂತ ಬದಲಾವಣೆ ಮಾಡಿದವರು ಯಾವುದೇ ಸಂಸ್ಥೆಯಲ್ಲ ವ್ಯಕ್ತಿಗಳು, ನ್ಯೂಟನ್, ಸಾಕ್ರೆಟಿಸ್, ಕ್ರಿಸ್ತ, ಮಹಮದ್ ಪೈಗಂಬರ್, ಬಸವಣ್ಣ, ಬುದ್ದ ಎಲ್ಲರೂ ಬದಲಾವಣೆ ತಂದವರು. ಕ್ರಾಂತಿ ಮಾಡುವಾಗ ಎಲ್ಲರೂ ಒಂದೇ ರೀತಿ ಆಲೊಚನೆ ಮಾಡುತ್ತೇವೆ ಅವುಗಳನ್ನು ನಿಭಾಯಿಸುವಾಗ ವಿಭಾಗವಾಗುತ್ತೇವೆ. ಏಕ ವ್ಯಕ್ತಿ ಆಲೋಚನೆಗಳಿಂದ ಬದಲಾವಣೆ ಸಾಧ್ಯವಾಗಿದೆ. ಬಸವಣ್ಣ ದೇವರು ಮತ್ತು ಮನುಷ್ಯನ ನಡುವೆ ಮಧ್ಯವರ್ತಿಯನ್ನು ತೆಗೆದು ಹಾಕಿದ, ಅದಕ್ಕೆ ಲಿಂಗಪೂಜೆ ಮಾಡಿದ ಪರಮಾತ್ಮ ಮತ್ತು ಆತ್ಮ ಸಂಗಮ ಆಗಬೇಕು ಎಂದು ಹೇಳಿದ. ನಿಜವಾದ ಬಸವ ತತ್ವ ಆಚರಣೆ ಮಾಡುವುದು ಬಹಳ ಕಷ್ಟ ಇದೆ. ಅದನ್ನು ಮಾಡಲೇಬೆಕಾದಾಗ ಕೆಲವು ತತ್ವಗಳನ್ನು ಪಾಲಿಸಬೇಕಾಗುತ್ತದೆ. ಟೆನ್ ಕಮಾಂಡ್ ಮೆಂಟ್ ಪಾಲನೆ ಮಾಡಿದರೆ ನಾವು ಬಸವ ತತ್ವ ಪಾಲನೆ ಮಾಡಿದಂತೆ ಎಂದು ಹೇಳಿದರು.
ಶರಣರಲ್ಲಿ ಅಲ್ಲಮ ಪ್ರಭುವಿಗೆ ಸಾಟಿಯಾದವನು ಅಂಬಿಗರ ಚೌಡಯ್ಯ, ಅವರ ಒಂದು ವಚನ ಉಚ್ಚೆಯ ಬಚ್ಚಲಲಿ ಹುಟ್ಟುವುದು ಈ ಮಾನವ ಜನ್ಮ ಅಂತ ಹೇಳಿದ್ದಾನೆ. ಈ ರೀತಿ ಕಠೋರ ಸತ್ಯ ಯಾವ ತತ್ವವೂ ಹೇಳಿಲ್ಲ. ಅಂತಹ ಶರಣ ಸಾಹಿತ್ಯಕ್ಕೆ ನಾವೆಲ್ಲ ಸೇರಿದ್ದೇವೆ ಎನ್ನುವುದು ಹೆಮ್ಮೆ. ಬಸವಣ್ಣನವರನ್ನು ಅಪ್ರಸ್ತುತ ಮಾಡುವ ಹುನ್ನಾರ ನಿರಂತರವಾಗಿ ನಡೆಯುತ್ತಿದೆ. ಬಸವಣ್ಣನವರನ್ನು ಎಷ್ಟು ಕೆಳಗೆ ತಳ್ಳಲು ಪ್ರಯತ್ನಿಸುತ್ತಾರೆ ಅವರು ಅಷ್ಟು ಪುಟಿದು ಮೇಲೇಳುತ್ತಾರೆ. ಬಸವ ಪಥದಲ್ಲಿ ಹೋದರೆ ನಾವು ಕೂಡ ಬಸವಣ್ಣನ ಅನುಭವ ಮಂಟಪದ ಸವಿ ಸವಿಯಬಹುದು. ಸ್ವಾಮಿ ವಿವೇಕಾನಂದರು ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರ ಬದುಕುವವರು ಸಾಧಕ ಅಂತ ಹೇಳಿದ್ದಾರೆ.
ಹಿಂದಿನ ಪ್ರಧಾನಮಂತ್ರಿ ದೇವೇಗೌಡರು ನಮಗೆ ಆಡಳಿತದ ಅನುಭವ ಹೇಳಿದ್ದಾರೆ. ದೇವೇಗೌಡ ರಂತಹ ನಾಯಕರು ಇನ್ನಷ್ಟು ಸೇವೆ ಸಲ್ಲಿಸಿದ್ದರೆ ರಾಜ್ಯ ಮತ್ತು ದೇಶಕ್ಕೆ ಅನುಕೂಲವಾಗುತ್ತಿತ್ತು ಎಂದು ಹೇಳಿದರು.
ಗುರುರಾಜ ಕರ್ಜಗಿ ಅವರು ಎಲ್ಲರೂ ಪ್ರತಿನಿತ್ಯ ಅವರ ಮಾತು ಕೇಳುವಂತೆ ಮಾಡಿದ್ದಾರೆ. ಅವರು ವಚನ ಸಾಹಿತ್ಯದಿಂದ ಇನ್ನಷ್ಟು ಉತ್ತಮ ಸಾಹಿತ್ಯ ಹುಡುಕಿ ಬೆಳಕಿಗೆ ತರಲಿ, ಬಸವಣ್ಣನ ಬಸವ ಪಥ ನಿರಂತರ ಅವರ ತತ್ವದಲ್ಲಿ ನಿರಂತರ ಎಲ್ಲರೂ ಸಾಗೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಅಗರಿಗೆ ವಚನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿ ದಿವ್ಯ ಸಾನಿಧ್ಯ ವಹಿಸಿದ್ದರು. ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಕಾನೂನು ಸಚಿವ ಎಚ್.ಕೆ.ಪಾಟೀಲ್ ವಚನಶ್ರೀ ಪ್ರಶಸ್ತಿ ನೀಡಿದರು. ಸಂಸದ ಡಾ. ಮಂಜುನಾಥ, ಉದ್ಯಮಿ ಹಾಗೂ ಸಾಹಿತಿ ಷಡಕ್ಷರಿ, ಬಸವ ವೇದಿಕೆಯ ಸಿ. ಸೋಮಶೇಖರ ಉಪಸ್ಥಿತರಿದ್ದರು.



