Belagavi NewsBelgaum NewsKannada NewsKarnataka NewsPolitics

*ಎಸ್‌ಸಿಪಿ/ಟಿಎಸ್‌ಪಿ ಯೋಜನೆಗಳು ಸಮರ್ಪಕ‌ವಾಗಿ ಅನುಷ್ಠಾನವಾಗಲಿ: ಡಾ.ಮೂರ್ತಿ.ಎಲ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಮುದಾಯದ ಕಲ್ಯಾಣಕ್ಕಾಗಿ ಸರಕಾರ ರೂಪಿಸಿರುವ ವಿವಿಧ ಯೋಜನೆಗಳು‌ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವುದರ ಜೊತೆಗೆ ಅರ್ಹರಿಗೆ ಸವಲತ್ತುಗಳು ದೊರಕುವಂತಾಗಬೇಕು.  ಈ ಕಾರ್ಯದಲ್ಲಿ ಉದಾಸೀನ ತೋರುವ ಅಧಿಕಾರಿ, ಸಿಬ್ಬಂದಿಗಳ‌ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಕರ್ನಾಟಕ ರಾಜ್ಯ ಅನುಸೂಚಿತ ‌ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಡಾ.ಮೂರ್ತಿ.ಎಲ್  ಅವರು ತಿಳಿಸಿದರು.

ಸುವರ್ಣ ವಿಧಾನ ಸೌಧದಲ್ಲಿ ಸೋಮವಾರ(ಏ.27) ಜರುಗಿದ ಅನುಸೂಚಿತ ಜಾತಿ, ಬುಡಕಟ್ಟುಗಳ ಜಿಲ್ಲಾ‌ ಮಟ್ಟದ ಪ್ರಗತಿ‌ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

Home add -Advt

ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರ ಹಂತದಲ್ಲಿನ ನ್ಯಾಯಲಯದಲ್ಲಿರುವ ರಸ್ತೆ,‌ಭೂ ವ್ಯಾಜ್ಯಗಳಿಗೆ ಸಂಬಂಧಿಸಿದಂತಹ ಪ್ರಕರಣಗಳನ್ನು ತ್ವರಿತವಾಗಿ ವಿಲೇ ಮಾಡಬೇಕು. ಕಂದಾಯ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪ.ಪಂಗಡದ ಸಮುದಾಯದವರಿಗೆ ಅಗತ್ಯವಿರುವ ಸ್ಮಶಾನಕ್ಕಾಗಿ ಭೂಮಿಯನ್ನು ಮಂಜೂರು ಮಾಡಲು ಕ್ರಮ ವಹಿಸಬೇಕು ಎಂದರು.

ದೌರ್ಜನ್ಯ ಪ್ರಕರಣಗಳ ಕುರಿತು ದೂರು ದಾಖಲಿಸಲು ವಿಳಂಬವಾಗುತ್ತಿದೆ. ದೌರ್ಜನ್ಯ ನಿಯಂತ್ರಣ ಸಮಿತಿ‌ ಸಭೆಗಳನ್ನು ನಿಯಮಿತವಾಗಿ ಜರುಗಿಸಿ. ದೌರ್ಜನ್ಯ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮವಾಗುವಂತೆ ನಿಗಾವಹಿಸಬೇಕು. ದೌರ್ಜನ್ಯ ಪ್ರಕರಣಗಳನ್ನು‌ ಕಾಲಮಿತಿಯೊಳಗಾಗಿ ಇತ್ಯರ್ಥ ಪಡಿಸಬೇಕು. ದೌರ್ಜನ್ಯ ಸಮಿತಿ‌ ಸಭೆ ಹಾಗೂ ಮ್ಯಾನುವಲ್‌ ಸ್ಕ್ಯಾವೆಂಜರ್ ಸಮಿತಿ ಸಭೆಗಳನ್ನು ಪ್ರತ್ಯೇಕವಾಗಿ ಜರುಗಿಸಲು ತಿಳಿಸಿದರು.

ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ  ಸರಕಾರದ ಯೋಜನೆಗಳ‌‌ ಸೌಲಭ್ಯಗಳು ಅರ್ಹ ಎಲ್ಲ ಫಲಾನುಭವಿಗಳಿಗೆ ದೊರಕಬೇಕು. ಪ್ರತಿ ಬಾರಿ ಸೌಲಭ್ಯ ಪಡೆದಂತಹ ಫಲಾನುಭವಿಗಳಿಗೆ ಸೌಲಭ್ಯ ವಿತರಿಸದೇ ಅರ್ಹ ಎಲ್ಲರಿಗೂ ದೊರಕುವಂತಾಗಬೇಕು ಎಂದರು.

ಅರಣ್ಯ ಹಾಗೂ ಅರಣ್ಯ ಅಂಚಿನಲ್ಲಿರುವ ಜನರನ್ನು ಒಕ್ಕಲೆಬಿಸಬಾರದು, ಅಲ್ಲಿಯ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಡುವ‌ ನಿಟ್ಟಿನಲ್ಲಿ ಮಾನವೀಯತೆ ಆಧಾರದ ಮೇಲೆ ಚಿಂತಿಸಲು ತಿಳಿಸಿದರು.  

ಜಿಲ್ಲೆಯ ಅನುದಾನಿತ‌ ಶಾಲೆಗಳ ವಿವರ, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ,‌ ಬ್ಯಾಕ್ ಲಾಗ್ ಹುದ್ದೆಗಳ ವಿವರ ಗಳನ್ನು ಪರಿಶೀಲಿಸಬೇಕು. ವಿವಿಧ ಇಲಾಖೆಗಳಿಂದ ಕೈಗೊಳ್ಳಲಾಗುವ ಕಾಮಗಾರಿಗಳಲ್ಲಿ ಪರಿಶಿಷ್ಟ ಸಮುದಾಯದ ಗುತ್ತಿಗೆದಾರರಿಗೆ ನೀಡಿದ ಕಾಮಗಾರಿಗಳ ವಿವರಗಳನ್ನು ಸಲ್ಲಿಸಲು ತಿಳಿಸಿದರು.

ಪರಿಶಿಷ್ಟರಿಗಾಗಿ ವಿವಿಧ ಅಭಿವೃದ್ಧಿ ನಿಗಮಗಳಿಂದ‌ ಜಾರಿ‌ಯಲ್ಲಿರುವ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ವಿವಿಧ ಯೋಜನೆಗಳಲ್ಲಿ ಬಿಡುಗಡೆಯಾದಂತಹ ಅನುದಾನ ವ್ಯಪಗತವಾಗದಂತೆ ನಿಗಾವಹಿಸಬೇಕು. ಇಲಾಖೆ‌ ವತಿಯಿಂದ ನಿರ್ಮಿಸಲಾಗಿರುವ ಭವನಗಳ‌ ಸ್ಥಿತಿಗತಿ ಹಾಗೂ ನಿರ್ವಹಣೆ ಕುರಿತು ಮಾಹಿತಿ ಪಡೆದರು.

ಎಸ್.ಸಿ.ಪಿ./ಟಿ.ಎಸ್.ಪಿ. ಯೋಜನೆಯಡಿ‌ ಬಿಡುಗಡೆ ಆಗುವಂತಹ ಅನುದಾನದಲ್ಲಿ ಕೈಗೊಳ್ಳಲಾಗುವ ಕಾಮಗಾರಿಗಳು ಪಾರದರ್ಶಕತೆಯಿಂದ ಕೂಡಿರಬೇಕು. ಈ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗಳ ಸವಿವರ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಲು ಡಾ.ಮೂರ್ತಿ.ಎಲ್ ಸೂಚಿಸಿದರು.

ಎಸ್.ಸಿ.ಪಿ./ಟಿ.ಎಸ್.ಪಿ. ಯೋಜನೆಯಡಿ ಕೈಗೊಳ್ಳಲಾಗುವ ಕಾಮಗಾರಿಗಳನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಿ ಅನುದಾನ ವ್ಯಪಗತವಾಗದಂತೆ ನಿಗಾವಹಿಸಬೇಕು. ಈ ಕಾರ್ಯದಲ್ಲಿ ನಿರ್ಲಕ್ಷ್ಯ ತೋರದೆ ಕಾಮಗಾರಿ ಹಾಗೂ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಅಧ್ಯಕ್ಷರಾದ ಡಾ.ಮೂರ್ತಿ.ಎಲ್ ಅವರು ಸೂಚನೆ ನೀಡಿದರು.

ಜಿಲ್ಲಾ‌ಪಂಚಾಯತ ಮುಖ್ಯ ಕಾರ್ಯನಿರ್ವಾಹಕ‌ ಅಧಿಕಾರಿ ರಾಹುಲ್ ಶಿಂಧೆ ಅವರು ಮಾತನಾಡಿ, ಅರಣ್ಯ ಇಲಾಖೆ ವತಿಯಿಂದ ಅರಣ್ಯ ಅಂಚಿನಲ್ಲಿರುವ ಜನರಿಗೆ ತಿಳುವಳಿಕೆ ನೀಡುವ ಕಾರ್ಯವಾಗಬೇಕು. ದೌರ್ಜನ್ಯ ಸಮಿತಿ ಸಭೆಗೂ ಮುಂಚೆ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪೂರ್ವಭಾವಿಯಾಗಿ ಸಭೆ ಜರುಗಿಸಿ‌ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಇದೇ ರೀತಿ ತಾಲೂಕು‌ ಮಟ್ಟದಲ್ಲಿಯೂ ಕ್ರಮ‌ ವಹಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಆಯೋಗದ ಸದಸ್ಯರುಗಳಾದ ದಿವಾಕರ ಎನ್,  ಸುನೀಲ ಉಕ್ಕಲಿ,  ಶ್ರೀಮತಿ ಗೀತಾ ಥಾವಂಶಿ, ಕಾರ್ಯದರ್ಶಿ  ಡಾ.ಶಿವರಾಮು ಎಚ್.ಎಸ್. ಸಂಶೋಧನಾ ಅಧಿಕಾರಿ ಸಿಂಧೂ ಎಚ್.ಎಸ್. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೆಶಕ ರಾಮನಗೌಡ ಕನ್ನೋಳಿ, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಎಂ.ಎಂ.ಬಸರಗಿ, ಎ.ಸಿ.ಪಿ.‌ನಾರಾಯಣ ಭರಮಣಿ, ಉಪವಿಭಾಗಾಧಿಕಾರಿಗಳಾದ ಪ್ರವೀಣ ಜೈನ್, ಎಸ್.ಎಸ್.ಸಂಪಗಾವಿ, ಶ್ರವಣ ನಾಯಕ‌ ಸೇರಿದಂತೆ‌ ವಿವಿಧ ಇಲಾಖೆ‌ ಅಧಿಕಾರಿಗಳು ಹಾಜರಿದ್ದರು.

Related Articles

Back to top button