CrimeKarnataka NewsLatest

*ಪತ್ನಿಯನ್ನು ಲಾಡ್ಜ್ ಗೆ ಕರೆದೊಯ್ದು ಕೊಲೆಗೈದು ಪರಾರಿಯಾದ ಪತಿ*

ಪ್ರಗತಿವಾಹಿನಿ ಸುದ್ದಿ: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಪತಿ ಮಹಾಶಯ ಲಾಡ್ಜ್‌ಗೆ ಕರೆದೊಯ್ದು ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಲಾಡ್ಜ್‌ನಲ್ಲಿ ಈ ಘಟನೆ ನಡೆದಿದೆ. ಗೌರಿಬಿದನೂರು ತಾಲೂಕಿನ ನಗರಗೆರೆ ಗ್ರಾಮದ ವಿದ್ಯಾ (23) ಕೊಲೆಯಾದ ಮಹಿಳೆ. ಪತಿ ಆನಂದ್ ಕೊಲೆ ಮಾಡಿ ಪರಾರಿಯಾಗಿದ್ದಾನೆ.

Home add -Advt

ಐಡಿ ಕಾರ್ಡ್‌ನ ಟ್ಯಾಗ್‌ನಿಂದ ಕತ್ತು ಬಿಗಿದು ಉಸಿರುಗಟ್ಟಿಸಿ ಪತ್ನಿ ವಿದ್ಯಾಳನ್ನು ಕೊಲೆ ಮಾಡಲಾಗಿದೆ. ಬಳಿಕ ಆಕೆಯ ಮೊಬೈಲ್ ತೆಗೆದುಕೊಂಡು ಆನಂದ್ ಲಾಡ್ಜ್‌ನಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾ ಹಾಗೂ ಆನಂದ್ ಸುಮಾರು ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಒಂದು ಗಂಡು ಮಗುವಿದೆ. ದಂಪತಿ ದೊಡ್ಡಬಳ್ಳಾಪುರ ನಗರದ ಗಾಂಧಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಳೆದ ಆರು ತಿಂಗಳಿಂದ ದಂಪತಿ ನಡುವೆ ಕೌಟುಂಬಿಕ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾ ಸುಮಾರು ಎರಡು ತಿಂಗಳ ಹಿಂದೆ ಗಂಡನಿಂದ ದೂರವಾಗಿ ಬೆಂಗಳೂರಿನ ಪಿಜಿಯೊಂದರಲ್ಲಿ ವಾಸವಾಗಿದ್ದರು.

ಪತ್ನಿ ಕಾಣೆಯಾಗಿದ್ದಾಳೆ ಎಂದು ಆನಂದ್ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಸುಮಾರು 20 ದಿನಗಳ ಹಿಂದೆ ವಿದ್ಯಾಳನ್ನು ಪೊಲೀಸರು ಕರೆಸಿ ಇಬ್ಬರಿಗೂ ಬುದ್ಧಿವಾದ ಹೇಳಿ ಮತ್ತೆ ಗಂಡನ ಜೊತೆ ಕಳುಹಿಸಿದ್ದರು. ಆದರೆ ಬುಧವಾರ ವಿದ್ಯಾಳನ್ನು ಲಾಡ್ಜ್‌ಗೆ ಕರೆದುಕೊಂಡು ಬಂದ ಆನಂದ್, ಅಲ್ಲಿಯೇ ಆಕೆಯನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.

ಘಟನೆ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಅಪತ್ತೆಯಾಗಿರುವ ಆರೋಪಿ ಆನಂದ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.


Related Articles

Back to top button