Latest

ಮಾಜಿ ಪ್ರಧಾನಿಯವರಿಗೆ ಸರ್ಕಾರದಿಂದ ಕಾಟಾಚಾರಕ್ಕೆ ಕರೆ; ಕಮಲದವರ ಕಣ್ಣಿಗೆ ಕಾಮಾಲೆ ಬಡಿದಿದೆಯಾ ಹೇಗೆ?; JDS ಆಕ್ರೋಶ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಆಹ್ವಾನಿಸದೇ ರಾಜ್ಯ ಸರ್ಕಾರ ಅವಮಾನ ಮಾಡಿದೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಶಿಷ್ಟಾಚಾರದ ರೀತಿಯಲ್ಲಿ ಸರ್ಕಾರ ಆಹ್ವಾನಿಸದೇ ಕೇವಲ ಕಾಟಾಚಾರಕ್ಕೆ ಆಹ್ವಾನಿಸಿದೆ. ಇದು ಮಾಜಿ ಪ್ರಧಾನಿಯವರಿಗೆ ಸರ್ಕಾರ ತೋರುವ ಗೌರವವೇ? ಎಂದು ಜೆಡಿಎಸ್ ಕಿಡಿಕಾರಿದೆ. ರಾಜ್ಯ ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಂಡಿರುವ ಬೆನ್ನಲ್ಲೇ ಸರಣಿ ಟ್ವೀಟ್ ಮೂಲಕ ಗುಡುಗಿರುವ ಜೆಡಿಎಸ್ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದೆ.

ಮುಖ್ಯಮಂತ್ರಿಗಳು, ಮಾಜಿ ಪ್ರಧಾನಿಗಳಿಗೆ ಕರೆ ಮಾಡಿ ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನಿಸಿ ಪತ್ರ ಬರೆದಿದ್ದಾರೆ ಎಂದು ಬಿಜೆಪಿ ಟ್ವೀಟಿಸಿದೆ. ಸರಿ; ನವೆಂಬರ್‌ 11ರ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು, ಪತ್ರ ಬರೆದಿದ್ದು ಯಾವಾಗ? ಆ ಪತ್ರವನ್ನು ಮಾಜಿ ಪ್ರಧಾನಿಗಳ ನಿವಾಸಕ್ಕೆ ತಲುಪಿಸಿದ್ದು ಯಾವಾಗ? ಕಮಲದವರ ಕಣ್ಣಿಗೆ ಕಾಮಾಲೆ ಬಡಿದಿದೆಯಾ, ಹೇಗೆ? ಘನವೇತ್ತ ಮಾನ್ಯ ಮುಖ್ಯಮಂತ್ರಿಗಳು ಬರೆದ ʼಘನವೇತ್ತʼ ಪತ್ರವನ್ನೊಮ್ಮೆ ʼಸಂಘಸಂಸ್ಕಾರʼದ ಬಿಜೆಪಿಗರು ಗಮನಿಸಬೇಕು. ಪತ್ರದಲ್ಲಿ ಮಾಜಿ ಪ್ರಧಾನಿಗಳ ಹೆಸರೆಲ್ಲಿ ಬರೆಯಲ್ಪಟ್ಟಿದೆ? (ಕೊನೆಯಲ್ಲಿ) ಕನ್ನಡ ನೆಲದ ಏಕೈಕ ಪ್ರಧಾನಿಯಾಗಿದ್ದ ಮೇರು ನಾಯಕರಿಗೆ ಪತ್ರ ಬರೆಯುವ ಸಂಸ್ಕಾರ, ಶಿಷ್ಟಾಚಾರ ಇದೇನಾ? ಎಂದು ಪ್ರಶ್ನಿಸಿದೆ.

ಮರುದಿನ 12.50ರ ಸಮಾರಂಭಕ್ಕೆ ರಾತ್ರಿ 9 ಗಂಟೆಗೆ ಮಾಜಿ ಪ್ರಧಾನಿಗಳಿಗೆ ಕಾಟಾಚಾರದ ಕರೆ ಮಾಡಿದ ಮುಖ್ಯಮಂತ್ರಿಗಳು, ತಾವು ಬರೆದ ಪತ್ರವನ್ನು ತಲುಪಿಸಿದ್ದು ಮಧ್ಯರಾತ್ರಿ 12.30 ಗಂಟೆಗೆ!! ಹಾಗಾದರೆ, ಅವರ ಮೊದಲ ಪತ್ರ ಹೋಗಿದ್ದು ಯಾರಿಗೆ? ಇಂಥ ಹಿರಿಯರ ವಿಷಯದಲ್ಲಿ ಜಬಾಬ್ದಾರಿ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ವರ್ತಿಸುವ ರೀತಿ ಹೀಗೇನಾ?

ಇದರಲ್ಲಿ ಸುಳ್ಳಾಡುವುದೇನಿದೆ? ಮುಖ್ಯಮಂತ್ರಿಗಳು ಬರೆದ ಪತ್ರವನ್ನು ಇಲ್ಲಿ ಲಗತ್ತಿಸಲಾಗಿದೆ. ಹಾಗಾದರೆ, ಮುಖ್ಯಮಂತ್ರಿಗಳೇ ಎಲ್ಲವನ್ನೂ ಹೇಳಲಿ. ಜನರಿಗೂ ಸತ್ಯ ಯಾವುದು? ಸುಳ್ಳು ಯಾವುದು? ಎಂದು ಜೆಡಿಎಸ್ ಆಹ್ವಾನ ಪತ್ರಿಕೆಯನ್ನು ಲಗತ್ತಿಸಿ ಪ್ರಶ್ನಿಸಿದೆ.

ಕುಟುಂಬ ರಾಜಕಾರಣ ಅಂತೀರಾ? ಗುಜರಾತಿನಿಂದ ಶುರುವಾಗಿ ದೆಹಲಿವರೆಗೂ ಹಬ್ಬಿ, ಬಿಸಿಸಿಐ ಒಳಹೊಕ್ಕಿ ಕೂತಿದ್ದು ಯಾರ ಕುಟುಂಬ?
ಕರ್ನಾಟಕದಲ್ಲಿ ಬೆಳೆದು ನಿಂತ ಬಿಜೆಪಿ ವಂಶವೃಕ್ಷಗಳೆಷ್ಟು? ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಗುಜರಾತ್ ನಿಂದ ಒಡಿಶಾವರೆಗೆ ವ್ಯಾಪಿಸಿರುವ ಬಿಜೆಪಿ ವಂಶವೃಕ್ಷಗಳ ಕೊಂಬೆಗಳ ಲೆಕ್ಕ ಬಿಚ್ಚಿಡಬೇಕೆ?

‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’; ಇದು ಭಾರತ ಕಂಡ ಪರಮ ಢೋಂಗೀ ಘೋಷಣೆ. ಇದಕ್ಕೆ ʼಸಬ್ ಕಾ ಸರ್ವನಾಶ್ʼ ಎಂದು ಸೇರಿದರೆ ಪರಿಪೂರ್ಣ. ಕರ್ನಾಟಕದಲ್ಲಿ ಶಿಕ್ಷಣ, ಧರ್ಮ, ಜಾತಿ, ಆಚಾರ, ವಿಚಾರ, ಆಹಾರ, ಉಡುಪುಗಳ ವಿಷಯದಲ್ಲೂ ಬಿಜೆಪಿ ಮಾಡಿದ್ದು ಸಾಕ್ಷಾತ್ ಸರ್ವನಾಶವೇ.

ಇನ್ನು ಕನ್ನಡದ ಆಸ್ಮಿತೆ ಪ್ರಶ್ನೆ. ಬಿಜೆಪಿಗೆ ನಾಚಿಕೆಯಾಗಬೇಕು, ಹಿಂದಿ ಹೇರಿಕೆ ವಾಕರಿಕೆ ಬರುವಷ್ಟಿದೆ. ಉದ್ಯೋಗದಲ್ಲಿ ಕನ್ನಡಿಗರಿಗೆ ಪಂಗನಾಮ, ಈ ನೆಲದ ಸಂಸ್ಕೃತಿ, ಭಾಷೆ, ಆಚಾರ-ವಿಚಾರಗಳನ್ನು ಹತ್ತಿಕ್ಕಿ,ಇಡೀ ದಕ್ಷಿಣ ಭಾರತೀಯರನ್ನು ದೆಹಲಿ ಗುಲಾಮರನ್ನಾಗಿ ಮಾಡಲು ಹೊರಟಿರುವ ಬಿಜೆಪಿಗರಾ ಕನ್ನಡದ ಮಣ್ಣಿನ ಮಕ್ಕಳನ್ನು ಗುರುತಿಸಿದ್ದು? ಎಂದು ಆಕ್ರೋಶ ವ್ಯಕ್ತಪಡಿಸಿದೆ.

ವಿಚಾರಣಾಧೀನ ಕೈದಿ ಸಾವು ಪ್ರಕರಣ: CBI ತನಿಖೆಗೆ ವಹಿಸುವಂತೆ ಆಪ್ ಆಗ್ರಹ

https://pragati.taskdun.com/politics/belagavilockup-death-casecbiaapcid/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button